Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು ಹೇಳಿದ್ದನ್ನು ಕೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಬಳಿಕ ಏನಾಯ್ತು ಅಂತಾ ತಿಳಿಯೋಣ.
ಮರುದಿನ ಕರಮಾ ಬಾಯಿ ಸ್ನಾನ ಮಾಡಿ, ಪೂಜೆ ಮಾಡಿ, ಅಡುಗೆ ಮಾಡಬೇಕು ಎನ್ನುವಷ್ಟರಲ್ಲಿ ಜಗನ್ನಾಥ ಮನೆಗೆ ಬಂದುಬಿಡುತ್ತಾನೆ. ಆದರೆ ಕರಮಾಬಾಯಿ ಇನ್ನೂ ಕಿಚಡಿ ಮಾಡಿರುವುದಿಲ್ಲ. ಸ್ನಾನ ಮಾಡಿ, ಪೂೆಜಮ ಮಾಡುವ ಕಾರಣಕ್ಕೆ ತಡವಾಗಿರುತ್ತದೆ. ಆದರೆ ಕರಮಾಬಾಯಿ ಶ್ಲೋಕ ಹೇಳುವುದು ಬಾಕಿ ಇರುತ್ತದೆ. ಆಕೆ ಹಾಗೆ ನಿಧಾನಕ್ಕೆ ಕಿಚಡಿ ಮಾಡಿದಾಗ, ಜಗನ್ನಾಥ, ಕರಮಾಬಾಯಿ ಬೇಗ ಬೇಗ ಕಿಚಡಿ ಮಾಡು, ನನಗೆ ಹಸಿವಾಗುತ್ತಿದೆ. ಇನ್ನು ಕೆಲವೇ ನಿಮಿಷದಲ್ಲಿ ದೇವಸ್ಥಾನದಲ್ಲಿ ಆರತಿ ಆರಂಭವಾಗುತ್ತದೆ. ಆಗ ನಾನಲ್ಲಿರಬೇಕು ಎನ್ನುತ್ತಾನೆ.
ಕರಮಾಬಾಯಿ ಬಿಸಿ ಬಿಸಿ ಕಿಚಡಿ ತಂದು ಬಡಿಸುತ್ತಾಳೆ. ಅದನ್ನು ಬೇಗ ಬೇಗ ತಿಂದು, ಜಗನ್ನಾಥ ದೇವಸ್ಥಾನಕ್ಕೆ ಹೋಗುತ್ತಾನೆ. ಆಗ ತಾನೇ ದೇವಸ್ಥಾನಕ್ಕೆ ಬಂದು ಬಾಗಿಲು ತೆಗೆದ ಅರ್ಚಕರಿಗೆ ಆಶ್ಚರ್ಯ ಕಾದಿರುತ್ತದೆ. ಜಗನ್ನಾಥನ ಬಾಯಿಗೆ ಕಿಚಡಿ ತಾಕಿರುತ್ತದೆ. ಅದನ್ನು ಸ್ಪರ್ಶಿಸಲು ಹೋದಾಗ, ಅರ್ಚಕರ ಕೈ ಸುಡುತ್ತದೆ. ಬಳಿಕ ಅರ್ಚಕರು ಜಗನ್ನಾಥನನ್ನು ಶುದ್ಧ ಮಾಡಿ, ಅಲಂಕಾರ ಮಾಡಿ, ನೈವೇದ್ಯ, ಆರತಿ ಮಾಡಿ, ಪೂಜೆ ಮುಗಿಸಿ, ಮನೆಗೆ ತೆರಳುತ್ತಾರೆ.
ರಾತ್ರಿ ಅರ್ಚಕರ ಕನಸ್ಸಿನಲ್ಲಿ ಜಗನ್ನಾಥ ಬರುತ್ತಾನೆ. ನಾನು ಪ್ರತಿದಿನ ಬೆಳಿಗ್ಗೆ ಕರಮಾಬಾಯಿ ಮನೆಗೆ ಹೋಗಿ, ಆರಾಮವಾಗಿ ಕುಳಿತು, ರುಚಿ ರುಚಿಯಾದ ಕಿಚಡಿ ಸೇವಿಸಿ ಬರುತ್ತಿದ್ದೆ. ಆದರೆ ನೀನು ಕರಮಾಬಾಯಿಯ ಬಳಿ ಹೋಗಿ, ಆಕೆಗೆ ಸ್ನಾನ ಮಾಡು, ಪೂಜೆ ಮಾಡು, ಶ್ಲೋಕ ಹೇಳು ನಂತರ ಕಿಚಡಿ ಮಾಡು ಎಂದು ಹೇಳಿ ಬಂದೆ. ಇಂದು ಆಕೆ ಹಾಗೆ ಮಾಡಿದ್ದಕ್ಕೆ ನಾನು ಬಿಸಿ ಬಿಸಿ ಕಿಚಡಿ ತಿಂದು ನಾಲಿಗೆ ಸುಟ್ಟುಕ“ಂಡು ಬಂದೆ. ನನ್ನನ್ನು ಮುಟ್ಟಿ ನಿಮ್ಮ ಕೈ ಹೀಗೆ ಸುಟ್ಟಿರುವಾಗ, ಆ ಬಿಸಿ ಬಿಸಿ ಕಿಚಡಿ ತಿಂದು ನನ್ನ ಬಾಯಿ ಹೇಗೆ ಸುಟ್ಟಿರಬಾರದು ಯೋಚನೆ ಮಾಡು. ನನಗೆ ಆಕೆಯ ಬಾಹ್ಯ ಶುಚಿತ್ವಕ್ಕಿಂತ, ಆಂತರಿಕ ಭಕ್ತಿ, ಭಾವವಿಷ್ಟ. ಹಾಗಾಗಿ ಆಕೆ ಪ್ರತಿದಿನ ಹೇಗೆ ನೈವೇದ್ಯ ಮಾಡುತ್ತಾಳೋ ಹಾಗೇ ಮಾಡಲಿ ಎನ್ನುತ್ತಾನೆ.
ಅಚಾನಕ್ಕಾಗಿ ಎದ್ದು ಕುಳಿತ ಅರ್ಚಕರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಅವರು ಬೆಳಿಗ್ಗೆ ಬೇಗ ಎದ್ದು ಕರಮಾ ಬಾಯಿ ಮನಗೆ ಹೋಗಿ, ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿ, ನೀನು ನಿಜವಾಗಿಯೂ ಪುಣ್ಯವಂತಳು. ನೀನು ಯಾವ ಸ್ನಾನ, ಪೂಜೆ ಏನೂ ಮಾಡುವುದು ಬೇಡ. ಮುಂಚಿನಂತಲೇ ನೈವೇದ್ಯ ಮಾಡಿ, ಜಗನ್ನಾಥನಿಗೆ ಬಡಿಸು ಎನ್ನುತ್ತಾರೆ.
ಹಾಗಾಗಿಯೇ ಈ ದೇವಸ್ಥಾನದಲ್ಲಿ ಇಂದಿಗೂ ಪ್ರತಿದಿನ ಕಿಚಡಿ ನೈವೇದ್ಯ ಮಾಡಲಾಗುತ್ತದೆ. ಅದೇ ಪ್ರಸಾದವನ್ನು ಭಕ್ತರಿಗೆ ಹಂಚಲಾಗುತ್ತದೆ.




