Political News: ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ತಮ್ಮ ಗೀತೆಯೊಂದರಲ್ಲಿ ದೇಶದ್ರೋಹಿ ಎಂದು ಹೇಳಿರುವುದು ಇಡೀ ರಾಜ್ಯದಲ್ಲಿ ವಿವಾದ ಸೃಷ್ಟಿಯಾಗಲು ಕಾರಣವಾಗಿದೆ. ಕಳೆದೆರಡು ದಿನಗಳ ಹಿಂದಷ್ಟೇ ಮುಂಬೈನ ಖಾರ್ ಪ್ರದೇಶದ ಕಾಂಟಿನೆಂಟಲ್ ಹೋಟೆಲ್‌ನ ಸ್ಟುಡಿಯೋದಲ್ಲಿ ಹ್ಯಾಬಿಟ್ಯಾಟ್ ಕಾಮೆಡಿ ಕ್ಲಬ್ ಹೆಸರಿನ ಹಾಸ್ಯ ಕಾರ್ಯಕ್ರಮ ನಡೆಸಲಾಗಿತ್ತು. ಈ ವೇಳೆ ಮಹಾರಾಷ್ಟ್ರದ ರಾಜಕೀಯದ ಬಗ್ಗೆ ಅದರಲ್ಲೂ ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಅವರಿಬ್ಬರೂ ಹೇಗೆ ತಮ್ಮ ಪಕ್ಷಗಳನ್ನು ವಿಭಜಿಸಿದ್ದರು ಎಂಬ ಬಗ್ಗೆಯೇ ಹಾಸ್ಯಭರಿತವಾಗಿ ಕಾಮ್ರಾ ಹಾಡು ಹೇಳಿದ್ದರು. ಅಲ್ಲದೆ ಅದರಲ್ಲಿ ಏಕನಾಥ ಶಿಂಧೆ ಅವರನ್ನು ಪರೋಕ್ಷವಾಗಿ ದೇಶದ್ರೋಹಿ ಎಂದು ಕರೆಯುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು.
ಇನ್ನೂ ಈ ವಿಚಾರವನ್ನು ತಿಳಿದು ರೊಚ್ಚಿಗೆದ್ದ ಶಿವಸೇನೆಯ ಶಿಂಧೆ ಬಣದ ಕಾರ್ಯಕರ್ತರು ಕಾಮ್ರಾ ಕಾರ್ಯಕ್ರಮ ನಡೆಸಿದ್ದ ಸ್ಟುಡಿಯೋವನ್ನೇ ಧ್ವಂಸ ಗೊಳಿಸಿದ್ದಾರೆ. ಇನ್ನೂ ಅಲ್ಲಿನ ಕುರ್ಚಿ, ಟೇಬಲ್‌ಗಳನ್ನೆಲ್ಲ ಪುಡಿ ಪುಡಿ ಮಾಡಿದ್ದಾರೆ. ಅಲ್ಲದೆ ಈ ಕುರಿತು ಪ್ರಕರಣ ದಾಖಲಾಗಿ 12 ಜನರ ಬಂಧನವಾಗಿತ್ತು. ಈಗ ಅವರೆಲ್ಲ ಜಾಮೀನಿನ ಹೊರಬಂದಿದ್ದಾರೆ. ಈ ವಿಚಾರ ಇದೀಗ ಮಹಾ ಕೆಸರೆರಚಾಟಕ್ಕೆ ಕಾರಣವಾಗಿದ್ದು, ವಿಧಾನಸಭೆ ಹಾಗೂ ಪರಿಷತ್ ಎರಡೂ ಸದನಗಳಲ್ಲಿ ಚರ್ಚೆಯಾಗಿದೆ. ಅಲ್ಲದೆ ಉಪಮುಖ್ಯಮಂತ್ರಿಯವರನ್ನು ವಂಚಕ, ದೇಶದ್ರೋಹಿ ಎಂದು ಕರೆದಿರುವ ಕುನಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನೆಯ ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ವಿಚಾರ ಅಧಿವೇಶನದಲ್ಲಿ ಚರ್ಚೆಯಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಗಿದೆ.
ಕಾನೂನು ಸುವ್ಯವಸ್ಥೆ ಹಾಳು..
