Monday, March 31, 2025

Latest Posts

ಸ್ಟಾಲಿನ್‌ಗೆ ಖೆಡ್ಡಾ ತೋಡಲು ಶಾ ಮಾಸ್ಟರ್‌ ಪ್ಲಾನ್..!‌ : ಬಿಜೆಪಿ ಕಟ್ಟಿಹಾಕುವ ಡಿಎಂಕೆ ಕನಸಿಗೆ ಎಳ್ಳು ನೀರು..!

- Advertisement -

National Political News: ಸದಾ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಾ, ಅದರ ನಿರ್ಣಯಗಳನ್ನು ವಿರೋಧಿಸುತ್ತಾ ಬಂದಿರುವ ತಮಿಳುನಾಡಿನ ಡಿಎಂಕೆಗೆ ಟಕ್ಕರ್‌ ಕೊಡಲು ಇದೀಗ ಬಿಜೆಪಿ ಮುಂದಾಗಿದೆ. ಹೇಗಾದರೂ ಮಾಡಿ ಹಲವು ವರ್ಷಗಳ ಬಳಿಕ ಡಿಎಂಕೆ ಮಣಿಸಿ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯುವ ತವಕದಲ್ಲಿರುವ ಬಿಜೆಪಿಯು ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ದಟ್ಟವಾಗಿವೆ. ಅಲ್ಲದೆ 2 ವರ್ಷಗಳ ಬಳಿಕ ಮತ್ತೆ ಎರಡೂ ಪಕ್ಷಗಳು ಒಂದಾಗುವ ಸಾಧ್ಯತೆಗಳಿವೆ.

ಸ್ಟಾಲಿನ್‌ಗೆ ಚಾಣಕ್ಯನ ಖೆಡ್ಡಾ..!

ಇದಕ್ಕೆ ಪೂರವೆಂಬಂತೆ ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ದೆಹಲಿಗೆ ದೌಡಾಯಿಸಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್‌ ಶಾ ಅವರನ್ನು ಭೇಟಿಯಾಗಿರುವುದು ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ಒಂದು ಕಾಲದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಎಐಎಡಿಎಂಕೆ ಈಗ ಮತ್ತೆ ಬಿಜೆಪಿಯ ಜೊತೆ ಸೇರುವುದಕ್ಕೆ ಸಿದ್ದವಾದಂತಿದೆ. ಇನ್ನೂ ಎಐಎಡಿಎಂಕೆಯು ಬಿಜೆಪಿಗೆ ಹತ್ತಿರವಾಗುತ್ತಿರುವ ವಿಚಾರವೇನು ಹಳೆಯದಲ್ಲ. ಅಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಚುನಾವಣೆ ಎದುರಿಸಿ, ಆದ ಭಾರೀ ಗರ್ವಭಂಗ, ಮುಖಭಂಗಗಳೇ, ಬಿಜೆಪಿ ಹಾಗೂ ಎಐಡಿಎಂಕೆಗೆ ಮೈತ್ರಿಯ ಮೊಳಕೆಯನ್ನು ಮತ್ತೆ ಚಿಗುರುವಂತೆ ಮಾಡಿವೆ. ಅದರ ಮುಂದುವರಿದ ಭಾಗವೇ, ದೆಹಲಿಯಲ್ಲಿ ಶಾ ಮತ್ತು ಎಡಪ್ಪಾಡಿ ಭೇಟಿಯಾಗಿದೆ. ಈ ಮೂಲಕ ಡಿಲಿಮಿಟೇಷನ್‌, ತ್ರಿಭಾಷಾ ಸೂತ್ರ ಹಾಗೂ ರೂಪಾಯಿ ಚಿಹ್ನೆಯ ವಿಚಾರದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಯತ್ನಿಸುತ್ತಿರುವ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ ಖೆಡ್ಡಾ ತೋಡಲು ಶಾ ಮಾಸ್ಟರ್‌ ಪ್ಲಾನ್‌ ರೂಪಿಸಿದ್ದಾರೆ.

