ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಸಾವಿನ ಕುರಿತಂತೆ ಇದೀಗ ಎಲ್ಲರಲ್ಲೂ ಸಂಶಯ ಗೊಂದಲ ಸಹಜವಾಗಿಯೇ ಮೂಡುತ್ತಿದೆ. ಸಿದ್ಧಾರ್ಥ್ ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಉಲ್ಲೇಖವಾಗಿರೋ ಐಟಿ ಕಿರುಕುಳದ ಬಗ್ಗೆ ಇದೀಗ ರಾಜಕೀಯ ನಾಯಕರೂ ತಲೆ ಕೆಡಿಸಿಕೊಂಡಿದ್ದು ಈ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಸರಣಿ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಮಧ್ಯೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕೀಡಾಗಿದ್ದೇನೆ. ತಮ್ಮ ಪಾಲಿಗೆ ಮಗನೇ ಆಗಿದ್ದ ಸಿದ್ಧಾರ್ಥ ಅವರ ಅಗಲಿಕೆಯಿಂದ ಎಸ್.ಎಂ.ಕೃಷ್ಣ ಮತ್ತು ಕುಟುಂಬ ವರ್ಗ ಅನುಭವಿಸುತ್ತಿರುವ ನೋವು-ಸಂಕಟಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಅಂತ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಸಾವು ಎಷ್ಟು ಎಷ್ಟು ದಾರುಣವೋ, ಅದರ ಹಿನ್ನೆಲೆ ಅಷ್ಟೇ ನಿಗೂಢವಾದುದು. ಅವರನ್ನು ಇಂತಹದ್ದೊಂದು ದುರಂತಕ್ಕೆ ತಳ್ಳಿದ ಕಾರಣಗಳು ಮತ್ತು ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಅಂತ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಐಟಿ ಇಲಾಖೆ ಕಿರುಕುಳದ ಕುರಿತಾಗಿ ಮತ್ತೊಂದು ಟ್ವೀಟ್ ಮಾಡಿರೋ ಸಿದ್ದು, ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರ ಬಹುದೆಂಬ ಸಂಶಯ ಹುಟ್ಟಿಸುವಂತಿದೆ ಅವರು ಕೊನೆಯಲ್ಲಿ ಬರೆದಿರುವ ಪತ್ರದಲ್ಲಿನ ವಿವರಗಳು. ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಠೀಕರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಅಂತ ಒತ್ತಾಯಿಸಿದ್ದಾರೆ.
ಕೊನೆಯದಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಿದ್ಧಾರ್ಥ್ ಬರೆಯಲಾಗಿರುವ ಪತ್ರದಲ್ಲಿ ಟ್ಯಾಕ್ಸ್ ಟೆರರಿಸಂ ಕುರಿತಾಗಿ ಪ್ರಸ್ತಾಪಿಸಿರೋದು ರಾಜಕೀಯ ಪ್ರೇರಿತ ಸಂಸ್ಥೆಗಳ ಕರಾಳ ಮುಖ ಅಂತ ಐಟಿ ಇಲಾಖೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.