Political News: ತೀವ್ರ ಪರ – ವಿರೋಧದ ನಡುವೆಯೂ ರಾಜ್ಯದಲ್ಲಿನ ಜಾತಿ ಗಣತಿಯ ವರದಿಯು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಎರಡು ಪೆಟ್ಟಿಗೆಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ತರಲಾಗಿದ್ದ ಜಾತಿ ಗಣತಿ ವರದಿಯನ್ನು ಸಭೆಗೆ ಒಪ್ಪಿಸಲಾಗಿತ್ತು. ಅಲ್ಲದೆ ಅದರಲ್ಲಿನ ದತ್ತಾಂಶಗಳನ್ನು ಪಡೆದು ಸಚಿವರು ಸುದೀರ್ಘ ಸಮಾಲೋಚನೆ ನಡೆಸಿದರು. ಬಳಿಕ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ ಸಚಿವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಆದರೆ ಅಂತಿಮವಾಗಿ ಈ ಕುರಿತು ಯಾವುದೇ ಮಾಹಿತಿ ನೀಡದೆ ಸಿಎಂ ಸಿದ್ದರಾಮಯ್ಯ ಮುಂದಿನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಈ ಜಾತಿ ಗಣತಿ ವರದಿಯ ಜಾರಿಯ ವಿಚಾರದಲ್ಲಿ ಸ್ವಪಕ್ಷದ ಶಾಸಕರು ಹಾಗೂ ಸಚಿವರಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಇದರ ಕಾವನ್ನು ಅರಿತ ಸಿದ್ದರಾಮಯ್ಯ ಸದ್ಯದ ಮಟ್ಟಿಗೆ ಅದರ ಜಾರಿಯನ್ನು ಕೈಬಿಟ್ಟಿದ್ದಾರೆ. ಅಲ್ಲದೆ ಸಭೆಯಲ್ಲಿ ಮಂಡನೆಯಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಅವರು ಜಾತಿ ಗಣತಿ ವರದಿಯ ಲಕೋಟೆಯನ್ನು ತೆರೆದು ಸಚಿವ ಸಂಪುಟ ಸಭೆಯ ಮುಂದಿಟ್ಟರು. ಈ ವರದಿಯ ಬಗ್ಗೆ ಸಭೆಯಲ್ಲಿ ಸೂಚ್ಯವಾಗಿ ಇಲಾಖಾ ಕಾರ್ಯದರ್ಶಿ ಸಭೆಗೆ ವಿವರಗಳನ್ನು ನೀಡಿದ್ದರು.
ಏಪ್ರಿಲ್ 17ರಂದು ವಿಶೇಷ ಕ್ಯಾಬಿನೆಟ್..!
ಅಂದಹಾಗೆ ಈ ಮೊದಲಿನಿಂದಲೂ ಜಾತಿ ಗಣತಿ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ಆದರೆ ಅವರು ಇಂದು ನಡೆದ ಸಭೆಯಲ್ಲಿ ಅಷ್ಟೊಂದು ಸ್ಪಷ್ಟನೆಯನ್ನು ನೀಡಿಲ್ಲ. ಬದಲಿಗೆ ಏಪ್ರಿಲ್ 17 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವಿಸ್ತ್ರತವಾಗಿ ಇನ್ನೊಮ್ಮೆ ಚರ್ಚಿಸಲಾಗುವುದು ಎಂದಿದ್ದಾರೆ. ಅಲ್ಲದೆ ಇಂದಿನ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಜಿ ಪರಮೇಶ್ವರ್, ಶಿವರಾಜ್ ತಂಗಡಗಿ, ರಾಮಲಿಂಗ ರೆಡ್ಡಿ, ಹೆಚ್. ಕೆ. ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಭೋಸರಾಜು, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್ , ಶಿವಾನಂದ ಪಾಟೀಲ್, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್ ಹಾಜರಿದ್ದರು. ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಆರು ಮಂದಿ ಸಚಿವರು ಗೈರಾಗಿದ್ದರು.
ವರದಿಯಲ್ಲಿ ಏನಿರಲಿದೆ..?
ಜಾತಿವಾರು ಜನಸಂಖ್ಯಾ ವಿವರ, ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು, ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶಗಳು, 2015 ರ ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿ–2024, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು, ತಾಲ್ಲೂಕುವಾರು, ಜಾತಿವಾರು ಕುಟುಂಬಗಳು ಹಾಗೂ ಜನಸಂಖ್ಯೆಯ ವರದಿ ಹಾಗೂ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತ ದ್ವಿತೀಯ ಮೂಲಗಳಿಂದ ಪಡೆದ ವಿವರಗಳು ಇರಲಿವೆ ಎನ್ನಲಾಗುತ್ತಿದೆ.
54 ಮಾನದಂಡಗಳ ಆಧಾರದಲ್ಲಿನ ಸರ್ವೇ..