ಶಾಗೆ ಶಾಕ್‌ ಕೊಟ್ಟ ಎಡಪ್ಪಾಡಿ..

ಇನ್ನೂ ಹಲವು ವರ್ಷಗಳ ಬಳಿಕ ಸೇರಿದ್ದ ಉಭಯ ನಾಯಕರು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಅಲ್ಲದೆ ದೋಸ್ತಿ ಕುರಿತು ನಡೆದ ಸಮಾಲೋಚನೆಯಲ್ಲಿ ಪ್ರಮುಖವಾಗಿ ಎಐಎಡಿಎಂಕೆ ಅಂದರೆ ತಮ್ಮ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಬೇಕು. ಬಿಜೆಪಿಯು ಇನ್ನೂ ಅಷ್ಟೊಂದು ಜನರಿಗೆ ತಲುಪಿಲ್ಲ, ಗ್ರಾಮೀಣ ಭಾಗದಲ್ಲಿ ಇನ್ನೂ ಸಂಘಟನೆಯಾಗಬೇಕಿದೆ. ಹೀಗಾಗಿ ನಮಗೂ ಈ ಚುನಾವಣೆಯ ನಾಯಕತ್ವ ಅನಿವಾರ್ಯವಾಗಿದೆ ಎನ್ನುವುದನ್ನು ಎಡಪ್ಪಾಡಿ ಶಾ ಅವರಿಗೆ ಮನವರಿಕೆ ಮಾಡಿದ್ದಾರೆ. ಅಲ್ಲದೆ ಎಐಎಡಿಎಂಕೆ ನಾಯಕರಿಗೆ ಪ್ರಾಮುಖ್ಯತೆ ನೀಡುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಪ್ರಭಾವವನ್ನು ತಗ್ಗಿಸಬೇಕು. ಬೇಕಾದರೆ ಒಂದು ಸಮಿತಿಯನ್ನು ರಚಿಸಬಹುದು ಆದರೆ ಅದರಲ್ಲೂ ಸಹ ಕೇಸರಿ ಪಡೆಗೆ ಹೆಚ್ಚು ಮಾನ್ಯತೆ ಇರಬಾರದು ಎನ್ನುವ ಷರತ್ತುಗಳನ್ನು ಎಡಪ್ಪಾಡಿ ಪಳನಿಸ್ವಾಮಿ ಅಮಿತ್‌ ಶಾ ಅವರೆದುರು ಇಟ್ಟಿದ್ದಾರೆ. ಅಲ್ಲದೆ ಎಐಎಡಿಎಂಕೆ ನಾಯಕನ ಮಾತು ಕೇಳಿ ಗೃಹ ಸಚಿವ ಶಾ ದಂಗಾಗಿ ಹೋಗಿದ್ದಾರೆ. ಇನ್ನೂ ಈ ತಿಂಗಳ ಆರಂಭದಲ್ಲಿ, ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ವಿಚಾರಿಸಿದ್ದಾಗ, ಆರು ತಿಂಗಳು ಕಾದುನೋಡಿ ಎಂದಿದ್ದ ಪಳನಿಸ್ವಾಮಿ ಆರು ತಿಂಗಳಾಗುವ ಮುನ್ನವೇ ಮೈತ್ರಿಗೆ ಮುನ್ನುಡಿ ಬರೆದಿದ್ದಾರೆ.

ಬಿಜೆಪಿ ಬೆಳೆಸಿದವನ ಬಿಡಲಾದೀತೆ..?

