Anekal news: ಆನೇಕಲ್: ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಇರುವ ಕೃಷ್ಣಾ ರೆಡ್ಡಿ ಬಡಾವಣೆಯ ನಿರ್ಮಾಣ ಹಂತದಲ್ಲಿರುವ ಪಾಳು ಬಿದ್ದ ಕಟ್ಟಡದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಹುಡುಕುವ ಕಾರ್ಯಾಚರಣೆ ಸತತ ಮೂರನೇ ದಿನವಾದ ಬುಧವಾರವೂ ಮುಂದುವರಿದಿದೆ. ಬುಧವಾರ ಹೊಸದಾಗಿ ಶಾರ್ಪ್ ಶೂಟರ್‌ಗಳನ್ನು (Sharp Shooters) ಕರೆತರಲಾಗಿದೆ.
ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಗಮನಿಸುವಾಗ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೇ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.
ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ದಿನವಾದರೂ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ಮಂಗಳವಾರ ಸಂಜೆ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ತಂತ್ರಜ್ಞಾನ ಆ ಪ್ರದೇಶದಲ್ಲಿ ಚಿರತೆ ಇರುವುದರ ಸುಳಿವು ನೀಡಿದೆಯಾದರೂ ಎಲ್ಲಿದೆ ಎನ್ನುವುದನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ.
ಮಂಗಳವಾರ ಸಂಜೆಯವರೆಗೂ ಚಿರತೆಗಾಗಿ ಇಡೀ ಕಟ್ಟಡವನ್ನು ಜಾಲಾಡಿದ್ದ, ಪರಿಸರದಲ್ಲೆಲ್ಲ ಹುಡುಕಾಟ ನಡೆಸಿದ್ದ ಅಧಿಕಾರಿಗಳಿಗೆ ಹೆಚ್ಚಿನ ಸುಳಿವು ಸಿಗಲಿಲ್ಲ. ಪಾಳು ಬಿದ್ದ ಕಟ್ಟಡದ ಸುತ್ತಮುತ್ತಲಿನ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಕಳ್ಳ ಚಿರತೆಯ ಚಾಲಾಕಿತನಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹೈರಾಣಾಗಿದ್ದಾರೆ.
ಬುಧವಾರ ಮತ್ತೆ ಕಾರ್ಯಾಚರಣೆ ಆರಂಭ
ಮಂಗಳವಾರ ಸಂಜೆ ಕಾರ್ಯಾಚರಣೆಗೆ ವಿರಾಮ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಮುಂಜಾನೆ ಮತ್ತೆ ಶುರು ಮಾಡಿದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡದಂತೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಲಾಗಿದೆ.
ಬುಧವಾರದ ಕಾರ್ಯಾಚರಣೆಗೆ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿದೆ. ಹುಣಸೂರಿನಿಂದ ಆಗಮಿಸಿದ ವನ್ಯ ಜೀವಿ ರಕ್ಷಣಾ ತಂಡ ಪಾಳುಬಿದ್ದಿರುವ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಲಿದೆ. ಬುಧವಾರದ ಕಾರ್ಯಾಚರಣೆಯ ವಿಶೇಷವೇನೆಂದರೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಎಂಟ್ರಿ ಪಡೆದುಕೊಂಡಿದ್ದಾರೆ. ವನ್ಯಜೀವಿಗಳನ್ನು ಸೆರೆ ಹಿಡಿಯುವಲ್ಲಿ ವಿಶೇಷ ತರಬೇತಿ ಪಡೆದಿರುವ ತಂಡ ಇದಾಗಿದೆ.
ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಪಾಳುಬಿದ್ದ ಕಟ್ಟಡದ ಭಾಗಕ್ಕೆ ಬಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಯುತ್ತಿರುವ ಕಟ್ಟಡದ ಸ್ಕೆಚ್ ತರಿಸಿಕೊಂಡಿದ್ದಾರೆ.
ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