Sunday, July 20, 2025

Latest Posts

ಸಿದ್ದರಾಮಯ್ಯ ಸರ್ಕಾರಕ್ಕೆ ಪಂಚಮಸಾಲಿ ಪೆಟ್ಟು ಫಿಕ್ಸ್‌!

- Advertisement -

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದ ಆಕ್ರೋಶ ಹೆಚ್ಚಾಗಿದೆ. 3ಎಗೆ ಬದಲಾಗಿ 2ಎ ಮೀಸಲಾತಿ ನೀಡಲು, ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು. ಹೀಗಾಗಿಯೇ ಕಾಂಗ್ರೆಸ್ ಪಕ್ಷವನ್ನು ಪಂಚಮಸಾಲಿ ಸಮುದಾಯ ಇಲ್ಲಿಯವರೆಗೂ ಬೆಂಬಲಿಸಿದೆ. ಆದ್ರೀಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಸಾಧ್ಯವಿಲ್ಲ ಅಂತಾ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸ್ಪಷ್ಪಪಡಿಸಿದೆ ಎನ್ನಲಾಗಿದೆ. ಹಲವು ವರ್ಷಗಳ ಪಂಚಮಸಾಲಿ ಸಮಾಜದ ಕನಸಿಗೆ ಕಾಂಗ್ರೆಸ್ ಸರ್ಕಾರ ಫುಲ್ ಸ್ಟಾಪ್ ಇಟ್ಟಿದೆ ಅನ್ನೋದು ಕಿಚ್ಚು ಹಚ್ಚಿದೆ.

ಕೆರಳಿ ಕೆಂಡವಾಗಿರುವ ಪಂಚಮಸಾಲಿ ಸ್ವಾಮೀಜಿಗಳು, ಇನ್ಮುಂದೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸದಿರಲು ನಿರ್ಧರಿಸಿದ್ದಾರೆ. ಗದಗ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಮತ್ತೆ ಅವರ ಮುಂದೆ ಮಂಡಿಯೂರಿ ಕುಳಿತು ಮೀಸಲಾತಿ ಕೊಡಿ ಅಂತಾ ನಾವು ಕೇಳುವುದಿಲ್ಲ. ನಮ್ಮ ಮೀಸಲಾತಿ ಹೋರಾಟವೂ ನಿಲ್ಲುವುದಿಲ್ಲ. ಯಾವ ಸಿಎಂ ಬಂದರೆ ನಮಗೆ ಅನುಕೂಲ ಆಗಲಿದೆ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುವುದು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಪ್ರತಿನಿಧಿಗಳನ್ನು ನಾವು ಬೆಂಬಲಿಸಬೇಕಿದೆ. ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ಪಂಚಮಸಾಲಿ ಸಮಾಜದ ಮನೆ ಮನೆಗೆ ಹೋಗಿ, ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

2028ರಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದಿಂದ ನಮ್ಮ ಬೇಡಿಕೆ ಈಡೇರಿಕೊಳ್ಳುವ ಪ್ರಯತ್ನಕ್ಕೆ ನಮ್ಮ ಜನಜಾಗೃತಿ ಹೋರಾಟ ನೆರವಾಗಲಿದೆ ಅಂತಾ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಮೇ ತಿಂಗಳಲ್ಲಿ ಸೋರಿಕೆಯಾದ ಜಾತಿ ಗಣತಿ ವರದಿಯಲ್ಲಿ, ವೀರಶೈವ ಪಂಚಮಸಾಲಿ ಜನಸಂಖ್ಯೆ 4,37,796 ಇದ್ರೆ, ಪಂಚಮಸಾಲಿ ಲಿಂಗಾಯತರ ಸಂಖ್ಯೆ 6,33,506 ಇದೆ. ಒಟ್ಟು 10,71,302 ಪಂಚಮಸಾಲಿ ವೋಟುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವೀರಶೈವ ಪಂಚಮಸಾಲಿ ಸಮುದಾಯದ ಈ ಸಿಟ್ಟು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.

- Advertisement -

Latest Posts

Don't Miss