ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ, ಸಿಎಂ ಸಿದ್ದರಾಮಯ್ಯಗೆ ಡಬಲ್ ಟೆನ್ಶನ್ ಶುರುವಾಗಿದೆ. ಒಂದೆಡೆ ನವೆಂಬರ್ ಕ್ರಾಂತಿಯ ತಲೆನೋವು. ಮತ್ತೊಂದೆಡೆ ಸಂಪುಟ ಪುನಾರಚನೆ ಕೂಗು. ಇವರೆಡೂ ವಿಷಯಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಅದ್ರೂ, ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
ಹೀಗಾಗಿ ಅಳೆದು ತೂಗಿ ಸಿದ್ದರಾಮಯ್ಯ ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ಸಿಎಂ ಮುಂದಾಗಿದ್ದಾರೆ. ಹೀಗಾಗಿಯೇ ಡಿನ್ನರ್ ಪಾಲಿಟಿಕ್ಸ್‌ಗೆ ಮುಂದಾಗಿದ್ದಾರೆ. ತಮ್ಮ ಸಂಪುಟ ಸಹೋದ್ಯೋಗಿಗಳಿಗಾಗಿ ಅಕ್ಟೋಬರ್ 13ರಂದು ಔತಣಕೂಟ ಏರ್ಪಡಿಸಿದ್ದಾರೆ. ಈಗಾಗಲೇ ಎಲ್ಲರಿಗೂ ಮುಖ್ಯಮಂತ್ರಿಗಳ ಸಚಿವಾಲಯದಿಂದಲೇ ಸಂದೇಶ ರವಾನಿಸಲಾಗಿದೆ.
ದೀಪಾವಳಿ ಹಬ್ಬದ ನೆಪದಲ್ಲಿ ಔತಣಕೂಟ ಆಯೋಜಿಸಿದ್ದು, ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆಯಂತೆ. ಹಾಲಿ ಸಚಿವರ ಪೈಕಿ 10ರಿಂದ 15 ಮಂದಿಯನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೀತಿದೆ. ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದೆ. ಡಿಸೆಂಬರ್ ತಿಂಗಳಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಜೊತೆಗೆ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎಂದು, ಕಾಂಗ್ರೆಸ್ ಮೂಲಗಳು ಹೇಳ್ತಿವೆ.