Political News: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು 15% ಕಮಿಷನ್ ಆರೋಪ ಮಾಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ, ತಿರುಗೇಟು ಕೊಟ್ಟಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ಮಾಜಿ ಸಚಿವರಾದ ಆರ್. ಅಶೋಕ್ ಅವರು ಮಾಡಿರುವ 15% ಕಮಿಷನ್ ಆರೋಪ ಸತ್ಯಕ್ಕೆ ದೂರವಾದದ್ದೇ ಆದರೂ ಅದರಲ್ಲಿ ಅವರು ಕಮಿಷನ್ ದರವನ್ನು 40% ನಿಂದ 15% ಗೆ ಇಳಿಸಿರುವುದು ಸಂತೋಷದ ವಿಷಯ. ಅಶೋಕ್ ಅವರ ಈ ಹೇಳಿಕೆಯಿಂದ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರ ಉತ್ತಮ ಎಂಬುದು ಅವರ ಮನಸಿನಲ್ಲೇ ಇದೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮೇಲಿನ ಆರೋಪಗಳನ್ನು ಸವಾಲಿನಂತೆ ಸ್ವೀಕರಿಸಿ, ಈ ಅಗ್ನಿಪರೀಕ್ಷೆಯಲ್ಲಿ ಗೆದ್ದು ನಮ್ಮದು ಬರೀ ಉತ್ತಮವಲ್ಲ ಅತ್ಯುತ್ತಮ, ಪಾರದರ್ಶಕ, ಜನಪರ ಸರ್ಕಾರ ಎಂಬುದನ್ನು ನಾಡಿನ ಜನತೆಯೆದುರು ಸಾಬೀತು ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅಲ್ಲದೇ, ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಬಿಲ್ ಹಣ ಪಾವತಿ ಮಾಡುತ್ತಿಲ್ಲ, ಹೀಗಾಗಿ ರಾಹುಲ್ ಗಾಂಧಿಯವರು ಮಧ್ಯಪ್ರವೇಶಿಸಿ ಬಿಲ್ ಹಣ ಬಿಡುಗಡೆ ಮಾಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರಗಳಿಗೆ ಸೂಚನೆ, ನಿರ್ದೇಶನ ನೀಡುವ ಅಧಿಕಾರವಿರುವುದು ದೇಶದ ಪ್ರಧಾನಿಗಳಿಗೆ. ನರೇಂದ್ರಮೋದಿ ಅವರು ಮಾಡಬೇಕಿರುವ ಕೆಲಸವನ್ನು ರಾಹುಲ್ ಗಾಂಧಿಯವರಿಗೆ ಮಾಡಿ ಎಂದು ಒತ್ತಾಯಿಸುತ್ತಿರುವುದು ನೋಡಿದರೆ ಸ್ವತಃ ಬೊಮ್ಮಾಯಿಯವರಿಗೆ ಮೋದಿ ಅವರ ಕಾರ್ಯದಕ್ಷತೆ ಬಗ್ಗೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ ಎಂದು ಬಿಜೆಪಿಗರಿಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ.
ಈಗಾಗಲೇ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಬಾಕಿ ಬಿಲ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಿದ್ದಾರೆ, P.O.W ಕಾಮಗಾರಿಗಳ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಕಾಮಗಾರಿಗಳ ಬಿಲ್ ಬಿಡುಗಡೆಗೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಪ್ರಕ್ರಿಯೆಗಳು ಮುಗಿದ ಕೂಡಲೇ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಈ ನಡುವೆ ಕೆಲವೇ ಕೆಲವು ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ದುರುದ್ದೇಶದ ಈಡೇರಿಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸ್ವತಃ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ ಎನ್ನಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು? ಎಂದು ಪ್ರಶ್ನಿಸುವ ಮೂಲಕ, ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Instagramನಲ್ಲಿ ಹವಾ ಮೆಂಟೇನ್ ಮಾಡಿದ ಕೊಹ್ಲಿ: ಒಂದು ಪೋಸ್ಟ್‌ಗೆ ಕೋಟಿ ಕೋಟಿ ಹಣ..