ಆದರೆ ಕುನಾಲ್ ಕಾರ್ಯಕ್ರಮ ನಡೆದಿದ್ದ ಸ್ಟುಡಿಯೋವನ್ನು ಶಿವಸೇನೆಯ ಕಾರ್ಯಕರ್ತರು ಧ್ವಂಸಗೊಳಿಸಿರುವುದನ್ನು ವಿಪಕ್ಷಗಳು ಖಂಡಿಸಿವೆ. ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರು ಹೀಗೆ ದಾಳಿ ನಡೆಸುವುದು ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿವೆ. ಇನ್ನೂ ಶಿವಸೇನೆ ಯುಬಿಟಿ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ, ಕುನಾಲ್ ಕಾಮ್ರಾ ಅವರನ್ನು ಸಮರ್ಥಿಸಿಕೊಂಡಿದ್ದು, ಕಾಮ್ರಾ ಕೇವಲ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ನೈಜತೆಯನ್ನು ತಿಳಿಸುವ ಮೂಲಕ ಸಾರ್ವಜನಿಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಬೆಂಬಲವಾಗಿ ನಿಂತಿದ್ದಾರೆ. ಅಂದಹಾಗೆ ಕಾಮ್ರಾ ಏನನ್ನೂ ತಪ್ಪು ಮಾಡಿಲ್ಲ… ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ ಸೋಲಾಪುರಕರ್ ಮತ್ತು ಕೊರಟ್ಕರ್ ಅವರನ್ನು ಈ ದೇಶದ್ರೋಹಿಗಳು ನೋಡುವುದಿಲ್ಲ ಎಂದು ಉದ್ಧವ್ ಆಕ್ರೋಶ ಹೊರಹಾಕಿದ್ದಾರೆ.
ಖುದ್ದರ್ ಹಾಗೂ ಗದ್ದಾರ್ ಯಾರೆಂಬುದು ಜನ ತೀರ್ಮಾನಿಸಿದ್ದಾರೆ..
ಇನ್ನೂ ರಾಜ್ಯಾದ್ಯಂತ ಜ್ವಾಲಾಮುಖಿಯಂತೆ ಹರಡಿರುವ ಈ ವಿಚಾರದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೌನ ಮುರಿದಿದ್ದಾರೆ. ಅಲ್ಲದೆ ಇದು ವಾಕ್ ಸ್ವಾತಂತ್ರ್ಯದ ದುರುಪಯೋಗವಾಗಿದೆ. ಇತರರನ್ನು ಗುರಿಯಾಗಿಸಿ ಅವರ ಸ್ವಾತಂತ್ರ್ಯದ ಮೇಲೆ ನೀವು ಸವಾರಿ ಮಾಡಿದರೆ, ಆಗ ನಿಮ್ಮ ಸ್ವಾತಂತ್ರ್ಯಕ್ಕೆ ಕಡಿವಾಣ ಬೀಳುತ್ತದೆ. ನಾವು ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಯಾರೂ ಕೂಡ ವಿರೋಧ ಮಾಡುತ್ತಿಲ್ಲ. ಆದರೆ ಈ ರೀತಿ ಪ್ರಚಾರಕ್ಕಾಗಿ ಒಪ್ಪಂದ ಮಾಡಿಕೊಂಡು ಸಾಂವಿಧಾನಿಕ ಸ್ಥಾನದಲ್ಲಿರುವವರ ಬಗ್ಗೆ ಅವಮಾನ ಹಾಗೂ ಅಪಹಾಸ್ಯ ಮಾಡಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಅಜಾಗರೂಕತೆಯಿಂದ ವರ್ತಿಸಿದರೆ, ಅದನ್ನು ಸಹಿಸಲಾಗುವುದಿಲ್ಲ. ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಇನ್ನೂ ಇದೇ ಕಾಮ್ರಾ ಈ ಮೊದಲು ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕೀಳು ಮಟ್ಟದ ಟೀಕೆಗಳನ್ನು ಮಾಡಿರುವ ಇತಿಹಾಸವನ್ನು ಹೊಂದಿದ್ದಾರೆ. ತಮ್ಮ ಪ್ರಚಾರದ ಗೀಳಿಗಾಗಿ ವಿವಾದ ಹಬ್ಬಿಸುವುದು ಅವರ ಕಾರ್ಯವೈಖರಿಯಾಗಿದೆ. ಇಂಥವರು ಈಗ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಶಿಂಧೆ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಕಳೆದ 2024ರ ವಿಧಾನಸಭಾ ಚುನಾವಣೆ ಮೂಲಕ ಮಹಾರಾಷ್ಟ್ರದ ಜನರು ಖುದ್ದರ್ ಅಂದರೆ ಸ್ವಾಭಿಮಾನಿ ಯಾರು..? ಹಾಗೂ ಗದ್ದಾರ್ ಅಂದರೆ ದೇಶದ್ರೋಹಿ ಯಾರು ಎಂಬುದನ್ನು ತೋರಿಸಿದ್ದಾರೆ ಎಂದು ಕಾಮ್ರಾ ಹೇಳಿಕೆಗೆ ಫಡ್ನವೀಸ್ ತಿರುಗೇಟು ನೀಡಿದ್ದಾರೆ. ಈ ಕುರಿತು ಕಾಮ್ರಾ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತದೆ..
