ಸಿಎಂ ಸಿದ್ದರಾಮಯ್ಯ ಅವರನ್ನು, ನಾಡು ಕಟ್ಟಿದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹೋಲಿಸಲಾಗಿದೆ. ಅದು ಬೇರಾರು ಅಲ್ಲ, ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಎಲ್ಲಾ ಹಣವನ್ನೂ ಗ್ಯಾರಂಟಿಗಳಿಗೆ ಖರ್ಚು ಮಾಡಲಾಗ್ತಿದೆ. ಹೀಗಂತ ಅವಕಾಶ ಸಿಕ್ಕಾಗಲೆಲ್ಲಾ ವಿಪಕ್ಷಗಳು ಆರೋಪ ಮಾಡುತ್ತಿರುತ್ತವೆ. ವಿಪಕ್ಷಗಳ ಟೀಕೆ-ಟಿಪ್ಪಣಿಗಳಿಗೆ ಸಿದ್ದು ಪುತ್ರ ಯತೀಂದ್ರ ಖಡಕ್ ತಿರುಗೇಟು ಕೊಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅಪ್ಪನ ಸಾಧನೆಗಳನ್ನು ಹೋಲಿಸಿದ್ದಾರೆ.
ಸಿದ್ದರಾಮಯ್ಯನವ್ರು ಮುಖ್ಯಮಂತ್ರಿಗಳಾಗಿದ್ದಾಗ ಬಂದಿರುವಂತಹ ಅನುದಾನ ಬಿಟ್ಟರೆ, ಇನ್ಯಾವುದೇ ಅನುದಾನಗಳೂ ಬಂದಿಲ್ಲ. ನಾಲ್ವಡಿ ಕೃಷ್ಣ ರಾಜ ಒಡೆಯರ್, ಮೈಸೂರನ್ನು ಎಷ್ಟು ಡೆವಲಪ್ ಮಾಡಿದ್ದಾರೆ. ಅದರಷ್ಟೇ ಅಥವಾ ಅದಕ್ಕಿಂತ ಹೆಚ್ಚು ನಮ್ಮ ಸರ್ಕಾರ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಅನುದಾನ ಕೊಟ್ಟಿದೆ. ಏನೂ ಮಾಡಿಲ್ಲ ಅನ್ನೋದು ವಿಪಕ್ಷಗಳ ಟೊಳ್ಳು ಟೀಕೆ.
ವಿಪಕ್ಷಗಳು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ, ಸುಳ್ಳು ಆರೋಪಗಳನ್ನು ಮಾಡಿ, ಅವರನ್ನು ಹಣಿಯಲು ಪ್ರಯತ್ನ ಪಡ್ತಾರೆ. ಅದು ಜಾಸ್ತಿ ದಿನ ಉಳಿಯಲ್ಲ. ಸತ್ಯ ಹೊರಗೆ ಬಂದೇ ಬರುತ್ತದೆ. ವಿಪಕ್ಷಗಳು ತೇಜೋವಧೆಗೆ ಪ್ರಯತ್ನ ಪಟ್ರೆ, ಸಿದ್ದರಾಮಯ್ಯನವ್ರು ಹೆಚ್ಚು ಪ್ರಬಲರಾಗ್ತಾರೆ. ಅವರನ್ನು ಸೋಲಿಸಲು ಸಾಧ್ಯವಿಲ್ಲ ಅಂತಾ, ಮೈಸೂರಿನಲ್ಲಿ ಯತೀಂದ್ರ ಟಾಂಗ್ ಕೊಟ್ಟಿದ್ದಾರೆ.