ಕಪ್ಪು ಅಂದರೆ ಹಿಂದೂ ಧರ್ಮದಲ್ಲಿ ಅಷ್ಟೇನು ಹೆಚ್ಚಿನ ಮಹತ್ವವನ್ನು ಹೊಂದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಹಾಕಲು ಬಿಡುವುದಿಲ್ಲ. ಕಪ್ಪು ತಿಲಕವನ್ನು ಎಲ್ಲಿಯೂ ಹಚ್ಚಲ್ಲ. ಕಪ್ಪು ದಾರವನ್ನ ಕೂಡ ಪೂಜೆ ಸಮಮಯದಲ್ಲಿ ಕಟ್ಟಲಾಗುವುದಿಲ್ಲ. ಆದರೂ ಕಪ್ಪು ಬಣ್ಣದ ದಾರ ಮತ್ತು ಕಪ್ಪು ಬೊಟ್ಟನ್ನು ಇಡುತ್ತಾರಲ್ಲ ಅದು ಯಾಕೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಪ್ಪು ಬಣ್ಣ ಶನಿದೇವರಿಗೆ ಇಷ್ಟವಾದ ಬಣ್ಣ. ಸಾಢೇಸಾಥಿ, ಪಂಚಮಶನಿ ಇತ್ಯಾದಿ ಸಮಸ್ಯೆ ಇದ್ದವರೆಲ್ಲ, ಶನಿವಾರದ ದಿನ ಕಪ್ಪು ಎಳ್ಳು, ಕಪ್ಪು ಬಟ್ಟೆಯನ್ನ ದಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಶನಿಯ ಅನುಗ್ರಹ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನೊಂದೆಡೆ ಕಪ್ಪು ದಾರವನ್ನು ಇಂದಿನ ಹುಡುಗಿಯರು ಫ್ಯಾಷನ್ ಅಂತಾ ಹಾಕ್ತಾರೆ. ಆ ಕಪ್ಪು ದಾರಕ್ಕೆ ಮುತ್ತು, ಕುಂದನ್, ಗೆಜ್ಜೆ ಎಲ್ಲ ಹಾಕಿ, ಅದಕ್ಕೊಂದಿಷ್ಟು ಸಿಂಗಾರ ಮಾಡಿ, ಕಾಲಿಗೆ ಕಟ್ಟುತ್ತಾರೆ. ಆದರೆ ಆಕಪ್ಪು ದಾರವನ್ನು ಯಾಕೆ ಕಟ್ಟುತ್ತಾರೆಂಬ ಸತ್ಯ ಮಾತ್ರ ಅವರಿಗೆ ಗೊತ್ತಿರುವುದಿಲ್ಲ.
ಕಪ್ಪು ಬೊಟ್ಟು ಮತ್ತು ಕಪ್ಪು ದಾರ ಕಟ್ಟುವುದರ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಸತ್ಯ ಅಡಗಿದೆ. ನಕಾರಾತ್ಮಕ ಶಕ್ತಿಯಿಂದ ದೂರವಿರಲು ಕಪ್ಪು ದಾರ ಮತ್ತು ಬೊಟ್ಟನ್ನು ಹಾಕಲಾಗುತ್ತದೆ. ಆದ್ದರಿಂದಲೇ ಚಿಕ್ಕ ಮಕ್ಕಳಿಗೆ ಕಾಡಿಗೆಯನ್ನು ಹಚ್ಚಲಾಗತ್ತೆ. ಮತ್ತು ದಾರಿಯಲ್ಲಿ ಹೋಗುವಾಗ, ಮಂತ್ರಿಸಿದ ವಸ್ತುವನ್ನ ಮೆಟ್ಟಿದರೆ, ಅದರಲ್ಲಿರುವ ನಕಾರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮೇಲೆ ಬೀಳದಿರಲಿ ಎಂದು ಕಪ್ಪು ದಾರವನ್ನು ಕಾಲಿಗೆ ಕಟ್ಟಲಾಗತ್ತೆ.
ಅಲ್ಲದೇ, ಮಕ್ಕಳಿಗೆ ದೃಷ್ಟಿ ತಾಗಬಾರದೆಂದು ಕಾಡಿಗೆಯನ್ನ ಹಚ್ಚಲಾಗತ್ತೆ. ಇನ್ನು ಕಪ್ಪು ಬಣ್ಣದ ಬೊಟ್ಟು ಮತ್ತು ಕಪ್ಪು ದಾರವನ್ನು ಬಳಸುವುದರಿಂದ ಕಾಲ ಭೈರವನ ಕೃಪೆ ನಮ್ಮ ಮೇಲಿರುತ್ತದೆ ಅನ್ನೋ ನಂಬಿಕೆಯೂ ಇದೆ. ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ಹೊಟ್ಟೆ ನೋವಿನ ಸಮಸ್ಯೆ, ಕೈ ಮತ್ತು ಕಾಲಿಗೆ ಕಟ್ಟುವುದರಿಂದ ಕೈ ಕಾಲು ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಂತಾನೂ ಹೇಳಲಾಗುತ್ತದೆ.