ಅಂದಹಾಗೆ ತಮ್ಮ ವಿರುದ್ಧ ಕಾಮಿಡಿಯನ್ ಕುನಾಲ್ ಕಾಮ್ರಾ ಹೇಳಿಕೆಯ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಏಕನಾಥ ಶಿಂಧೆ, ಯಾರನ್ನೇ ಆಗಲಿ ಟೀಕೆ, ವಿಡಂಬನೆ ಮಾಡುವಾಗ ಸಭ್ಯತೆ ಹಾಗೂ ಸನ್ನಡತೆ ಇರಬೇಕು. ಇಲ್ಲವಾದರೆ ಯಾವುದೇ ಒಂದು ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂದು ಮಾರ್ಮಿಕವಾಗಿಯೇ ತಿರುಗೇಟು ನೀಡಿದ್ದಾರೆ. ಇಲ್ಲಿ ಯಾರು ಏನೇ ಹೇಳಿದರೂ ನಾನು ಆ ಕಡೆಗೆ ಗಮನ ಹರಿಸುವುದಿಲ್ಲ. ಇಂಥವುಗಳಿಗೆ ಕಾಲ ಹರಣ ಮಾಡದೆ ನನ್ನ ಕೆಲಸದಿಂದ ಉತ್ತರಿಸುತ್ತೇನೆ. ಆದರೆ ಈ ರೀತಿಯ ಹೇಳಿಕೆ ಖಂಡನಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ರೀತಿಯ ಹೇಳಿಕೆಗಳನ್ನು ವಾಕ್ ಸ್ವಾತಂತ್ರ್ಯ ಎಂದು ಹೇಳುವುದಿಲ್ಲ, ಬದಲಿಗೆ ಯಾರೋ ಒಬ್ಬರ ಪರವಾಗಿರುವ ಕೆಲಸದಂತಿದೆ. ಇದೇ ವ್ಯಕ್ತಿ ಈ ಹಿಂದೆ ಭಾರತದ ಸುಪ್ರೀಂ ಕೋರ್ಟ್, ಪ್ರಧಾನಿ, ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ಕೆಲವು ಕೈಗಾರಿಕೋದ್ಯಮಿಗಳ ಬಗ್ಗೆಯೂ ಟೀಕೆ ಮಾಡಿದ್ದರು ಎಂದು ಕಾಮ್ರಾ ವಿರುದ್ಧ ಶಿಂಧೆ ಕಿಡಿ ಕಾರಿದ್ದಾರೆ.
ಬಿಜೆಪಿ, ಶಿವಸೇನೆಯ ನಾಯಕರಿಗೆ ಕಾಮ್ರಾ ಸೆಡ್ಡು..
ಇನ್ನೂ ತಮ್ಮ ಹೇಳಿಕೆಯ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗುವುದನ್ನು ಅರಿತ ಕುನಾಲ್ ಕಾಮ್ರಾ ತಮಿಳುನಾಡಿಗೆ ಪಲಾಯನ ಗೈದಿದ್ದಾರೆ. ನನ್ನ ವಿರುದ್ಧದ ಟೀಕೆಗಳು ಹಾಗೂ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಯಾವುದೇ ಕಾರಣಕ್ಕೂ ನಾನು ಕ್ಷಮೆಯಾಚಿಸುವುದಿಲ್ಲ. ಅಲ್ಲದೆ ಇವರ ಗುಂಪಿಗೆ ನಾನು ಹೆದರುವ ಪ್ರಮೇಯವೇ ಇಲ್ಲ. ಈ ವಿವಾದ ತಿಳಿಯಾಗುವವರೆಗೂ ನಾನು ಎಲ್ಲಿಯೂ ಅಡಗಿಕೊಳ್ಳುವುದಿಲ್ಲ ಎಂದು ಕಾಮ್ರಾ ಬಿಜೆಪಿ ಹಾಗೂ ಶಿವಸೇನೆಯ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಅಜಿತ್ ಪವಾರ್ 1ನೇ ಉಪಮುಖ್ಯಮಂತ್ರಿ, ಏಕನಾಥ್ ಶಿಂಧೆ 2ನೇ ಉಪಮುಖ್ಯಮಂತ್ರಿ ಅದನ್ನೇ ನಾನು ಹೇಳಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಒಟ್ನಲ್ಲಿ.. ಒಂದು ಹಾಸ್ಯಕ್ಕೆ ಇಡೀ ರಾಜ್ಯವೇ ಆಕ್ರೋಶ ಹಾಗೂ ದ್ವೇಷದ ಜ್ವಾಲೆಗೆ ಸಿಲುಕಿಕೊಂಡಿದೆ. ಅಲ್ಲದೆ ರಾಜಕೀಯ ತಿರುವು ಪಡೆದುಕೊಂಡಿರುವ ಈ ಪ್ರಕರಣದಲ್ಲಿ ಯಾರು ನಿಜವಾದ ಆರೋಪಿಗಳು ಇನ್ಯಾರು ಅಮಾಯಕರು ಎನ್ನುವುದರ ಬಗ್ಗೆ ಬಹುಶಃ ಸರ್ಕಾರಕ್ಕೂ ತಿಳಿಯದಾಗಿದೆ. ಇನ್ನೂ ಕೇವಲ ಒಂದು ಹಾಸ್ಯ ಕಾರ್ಯಕ್ರಮದಿಂದ ಇಷ್ಟೊಂದು ಕೆಂಡಮಯ ವಾತಾವರಣ ಸೃಷ್ಟಿಯಾಗಿದ್ದು, ನಿಜಕ್ಕೂ ಆತಂಕಕಾರಿ ಸಂಗತಿ. ಸಾರ್ವಜನಿಕ ಜೀವನ ಅದರಲ್ಲೂ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಟೀಕೆ, ಟಿಪ್ಪಣಿಗಳನ್ನು ಸ್ವೀಕರಿಸುವ ಮನೋಭಾವವನ್ನು ಹೊಂದಿರಬೇಕು. ಅಂದಹಾಗೆ ಪಬ್ಲಿಕ್ ಲೈಫ್‌ನಲ್ಲಿ ಇವುಗಳು ನಿರೀಕ್ಷಿತ ಹಾಗೂ ಸ್ವಾಭಾವಿಕವಾಗಿರುತ್ತವೆ, ಅವುಗಳನ್ನು ಸಹಿಸಿಕೊಳ್ಳುವ ಮನಸ್ಥಿತಿ, ಎದೆಗಾರಿಕೆ ಇದ್ದಾಗ ರಾಜಕೀಯದಂತಹ ಬದುಕಿಗೆ ಬರುವುದು ಸೂಕ್ತವೇನೋ.. ನಾಯಕರಾದವರು, ಜವಾಬ್ದಾರಿಯುತ ಹುದ್ದೆಯಲ್ಲಿದ್ದವರು ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು, ಆದರೆ ಶಿವಸೇನೆಯು ಟೀಕೆಯನ್ನು ಅರಗಿಸಿಕೊಳ್ಳಲು ವಿಫಲವಾಗಿ ರೊಚ್ಚಿಗೆದ್ದಿದ್ದು ಮಾತ್ರ ಆಘಾತಕಾರಿ ವಿಚಾರವಾಗಿದೆ. ಟೀಕಾಕಾರು ಇನ್ನು ಮುಂದೆ ರಾಜಕೀಯ ನಾಯಕರ ವಿರುದ್ಧ ಮಾತನಾಡಬಾರದು ಎಂಬ ಭಯದ ವಾತಾವರಣ ನಿರ್ಮಾಣಕ್ಕೆ ಮುಂದಾಗಿದೆ ಅನ್ನೋದು ಸ್ಪಷ್ಟವಾಗಿ ಕಂಡು ಬರುತ್ತದೆ. ಅದೇನೆ ಇರಲಿ.. ನಾವು ಮಾತನಾಡುವಾಗ ನಮ್ಮ ಪ್ರತಿಯೊಂದು ಮಾತಿನ ಅರ್ಥ, ಅದರ ಪರಿಣಾಮಗಳು ಹಾಗೂ ಅದರ ಲಾಭ-ನಷ್ಟಗಳನ್ನು ಅರಿತುಕೊಂಡು ಮಾತನಾಡಿದಾಗ ಆದಷ್ಟು ವಿವಾದಗಳಿಂದ ದೂರ ಇರಲು ಸಾಧ್ಯವಾಗುತ್ತದೆ. ಇಲ್ಲವಾದರೆ ಈ ರೀತಿಯ ಇರಲಾರದ ಇರುವೆ ಬಿಟ್ಟುಕೊಂಡು ಊರು ಬಿಟ್ಟು ಪಲಾಯನ ಮಾಡಬೇಕಾಗುತ್ತದೆ.