ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಲೇ ಇದೆ. ಈ ಪುಸ್ತಕದ ಬಗ್ಗೆ ಈಗ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ವಿವಾದ ಶುರುವಾಗಿದೆ. ವೀರ ಸಾವರ್ಕರ್ ಮತ್ತು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರಿಗೆ ಪುಸ್ತಕದಲ್ಲಿ ಅವಮಾನ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಬಣ ಪುಸ್ತಕವನ್ನೇ ಬ್ಯಾನ್ ಮಾಡಬೇಕು ಅಂತ ಆಗ್ರಹಿಸಿದೆ. ಅಷ್ಟಕ್ಕೂ ಸೋನಿಯಾ ಪುಸ್ತಕದಲ್ಲಿ ಅಂಥದ್ದೇನಿದೆ? ಉದ್ಧವ್ ಠಾಕ್ರೆ ವಿರುದ್ಧವೂ ಶಿವಸೇನೆ ನಾಯಕರು ಕಿಡಿಕಾರಿದ್ದೇಕೆ? ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಇದೀಗ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ. ಪುಸ್ತಕದಲ್ಲಿ ವೀರ ಸಾವರ್ಕರ್ ಮತ್ತು ಆರ್ಎಸ್ಎಸ್ ಕುರಿತು ಮಾಡಿರುವ ಟೀಕೆಗಳು ವಿವಾದಕ್ಕೆ ಕಾರಣವಾಗಿವೆ.
ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದರು. ಆರ್ಎಸ್ಎಸ್ನ ಕೆಲವು ಸಿದ್ಧಾಂತವಾದಿಗಳು ಬ್ರಿಟಿಷರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದರು ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಹಿಂದೂ ರಾಷ್ಟ್ರದ ಪರಿಕಲ್ಪನೆ, ಅಲ್ಪಸಂಖ್ಯಾತರ ಸ್ಥಾನಮಾನ ಮತ್ತು ಆರ್ಎಸ್ಎಸ್ ಸಿದ್ಧಾಂತಗಳ ಬಗ್ಗೆಯೂ ಟೀಕೆ ಮಾಡಿದ್ದಾರೆ.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ವಕ್ತಾರ ಸಂಜಯ್ ನಿರುಪಮ್, ಇದು ಪ್ರೀತಿಯ ಪಯಣವಲ್ಲ, ದ್ವೇಷದ ಪಯಣ ಎಂದು ವಾಗ್ದಾಳಿ ನಡೆಸಿದ್ದಾರೆ. ಪುಸ್ತಕವನ್ನು ಮಹಾರಾಷ್ಟ್ರದಲ್ಲಿ ನಿಷೇಧಿಸಬೇಕು ಮತ್ತು ವಿವಾದಾತ್ಮಕ ಪುಟಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಬಾಳಾಸಾಹೇಬ್ ಠಾಕ್ರೆ ಮತ್ತು ಸಾವರ್ಕರ್ ವಿಚಾರದಲ್ಲಿ ಉದ್ಧವ್ ಠಾಕ್ರೆ ಮೌನವಾಗಿರುವುದೇಕೆ ಎಂದು ಶಿಂಧೆ ಬಣ ಪ್ರಶ್ನಿಸಿದೆ.
ಹೀಗಾಗಿ ಸೋನಿಯಾ ಗಾಂಧಿ ಆತ್ಮಕಥೆ ಈಗ ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಸಮರಕ್ಕೆ ಕಾರಣವಾಗಿದೆ.




