Political News: ಗದಗ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (BJP) ಸೇರ್ಪಡೆ ಆಗ್ತಾರೆ ಎಂದು ಕೆಎಸ್ ಈಶ್ವರಪ್ಪ ಮತ್ತೆ ಭರವಸೆಯ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೆಟ್ಟರ್ ನನಗೆ ಆತ್ಮೀಯ ಸ್ನೇಹಿತರು. ಅವರಪ್ಪ ಕೂಡಾ ಬಿಜೆಪಿಯಲ್ಲಿ ಇದ್ದವರು. ಹಿಂದುತ್ವದ ರಕ್ತ ಅವರ ಮೈಯಲ್ಲಿ ಹರಿಯುತ್ತಿದೆ. ಕಾಂಗ್ರೆಸ್ ಸೇರಿದ್ದಕ್ಕೆ ಅನಿವಾರ್ಯ ಹೇಳಿಕೆ ನೀಡುತ್ತಾರೆ. ಇನ್ನು ಸ್ವಲ್ಪ ದಿನಕ್ಕೆ ನಮ್ಮ ಹತ್ರಾನೇ ಬರುತ್ತಾರೆ. ಆಗ ದೇಶದಲ್ಲಿ ಕಾಂಗ್ರೆಸ್ ರಿಪೇರಿ ಮಾಡೋಕೆ ಆಗಲ್ಲ ಎಂಬ ಮಾತು ಹೇಳ್ತಾರೆ. ಬಿಜೆಪಿಗೆ ಬಂದ ಮೇಲೆ ಸ್ಪಷ್ಟವಾಗಿ ಏನು ಹೇಳಬೇಕು ಅದನ್ನು ಹೇಳ್ತಾರೆ ಎಂದು ಭವಿಷ್ಯ ನುಡಿದರು.
ಶೆಟ್ಟರ್ ಬಿಜೆಪಿಗೆ ಬರುವುದು ನನಗಂತೂ ವಿಶ್ವಾಸ ಇದೆ. ನಾನು, ಅವರು ಆತ್ಮಿಯರು. ಒಟ್ಟಿಗೆ ಕೆಲಸ ಮಾಡಿದವರು. ಬಂದರೆ ತುಂಬಾನೆ ಸಂತೋಷ. ರಾಜ್ಯದಲ್ಲಿ ಅವರ ತಂದೆಯೇ ಬಿಜೆಪಿ ಭಾರತೀಯ ಜನಸಂಘಕ್ಕೆ ಬೀಜ ಹಾಕಿದ್ದು. ಅವರು ಕಾಂಗ್ರೆಸ್‌ಗೆ ಹೋದಾಗ ತುಂಬಾ ನೋವಾಗಿತ್ತು ಎಂದು ತಿಳಿಸಿದರು.
ಇನ್ನು ಸಿಬಿಐ, ಇಡಿ ಕೇಂದ್ರದ ಅಧೀನದಲ್ಲಿವೆ ಎಂಬ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಡಿ, ಸಿಬಿಐ ಸ್ವಾಯತ್ತತೆ ಸಂಸ್ಥೆ. ಕಾಂಗ್ರೆಸ್‌ನಲ್ಲಿದ್ದು ಎಷ್ಟು ಬೇಕಾದ್ರೂ ಲೂಟಿ ಮಾಡಬಹುದಾ? ಕಾಂಗ್ರೆಸ್‌ನವರು ಎಷ್ಟು ಲೂಟಿ ಮಾಡಿದ್ರು ಮುಟ್ಟಬಾರದು ಅಂತಿದೆಯಾ? ಆ ಪಕ್ಷ, ಈ ಪಕ್ಷ ಅಂತಲ್ಲಾ, ದೇಶದ ಎಲ್ಲಾ ಪಕ್ಷದವರನ್ನೂ ಮುಟ್ಟಿದೆ ಎಂದರು.
