ಸಿನಿಮಾ ಸುದ್ದಿ: ಕಿಚ್ಚ ಸುದೀಪ್ ಹಾಗೂ ಹಿರಿಯ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಜಟಾಪಟಿ ಮುಗಿಯೋ ಹಾಗೇ ಕಾಣಿಸುತ್ತಿಲ್ಲ. ಕಿಚ್ಚ ಸುದೀಪ್ ಅಡ್ವಾನ್ಸ್ ತೆಗೆದುಕೊಂಡು ಸಿನಿಮಾ ಮಾಡಿಕೊಡುತ್ತಿಲ್ಲ ಅಂತ ನಿರ್ಮಾಪಕ ಕುಮಾರ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಕಿಚ್ಚ ಸುದೀಪ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಪರ ವಕೀಲರು ₹10 ಕೋಟಿ ಮಾನಹಾನಿ ಹಾಗೂ ಭೇಷರತ್ ಕ್ಷಮೆ ಕೇಳುವಂತೆ ನೋಟಿಸ್ ಕಳುಹಿಸಿದ್ದಾರೆ.
ಈ ಸಂಬಂಧ ನಿರ್ಮಾಪಕ ಕುಮಾರ್ ರೊಚ್ಚಿಗೆದ್ದಿದ್ದಾರೆ. ಈ ಸಂಬಂಧ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಿನಿಮಾ ಮಾಡಿಕೊಡುವಂತೆ ಕೇಳಿಕೊಂಡಿದ್ದೇನೆ. ಸಾಕಷ್ಟು ಪ್ರಯತ್ನ ಪಟ್ಟಿದ್ದು, ಸ್ಪಂದನೆ ಸಿಗದೆ ಇದ್ದಾಗ ಬೇರೆ ವಿಧಿ ಇಲ್ಲದೆ ಪತ್ರಿಕಾಗೋಷ್ಠಿ ಮಾಡಿ ನೋವು ತೋಡಿಕೊಂಡಿದ್ದಾಗಿ ಹೇಳಿದ್ದಾರೆ.”ಕಿಚ್ಚ ಸುದೀಪ್ ಜೊತೆಗಿನ ವ್ಯವಹಾರದ ಬಗ್ಗೆ ಅವರ ಪತ್ನಿಗೆ ಹೇಳಿದ್ದೆ. ನಮ್ಮಿಬ್ಬರಿಗೂ ಸ್ನೇಹಿತರಾಗಿರುವ ರವಿಚಂದ್ರನ್ ಸರ್ ಅವರ ಮನೆಗೆ ಹೋಗಿ ಮನವಿ ಮಾಡಿಕೊಂಡಿದ್ದೆ. ಅವರು ಸುದೀಪ್ ಜೊತೆ ಮಾತಾಡಿದ್ದರು. ಆದರೂ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಮಾಧ್ಯಮದ ಮುಂದೆ ಬಂದಿದ್ದೇನೆ. ಈಗ ನೋಟಿಸ್ ಕಳಿಸಿದ್ದಾರೆ. ಅದನ್ನು ನಾನು ಎದುರಿಸುತ್ತೇನೆ. ಆದರೆ, ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘ ಸೇರಿದಂತೆ ಅಂಗ ಸಂಸ್ಥೆಗಳ ಹೇಳಿದಂತೆ ನಡೆದುಕೊಳ್ಳುತ್ತೇನೆ” ಎಂದು ನಿರ್ಮಾಪಕ ಪ್ರತಿಕ್ರಿಯಿಸಿದ್ದಾರೆ. ಇನ್ನು, ನಿರ್ಮಾಪಕ ಎನ್‌ಎಂ ಸುರೇಶ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ
. “ಎಂಎನ್ ಕುಮಾರ್ ಅವರ ಪುತ್ರ ಹೇಳಿದ ಮಾತನ್ನೇ ಹೇಳಿದ್ದೇನೆ. ಅಪ್ಪ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ನೋವು ತೋಡಿಕೊಂಡಿದ್ದರು. ಅದನ್ನೇ ಹೇಳಿದ್ದೇನೆ. ನನ್ನ ವೈಯಕ್ತಿಕ ಹೇಳಿಕ ಅಲ್ಲ. ಈಗ ನೋಟಿಸ್ ಕೊಟ್ಟಿದ್ದಾರೆ. ಒಬ್ಬ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ ಅಂದರೆ, ಕೊನೆವರೆಗೂ ಅವರ ಜೊತೆ ನಿಲ್ಲುತ್ತೇನೆ.” ಎಂದು ಎಂಎನ್ ಸುರೇಶ್ ಹೇಳಿದ್ದಾರೆ. ಫಿಲ್ಮ್ ಚೇಂಬರ್‌ನಲ್ಲಿ ಸಂಧಾನ ಸಭೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂತಹದ್ದೇ ಸಮಸ್ಯೆಯನ್ನು ಬಗೆಹರಿಸಲು, ಸಂಧಾನ ಮಾಡಲು ಕಮಿಟಿಯೊಂದು ಇದೆ. ಇದರಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್,ರವಿಚಂದ್ರನ್, ದೊಡ್ಡಣ್ಣ ಸೇರಿದಂತೆ ಶಿವಣ್ಣ ಇದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಅವರೇ ಮುಂದೆ ಬರಬೇಕು ಎನ್ನುವುದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಒತ್ತಾಯಿಸಿದ್ದಾರೆ.