Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು ಮಾಡಿದ್ದು ನೀನು ಮುಂದೆ ಅನುಭವಿಸುತ್ತೀಯಾ ಎಂದಾಗ, ನಿಮಗೆ ಖುಷಿಯಾಗಬೇಕು. ಆ ರೀತಿ ನೀವು ಬರೀ ಉತ್ತಮ ಕಾರ್ಯಗಳನ್ನೇ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಇಂದು ನಾವು ಯಾವ ಕೆಲಸಗಳನ್ನು ಮಾಡಿದರೆ ಅದೃಷ್ಟ ನಮ್ಮ ಪಾಲಾಗುತ್ತದೆ ಎಂದು ಹೇಳಲಿದ್ದೇವೆ.
ಹಿರಿಯರಿಗೆ, ಪಿತೃಗಳಿಗೆ ಗೌರವ ನೀಡುವುದು: ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ. ತೀರಿಹೋದ ಪಿತೃಗಳ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಇವೆರಡು ಕೆಲಸಗಳು ಸಮಯಕ್ಕೆ ಸರಿಯಾಗಿ ಆದಾಗ ಮಾತ್ರ ದೇವರು ನಿಮಗೆ ನೆಮ್ಮದಿ ಮತ್ತು ಅದೃಷ್ಟ ನೀಡುತ್ತಾನೆ. ಇಲ್ಲವಾದಲ್ಲಿ, ನಿಮ್ಮ ಜೀವನದಲ್ಲಿ ಬರೀ ನಷ್ಟಗಳೇ ಸಂಭವಿಸುತ್ತದೆ.
ಗೋಪೂಜೆ ಮಾಡುವುದು: ಗೋಪೂಜೆ ಎಂದರೆ ಗೋ ಸೇವೆ. ಗೋವಿಗೆ ಆಹಾರ ನೀಡುವುದು. ಗೋವನ್ನು ರಕ್ಷಿಸುವ ಕಾರ್ಯ. ಗೋವಿನ ಕಾಳಜಿ ಮಾಡುವುದು. ಗೋವಿನ ಮೇಲಾಗುವ ಹಿಂಸೆಯನ್ನು ತಡೆಯುವುದು ಇದೆಲ್ಲವೂ ಗೋಸೇವೆಯೇ. ಗೋಸೇವೆಯಿಂದ ನಿಮ್ಮ ಜೀವನದಲ್ಲಿ ಅದೃಷ್ಟ ಬರುವುದಲ್ಲದೇ, ಜೀವನ ನೆಮ್ಮದಿಯಾಗಿರುತ್ತದೆ. ಮತ್ತು ಯಾರು ಗೋವನ್ನು ಹಿಂಸಿಸುತ್ತಾರೋ, ಅಂಥವರಿಗೆ ಸಂತಾನದಿಂದಲೇ ನೆಮ್ಮದಿ ಹಾಳಾಗುತ್ತದೆ.
ದೇವರಲ್ಲಿ ಭಕ್ತಿ ಮಾಡುವುದು: ದೇವರಲ್ಲಿ ಭಕ್ತಿ ಇದ್ದರೆ ಮಾತ್ರ ಓರ್ವ ವ್ಯಕ್ತಿ ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯ. ಏಕೆಂದರೆ ದೇವರ ಮೇಲೆ ನಂಬಿಕೆ ಇರಿಸಿದವನು ಮಾತ್ರ ಜೀವನದಲ್ಲಿ ಕೆಟ್ಟ ಕೆಲಸ ಮಾಡಲು ಭಯಪಡುತ್ತಾನೆ. ಹಾಗಾಗಿ ದೇವರಲ್ಲಿ ಭಕ್ತಿ ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಹಾಗಂತ ಭಕ್ತಿ ಮನಸ್ಸಿಂದ ಮಾಡಬೇಕೆ ವಿನಃ ಆಡಂಬರಕ್ಕಾಗಿ ಅಲ್ಲ.
ಧರ್ಮ ಮಾರ್ಗ ಅನುಸರಣೆ: ಧರ್ಮ ಮಾರ್ಗದಲ್ಲಿ ನಡೆಯುವುದರಿಂದ ಮನುಷ್ಯ ಜೀವನದಲ್ಲಿ ನೆಮ್ಮದಿ ಇರುತ್ತದೆ. ಅದು ಆರ್ಥಿಕ ನೆಮ್ಮದಿಯೋ ಆಗಿರಲಿ, ಆರೋಗ್ಯವೇ ಆಗಲಿ. ಮತ್ತು ಯಾವ ಮನುಷ್ಯ ಅಧರ್ಮದಿಂದ ಅಂದರೆ ಲಂಚ ಪಡೆಯುವುದು, ಮೋಸ ಮಾಡುವುದು, ಕಳ್ಳತನ ಮಾಡುವುದು. ಈ ಎಲ್ಲ ಕೆಲಸವೂ ಮನುಷ್ಯನಿಗೆ ಆ ಕ್ಷಣದ ಸುಖ ನೀಡಿದರೂ, ಅದು ನೆಮ್ಮದಿ ನಾಶಕ್ಕೆ ಹಾದಿಯಾಗಿರುತ್ತದೆ.
ದಾನ ಮಾಡುವುದು: ನಿಮಗೆ ಬರುವ ದುಡಿಮೆಯ ಹಣದಲ್ಲಿ ನೀವು ಅರ್ಧ ಭಾಗ ಉಳಿತಾಯಕ್ಕೆ, ಕಾಲು ಭಾಗ ಖರ್ಚಿಗೆ ಮತ್ತು ಸಣ್ಣ ಪ್ರಮಾಣ ದಾನಕ್ಕಾಗಿ ಮೀಸಲಿಡಬೇಕು. ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಆದರೆ ನೀವು ತೋರಿಕೆಗಾಗಿ ದಾನ ಮಾಡಿದರೆ ಅಥವಾ ದಾನ ಮಾಡಿ, ಅಹಂಕಾರ ಮಾಡಿದರೆ, ಪುಣ್ಯದ ಫಲ ನಿಮಗೆ ಸಿಗುವುದಿಲ್ಲ.