ಅಂದಹಾಗೆ ತಮ್ಮ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ನೇರವಾಗಿ ಎಂಟ್ರಿಕೊಟ್ಟಿದ್ದು ತಮಿಳುನಾಡಿನ ರಾಜಕೀಯಕ್ಕೆ. ಯುವ ಸಮೂಹದ ಅಕರ್ಷಣೆಗೆ ಒಳಗಾಗಿರುವ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯನ್ನು ಸಂಘಟಿಸುವ ಭಾಗವಾಗಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿ ಗಮನಸೆಳೆದಿದ್ದರು. ಇನ್ನೂ ಕಳೆದ 2023 ರಲ್ಲಿ ಬಿಜೆಪಿಯಿಂದ ಎಐಎಡಿಎಂಕೆ ಹೊರಹೋಗಿತ್ತು. ಇಂಥ ಕಷ್ಟದ ಸಮಯದಲ್ಲಿ ಅಣ್ಣಾಮಲೈ ಬಿಜೆಪಿಗೆ ನೆರವಾಗಿದ್ದರು. ಅಣ್ಣಾಮಲೈ ನಡೆಸಿದ್ದ ಪಾದಯಾತ್ರೆಯು ಮುಂದೆ ಎದುರಾಗಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವೋಟ್‌ ಶೇರ್‌ ಹೆಚ್ಚಾಗಲು ಕಾರಣವಾಗಿತ್ತು. ಅಂದಹಾಗೆ ಎಡಪ್ಪಾಡಿ ಪ್ರಸ್ತಾಪಿಸಿರುವ ಈ ಅಣ್ಣಾಮಲೈ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ದೇಶದ ಯುವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಣ್ಣಾಮಲೈ ಅವರನ್ನು ಸೈಡಿಗೆ ಸರಿಸಿ ಎಂದು ಪಳನಿಸ್ವಾಮಿ ಹೇಳಿರುವುದು ಅಮಿತ್‌ ಶಾಗೆ ನಿಜಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಡಿಎಂಕೆಗೆ ಪ್ರಬಲ ಪೈಪೋಟಿ ಲೆಕ್ಕಾಚಾರ..

ಇನ್ನೂ ಮುಖ್ಯವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ, ತಮಿಳುನಾಡಿನಲ್ಲಿ 23 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯು ಸ್ಪರ್ಧಿಸಿತ್ತು. ಇವುಗಳಲ್ಲಿ 19 ಸ್ಥಾನಗಳಲ್ಲಿ ನೇರವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೊತೆಗೆ 4 ಸ್ಥಾನಗಳಲ್ಲಿ ಮಿತ್ರಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಇದರಲ್ಲಿ ಬಿಜೆಪಿ ಒಟ್ಟು ಶೇ. 11.24 ರಷ್ಟು ಮತಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿತ್ತು. ಅಂದಹಾಗೆ ಇದು ಕಳೆದ 2019ರಲ್ಲಿ ಗಳಿಸಿದ್ದ ಶೇ.3.6 ರಷ್ಟು ಮತ ಹಂಚಿಕೆಗಿಂತ ಸುಮಾರು ನಾಲ್ಕು ಪಟ್ಟು ಅಧಿಕವಾಗಿದೆ. ಆದರೆ, ಮತ್ತೊಂದೆಡೆ ಎಐಎಡಿಎಂಕೆ ಶೇ. 20.46ರಷ್ಟು ಮತಗಳನ್ನು ಗಳಿಸುವಲ್ಲಿ ಸಕ್ಸಸ್‌ ಆಗಿತ್ತು. ಆದ್ದರಿಂದ, ಈ ಎರಡೂ ಪಕ್ಷಗಳ ವೋಟ್‌ ಬ್ಯಾಂಕ್‌ಗಳನ್ನು ಸೇರಿಸಿದರೆ, ಒಟ್ಟು ಮತಗಳು ಶೇಕಡಾ 31ಕ್ಕಿಂತ ಹೆಚ್ಚಾಗುತ್ತವೆ. ಅಲ್ಲದೆ ಮುಖ್ಯವಾಗಿ ಇದೇ ಪ್ರಗತಿಯ ಹಾದಿಯಲ್ಲಿ ಸಾಗಿ ಮುಂಬರುವ ದಿನಗಳಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿಯಾದರೆ ಆಡಳಿತಾರೂಢ ಡಿಎಂಕೆಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರ ಉಭಯ ಪಕ್ಷಗಳ ನಾಯಕರಲ್ಲಿ ಅಡಗಿದೆ.

- Advertisement -

Latest Posts

Don't Miss