ಸಾವಿರಾರು ಕೋಟಿ ರೂ. ಸಿಗ್ತಾ ಇರೋದು ಕಾಂಗ್ರೆಸ್‌ನಲ್ಲಿ. ಡಿಕೆಶಿ ಮನೆ ರೇಡ್ ಆಯಿತು. ಆಗ ನೂರಾರು ಕೋಟಿ ರೂ. ಅಕ್ರಮ ಹಣ ಸಿಕ್ಕಿತು. ಬಾಕ್ಸ್‌ಗಟ್ಟಲೆ ಅಕ್ರಮ ದಾಖಲೆಗಳು ಸಿಕ್ಕವು. ಆಗ ಉತ್ತರ ನೀಡಲಿಲ್ಲ. ಪ್ರಕರಣದ ಬಗ್ಗೆ 90% ರಷ್ಟು ತನಿಖೆ ಮುಗಿದಿದೆ. ಚಾರ್ಜ್‌ಶೀಟ್ ಹಾಕುವ ಸಂದರ್ಭದಲ್ಲಿ ಮೇಲಿನವರ ಕೈಗೊಂಬೆಯಾಗಿ ಕೇಸ್ ವಿಥ್‌ಡ್ರಾ ಮಾಡಿದ್ರು. ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ವಿಚಾರಣೆ ಮಾಡಬೇಡಿ ಅಂತಲ್ಲಾ, ಎಫ್‌ಐಆರ್ ವಿಥ್‌ಡ್ರಾ ಮಾಡಿಲ್ಲ. ಲೋಕಸಭಾ ಚುನಾವಣೆ ಮುಂಚೆ ಅಥವಾ ಮುಗಿದ ನಂತರ ಕೇಸ್ ಮುಗಿಯುತ್ತದೆ. ಆಗ ಚಾರ್ಜ್‌ಶೀಟ್ ಬಿಳ್ಳುತ್ತೆ, 100% ಡಿಕೆಶಿ ಜೈಲಿಗೆ ಹೋಗ್ತಾರೆ. ಸಾರ್ವಜನಿಕರ ಹಣ ಲೂಟಿ ಮಾಡಿದ ವ್ಯಕ್ತಿ ಜೈಲಿಗೆ ಹೋಗೇ ಹೋಗ್ತಾರೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಗೆ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯಗೂ ಈಶ್ವರಪ್ಪ ಗಿರಾಕಿ ಅಂತ ಕುಟುಕಿದರು. ಹಲೋ ಅಪ್ಪಾ ಅಂತ ಹೇಳಿದ್ರಲ್ಲಾ ಅದು ಭ್ರಷ್ಟಾಚಾರ ತಾನೆ? ಈ ಗಿರಾಕಿ ಇದಕ್ಕೆ ಏನು ಉತ್ತರ ಕೊಡ್ತಾರೆ? ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಗಿರಾಕಿಯೇ. ನಿನಗೆ ತಾಕತ್ತು ಇದ್ರೆ, ನ್ಯಾಯಾಂಗ ತನಿಖೆ ಮಾಡಿಸು. ಅದೊಂದೇ ಕೇಸ್, ಬೇರಾವುದು ಬೇಡ ಎಂದು ಸವಾಲು ಹಾಕಿದರು.
ಹಲೋ ಅಪ್ಪಾ ಅಂತ ನಿಮ್ಮ ಮಗ ನಿಮಗೆ ಫೋನ್ ಮಾಡಿದನಲ್ಲಾ? ವಿವೇಕಾನಂದ ಸಂಸ್ಥೆಗೆ ಎಷ್ಟು ಕೊಡಬೇಕು ಅಂತ ಕೇಳಬೇಕಿತ್ತು, ಎಲ್ಲಿಗೆ ಅಂತಲ್ಲಾ. ಆ ಗಿರಾಕಿಯದ್ದೇ ಗೊತ್ತಾ ಕನ್ನಡ ಪದ. ಜಾತಿ ಜನಗಣತಿಯನ್ನು ತಾಕತ್ತು ಇದ್ರೆ ಇವತ್ತು ಬಿಡುಗಡೆ ಮಾಡಿ ಬದುಕಿ ನೋಡೋಣ. ಯಾವತ್ತು ಜಾತಿ ಜನಗಣತಿ ರಿಲೀಸ್ ಮಾಡ್ತಾರೆ, ಅವತ್ತೇ ಮುಖ್ಯಮಂತ್ರಿ ಸ್ಥಾನ ಕ್ಲೋಸ್ ಈ ಗಿರಾಕಿಯದ್ದು ಎಂದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್‌ವಿ ಸಂಕನೂರ್, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗನಗೌಡ್ರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಅಯೋಧ್ಯೆ-ಶಬರಿಮಲೆಗೆ ಹುಬ್ಬಳ್ಳಿಯಿಂದ ವಿಶೇಷ ರೈಲು, ಇಲ್ಲಿದೆ ಮಹತ್ವದ ಮಾಹಿತಿ
ಶಕ್ತಿ ಯೋಜನೆ ಎಫೆಕ್ಟ್..? ಸೀಟ್ ಸಿಗದೇ, ಡ್ರೈವರ್ ಸೀಟ್‌ನಲ್ಲಿ ಕುಳಿತ ವ್ಯಕ್ತಿ..