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹೆಚ್.ಕಾಂತರಾಜ ನೇತೃತ್ವದದಲ್ಲಿ ಕಳೆದ 2015ರ ಏಪ್ರಿಲ್ 11 ರಿಂದ ಮೇ 30 ರವರೆಗೆ ಸಮೀಕ್ಷೆ ನಡೆಸಲಾಗಿತ್ತು. ಪ್ರಮುಖವಾಗಿ ಈ ಸಮೀಕ್ಷೆಯಲ್ಲಿ ಜಾತಿ ವಿವರವನ್ನು ಸೇರಿದಂತೆ 54 ಮಾನದಂಡಗಳ ಅಧಾರದಲ್ಲಿ ಸರ್ವೇ ಮಾಡಲಾಗಿತ್ತು. ಆದರೆ ಕಾಂತರಾಜ ಆಯೋಗದ ಅವಧಿ ಮುಗಿದ ಬಳಿಕ ಆ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಹಸ್ತಾಂತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ಕಾಂತರಾಜ್ ಸಮೀಕ್ಷೆಯ ದತ್ತಾಂಶ ಉಪಯೋಗಿಸಿಕೊಂಡು ಅಂತಿಮ ವರದಿ ಸಲ್ಲಿಸುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ ಕಳೆದ 2023ರಲ್ಲಿ ಸರ್ಕಾರ ಪತ್ರ ಬರೆದು ಮನವಿ ಮಾಡಿತ್ತು. ಅದರಂತೆ 2015ರ ಸಮೀಕ್ಷೆಯ ಆಧಾರದ ಮೇಲೆ 2024ರ ಫೆಬ್ರವರಿ 29ರಂದು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾಗಿತ್ತು. ಇದಾದ ನಂತರ ಜಾತಿ ಗಣತಿ ವರದಿ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅಂದು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಲಾಗಿದ್ದ ಈ ವರದಿಯು ಇಂದಿನ ಸಂಪುಟ ಸಭೆಯಲ್ಲಿ ಮಂಡನೆ ಆಗಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಇದರ ಬಗ್ಗೆ ವಿರೋಧಗಳು ಕೇಳಿ ಬರುತ್ತಿವೆ ಆದ್ದರಿಂದ ಯಾವುದೇ ನಿರ್ಧಾರವನ್ನು ಸಭೆ ತೆಗೆದುಕೊಂಡಿಲ್ಲ.
ಪ್ರಬಲ ಜಾತಿಗಳಿಂದ ಆಕ್ಷೇಪ..!
ಸದ್ಯ ರಾಜ್ಯದಲ್ಲಿ ಜಾತಿ ಗಣತಿ ವರದಿ ಸದ್ದು ಮಾಡುತ್ತಿದೆ. ಜಾತಿ ಗಣತಿ ವರದಿಯನ್ನು ಅಂಗೀಕಾರ ಮಾಡಲೇಬೇಕು ಎಂದು ಹಿಂದುಳಿದ ವರ್ಗಗಳ ನಾಯಕರು ಪಟ್ಟು ಹಿಡಿದ್ದಾರೆ. ಅದರಲ್ಲೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್, ಸರ್ಕಾರ ಬಿದ್ದರೂ ಪರವಾಗಿಲ್ಲ, ಜಾತಿಗಣತಿ ವರದಿ ಜಾರಿಗೆ ತರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಜಾತಿ ಗಣತಿ ವರದಿಗೆ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯವಿದೆ. ಪ್ರಬಲ ಸಮುದಾಯಗಳಲ್ಲಿ ವರದಿ ಬಗ್ಗೆ ಆತಂಕ ಇದೆ. ಹಿಂದುಳಿದ ವರ್ಗಗಳಲ್ಲಿ ವರದಿ ಬಗ್ಗೆ ನಿರೀಕ್ಷೆಗಳಿವೆ. ಅಲ್ಲದೆ ಇನ್ನೊಂದೆಡೆ ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಬಿಜೆಪಿ ವಿರೋಧಿಸಿದೆ. ಒಂದು ವೇಳೆ ಸರ್ಕಾರ ಈ ವರದಿಯನ್ನು ಪುರಸ್ಕರಿಸಿ ಜಾರಿಗೆ ಮುಂದಾದರೆ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ಈ ಸಮುದಾಯಗಳ ಮುಖಂಡರುಗಳು, ಸ್ವಾಮೀಜಿಗಳು ನೀಡಿದ್ದರು. ಇದಕ್ಕೆ ವೀರಶೈವರು, ಒಕ್ಕಲಿಗರು, ಹಿಂದುಳಿದ ವರ್ಗದ ಪ್ರಬಲ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಬಿಜೆಪಿ ಹಾಗೂ ಸ್ವಪಕ್ಷೀಯ ಶಾಸಕರ ವಿರೋಧದ ನಡುವೆ ಜಾತಿಗಣತಿ ವರದಿ ಮಂಡನೆಯಾಗಿದೆ. ಸಾರ್ವಜನಿಕರ ಮನೆಮನೆಗೆ ಭೇಟಿ ನೀಡದೇ ವರದಿ ತಯಾರಿಸುವ ಈ ವರದಿ ಬಗ್ಗೆ ವಿಪಕ್ಷಗಳು ಗುಮಾನಿ ವ್ಯಕ್ತಪಡಿಸಿದೆ. ಇದನ್ನು ತಿರಸ್ಕರಿಸಬೇಕೆಂಬ ಒತ್ತಾಯಗಳು ಕೂಡ ಸರ್ಕಾರಕ್ಕೆ ಕೇಳಿ ಬರುತ್ತಿವೆ. ಆದರೆ ಜಾತಿ ಗಣತಿ ಜಾರಿಗೆ ತರುವಲ್ಲಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎನ್ನುವ ಮೂಲಕ ಅಂತಿಮವಾಗಿ ಪರ – ವಿರೋಧದ ಜಾತಿಯ ಜೇನು ಗೂಡಿಗೆ ಕೈ ಹಾಕಿರುವ ಸಿದ್ದರಾಮಯ್ಯ ಮುಂದೆ ಯಾವೆಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.