Mandya: ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಟ್ಟಿಗೆ ಖಾರದ ಪುಡಿ ಎರಚಿ ಕಾರಿನಲ್ಲಿದ್ದ 55 ಸಾವಿರ ರೂಪಾಯಿ ದೋಚಿ ಪರಾರಿಯಾದ ಘಟನೆ ಮಂಡ್ಯದಲ್ಲಿ ನಡೆದಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಮಂಡ್ಯದ ಗುತ್ತಲು ನಿವಾಸಿ ವಿನೋದ್ ಕಾರಿನಲ್ಲಿ ಚಲಿಸುತ್ತಿರುವಾಗ ಈ ಘಟನೆ ನಡೆದಿದೆ. ಬೆಲ್ಲದ ವ್ಯಾಪಾರಿಯಾಗಿರುವ ವಿನೋದ್ ವ್ಯಾಪಾರ ಮುಗಿಸಿ, ಮಂಡ್ಯದಿಂದ ಮದ್ದೂರಿಗೆ ಹೋಗುವ ವೇಳೆ, ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಾರಿನ ಗಾಜಿನ ಮೇಲೆ ಮೊಟ್ಟೆ ಹೊಡೆದು, ಡ್ರೈವರ್ ಕಣ್ಣಿಗೆ ಖಾರದ ಪುಡಿ ಎರಚಿ, ನಗದು ದರೋಡೆ ಮಾಡಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ, ಮಹಜರು ಮಾಡಿ, ತನಿಖೆ ಆರಂಭಿಸಿದ್ದಾರೆ. ಇನ್ನು ಈ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಬೀದಿ ದೀಪವಿಲ್ಲದೇ ಕತ್ತಲು ಆವರಿಸಿದೆ. ಪ್ರತಿದಿನ ಕತ್ತಲಾದ ಬಳಿಕ, ಈ ದಾರಿಯಲ್ಲೇ ಹೋಗಲೇಬೇಕಾದ ಪರಿಸ್ಥಿತಿ ಇರುವವರು, ಜೀವ ಭಯದಲ್ಲೇ ಮನೆ ಸೇರುತ್ತಿದ್ದಾರೆ.
ಈ ಕಾರಣಕ್ಕೆ ಯುವ ಮುಖಂಡ ಶಾಮಿಯಾನ ನಾರಾಯಣ, ಸರಿಯಾದ ಬೀದಿ ದೀಪಗಳನ್ನು ಹಾಕಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.