ಮುಂಬೈ: ಕಾರಣವಿಲ್ಲದೆ ನನ್ನನ್ನು ಹಲವಾರು ನಿರ್ಮಾಪಕರು ಚಿತ್ರದಿಂದ ಹೊರದಬ್ಬಿದ್ದರು ಅಂತ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ಮತ್ತು ಅಪಮಾನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಚಿತ್ರರಂಗಕ್ಕೆ ತಾವು ಇದರಿಂದ ಹೇಗೆ ಹೊರಬಂದರು ಎಂಬ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಬಾಜೀಘರ್ ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲೂ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬಳ್ಳಿಯಂತೆ ಬಳುಕುವ ಸೊಂಟದಿಂದ ಪಡ್ಡೆ ಹೈಕಳ ನಿದ್ದೆಗೆಡಿಸಿದ್ದ ಈ ನಟಿ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಇಂಥಹ ನಟಿ ವೃತ್ತಿಜೀವನದಲ್ಲಿ ಸಾಕಷ್ಟು ಏಳು ಬೀಳುಗಳೂ ಕೂಡ ಕಂಡಿದ್ದಾರೆ.
ಇನ್ಸ್ ಟಾಗ್ರಾಂನಲ್ಲಿ ಈ ಬಗ್ಗೆ ಹೇಳಿಕೊಂಡಿರೋ ಶಿಲ್ಪಾ, ತಾವು ಚಿತ್ರರಂಗಕ್ಕೆ ಬಂದದ್ದೇ ಅನಿರೀಕ್ಷಿತ. ಮೊದಲಿಗೆ ಫ್ಯಾಷನ್ ಶೋ ವೊಂದರಲ್ಲಿ ತಮಾಷೆಗಾಗಿ ಹೆಜ್ಜೆಹಾಕಿದ್ದೆ. ಅಂದು ಫೋಟೋಗ್ರಾಫರ್ ತೆಗೆದ ಫೋಟೋಗಳೇ ನನ್ನನ್ನು ಚಿತ್ರರಂಗಕ್ಕೆ ಬರುವಂತೆ ಮಾಡಿತ್ತು. ಸಾಲು ಸಾಲು ಚಿತ್ರಗಳಲ್ಲಿ ಮಿಂಚಿದ್ದೆ. ಇದರ ಹಿಂದೆ ನನ್ನ ಪರಿಶ್ರಮ ಸಾಕಷ್ಟಿದೆ. ಸಾಕಷ್ಟು ಅಪಮಾನಗಳನ್ನೂ ಎದುರಿಸಿ ನಿಂತು ಮತ್ತೆ ಮುಂದೆ ಸಾಗುತ್ತಿದ್ದೆ.
17 ವರ್ಷದವಳಿದ್ದಾಗ ಅಭಿನಯ ಶುರು ಮಾಡಿದ್ದ ನನಗೆ ಹಿಂದಿ ಮಾತನಾಡಲು ಅಷ್ಟಾಗಿ ಬರುತ್ತಿರಲಿಲ್ಲ. ಕ್ಯಾಮರಾ ಮುಂದೆ ಸಾಕಷ್ಟು ಬಾರಿ ತಡವರಿಸುತ್ತಿದ್ದೆ. ಹಿಂದಿ ಮಾತನಾಡೋದೇ ನನಗೆ ದೊಡ್ಡ ಸಮಸ್ಯೆಯಾಗಿತ್ತು. ಕಾರಣವಿಲ್ಲದೆಯೇ ಸಾಕಷ್ಟು ನಿರ್ಮಾಪಕರು ನಾನು ಸಹಿ ಹಾಕಿದ್ದ ಸಿನಿಮಾದಿಂದ ನನ್ನನ್ನು ಹೊರದಬ್ಬಿದ್ದರು.
ಬಳಿಕ ನಾನಗೆ ಬ್ರಿಟಿಷ್ ರಿಯಾಲಿಟಿ ಟಿವಿಯ ಬಿಗ್ ಬ್ರದರ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ವಿಶಿಷ್ಟ ಸಾಧನೆ ಮಾಡಲೇಬೇಕು ಅಂತ ಅಲ್ಲಿಗೆ ಹೋದ ನನಗೆ ಮತ್ತೆ ಅಪಮಾನಗಳಾದ್ವು. ವರ್ಣಬೇಧ ಸೇರಿದಂತೆ ಇತರೆ ಅವಮಾನಗಳನ್ನ ನಾನು ಅಲ್ಲಿ ಸಹಿಸಿಕೊಂಡೆ. ಅಂದು ನನ್ನನ್ನು ಸಂತೈಸಲು ಯಾರೂ ಇಲ್ಲ ಅಂತೆನಿಸಿತು. ಆದ್ರೆ ಈ ರಿಯಾಲಿಟಿ ಷೋ ನಲ್ಲಿ ನಾನು ಗೆದ್ದ ಬಳಿಕ ಹಲವಾರು ಮಂದಿ ’ನೀನು ದೇಶ ಹೆಮ್ಮೆಪಡುವಂತಹ ಕೆಲಸ ಮಾಡಿರುವೆ’ ಅಂತ ಹೊಗಳಿಯ ಸುರಿಮಳೆಗೈದ್ರು.