ಹಾಸನ: ಹಾಸನ ಜಿಲ್ಲೆ ಅರಸೀಕೆರೆ ನಗರದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರಿಗೆ ರಾಜ್ಯದಲ್ಲಿ ಚುನಾವಣೆ ಗೆಲ್ಲಬೆಕು ಎಂದು ಬರ್ತಿದಾರೆ. ಅವರು ಎಷ್ಟುಸಾರಿ ರಾಜ್ಯಕ್ಕೆ ಬಂದರೂ ಏನೂ ಆಗೋದಿಲ್ಲ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಇದು. ಇಲ್ಲಿ ರಾಷ್ಟ್ರೀಯ ವಿಚಾರ ಅಲ್ಲ ರಾಜ್ಯದ ವಿಚಾರ ಚರ್ಚೆ ಆಗುತ್ತೆ ಎಂದಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಜೆಡಿಎಸ್ ಸೇರ್ತಾರೆ ಎಂಬ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಯಾವಾಗಲು ಅದೇ ಕೆಲಸ. ಯಾವ ಪಾರ್ಟಿಯಿಂದ ಟಿಕೇಟ್ ಸಿಗಲ್ಲ ಅವರನ್ನ ಕರೆಸಿ ಟಿಕೇಟ್ ಕೊಡೋದೆ ಅವರ ಕೆಲಸ. ಯಾಕಂದ್ರೆ ಅವರಿಗೆ ಅಭ್ಯರ್ಥಿಗಳು ಇಲ್ವಲ್ಲಾ. ಹಾಗಾಗಿ ಬಿಜೆಪಿ ಜೆಡಿಎಸ್ ಇಬ್ಬರು ಕಾಯ್ತಾ ಇದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಮ್ಮ ಪಕ್ಷದಿಂದ ಬಹಳ ಜನ ಹೋಗಲ್ಲ ಯಾಕೆಂದ್ರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಲ್ಲ ಹಾಗಾಗಿ ಹೋಗಲ್ಲ. ಎಲ್ಲಿ ಜಾಸ್ತಿ ಆಕಾಂಕ್ಷಿಗಳು ಇರ್ತಾರೆ ಅಲ್ಲಿ ಬಂಡಾಯ ಸಹಜ. ಆದರೆ ನಾವು ಎಲ್ಲರ ಜೊತೆ ಮಾತಾಡ್ತಾ ಇದೀವಿ, ಈ ಸಾರಿ ಆಕಾಂಕ್ಷಿ ಗಳು ಜಾಸ್ತಿ. ಒಂದೊಂದು ಕ್ಷೇತ್ರದಲ್ಲಿ ಹತ್ತು ಹದಿನೈದು ಇಪ್ಪತ್ತು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರಿಗೂ ಟಿಕೇಟ್ ಕೊಡೋಕೆ ಆಗಲ್ವಲ್ಲಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಹಾಸನ ಕ್ಷೇತ್ರದ ಟಿಕೇಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಆ ರೀತಿಯಲ್ಲಿ ನಾವು ಯಾವತ್ತು ಯೋಚನೆ ಮಾಡಲ್ಲ ,ನಾವು ಜನರ ಆಶೀರ್ವಾದ ಕೇಳೋರು. ಅವರು ಕೊಡದಿದ್ದರೆ, ಇವರು ಕೊಡದಿದ್ದರೆ ಎಂದು ನಾವು ಕಾಯೋದಿಲ್ಲ ಜನ ನಮಗೆ ಆಶೀರ್ವಾದ ಮಾಡ್ತಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಹೈ ಕಮಾಂಡ್ ಏನು ಹೇಳುತ್ತೊ ಹಾಗೆ ಮಾಡುತ್ತೇನೆ. ಹೈ ಕಮಾಂಡ್ ಎರಡೂ ಕಡೆ ನಿಂತುಕೊ ಎಂದರೆ ನಿಂತುಕೊಳ್ತೇನೆ. ಇಲ್ಲಾ ಒಂದೇ ಕಡೆ ನಿಂತುಕೊ ಎಂದರು ನಿಂತುಕೊಳ್ತೇನೆ. ಲೀಡರ್ ಗಳು ಕರೆದಾಗ ಬೇಡ ಎನ್ನಲು ಆಗಲ್ವಲ್ಲ. ಕೋಲಾರ ದವರು ಇಲ್ಲೇ ಬಂದು ನಿಲ್ಲಿ ಎಂದಿದಾರೆ ಬರ್ತಿನಿ ಎಂದು ಹೇಳಿದಿನಿ. ಹೈ ಕಮಾಂಡ್ ಒಪ್ಪಿಕೊಂಡರೆ ಬರ್ತಿನಿ ಎಂದಿದಿನಿ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಲ್ಲ ನಾನೇ ಕಿಂಗ್ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಬಾಲಿಷ ಹೇಳಿಕೆಗೆ ಉತ್ತರ ಕೊಡಲ್ಲ. ಅವರು ಯಾವತ್ತಾದರು ಜೆಡಿಎಸ್ ಆದ ಮೇಲೆ ಸ್ವಂತ ಬಲದ ಮೇಲೆ ಸರ್ಕಾರ ಮಾಡಿದಾರ..? 1999 ರಲ್ಲಿ ಜೆಡಿಎಸ್ ಆಗಿತ್ತು ನಾನೇ ಆಗ ಅಧ್ಯಕ್ಷ. ಆಗಿಂದ ಇವತ್ತಿನವರೆಗೆ ಸ್ವಂತ ಶಕ್ತಿಮೇಲೆ ಅಧಿಕಾರಕ್ಕೆ ಬಂದಿದಾರಾ..? ಅದು ಹೇಗೆ ಸಿಎಂ ಆಗ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೇ ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
‘2ನೇ ಬಾರಿಗೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾಲೂರು ಖಾಲಿ ಮಾಡ್ತೇನೆ’