Spiritual: ಮಕರ ಸಂಕ್ರಾಂತಿ ಹಬ್ಬವನ್ನೇಕೆ ಆಚರಿಸಬೇಕು..? ಮಾಸಿ ಹೋಗುತ್ತಿದೆಯಾ ಹಬ್ಬದ ಗಮ್ಮತ್ತು..?

Spiritual: ಸಂಕ್ರಾಂತಿ ಹಬ್ಬ ಬಂದೇಬಿಡ್ತು. ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬ ಆಚರಿಸಲು ಜನ ತಯಾರಿ ನಡೆಸುತ್ತಿದ್ದಾರೆ. ಆದರೆ ಯುವ ಪೀಳಿಗೆಯ ಕೆಲ ಜನ ದುಡಿಮೆ, ಓದು, ಕೆಲಸ ಇದರಲ್ಲೇ ಬ್ಯುಸಿ ಇದ್ದಾರೆ. ಹಾಗಾಗಿ ಹಿರಿಯರು ಈಗಲೇ ಎಚ್ಚೆತ್ತು, ಮಕ್ಕಳಿಗೆ ಹಬ್ಬದ ಪದ್ಧತಿ, ಆಚರಣೆ ಬಗ್ಗೆ ತಿಳಿಸುವುದು ತುಂಬಾ ಮುಖ್ಯವಾಗಿದೆ.

ನಾವೆಲ್ಲ ಈ ಹಬ್ಬವನ್ನು ಸಂಕ್ರಾಂತಿ, ಸುಗ್ಗಿಹಬ್ಬ ಅಂತೆಲ್ಲಾ ಕರಿತೀವಿ. ಈ ದಿನ ಎಳ್ಳು-ಬೆಲ್ಲ ಸೇರಿಸಿ, ಹಂಚಿ ಸವಿಯುತ್ತೇವೆ. ಹಳ್ಳಿ ಕಡೆ ಜನ ಬುತ್ತಿ ಊಟ ತೆಗೆದುಕ“ಂಡು ನದಿ ಕಡೆ ಹೋಗಿ, ನದಿಗೆ ಪೂಜೆ ಮಾಡಿ ಊಟ ಮಾಡುತ್ತಾರೆ. ಇನ್ನು ಕೆಲವರು ಎತ್ತುಗಳಿಗೆ ಪೂಜೆ ಮಾಡಿ, ತಾವು ಬೆಳೆದ ಬೆಳೆಯನ್ನು ಇರಿಸಿ ಪೂಜೆ ಮಾಡುತ್ತಾರೆ. ಮತ್ತೆ ಕೆಲವರು ಮನೆಯಲ್ಲಿ ಮಕ್ಕಳಿಗೆ ಸಂಕ್ರಾಂತಿ ಕರಿ ಎರೆದು ಸಂಭ್ರಮಿಸುತ್ತಾರೆ.

ಅದೇ ರೀತಿ ತಮಿಳಿಗರು ಇದನ್ನು ಪೊಂಗಲ್ ಎನ್ನುತ್ತಾರೆ. ಸಿಹಿ ಮಾಡಿ ಸವಿಯುತ್ತಾರೆ. ಆಂಧ್ರಪ್ರದೇಶದವರು ಸಂಕ್ರಾಂತಿಯನ್ನು ಬೆದ್ದ ಪಂಡುಕಾ ಎನ್ನುತ್ತಾರೆ. ಪಂಜಾಬಿಗಳು ಇದನ್ನು ಲೋಹ್ರಿ ಎನ್ನುತ್ತಾರೆ. ಉತ್ತರ ಭಾರತೀಯರು ಕೂಡ ಈ ಹಬ್ಬವನ್ನು ಮಕರ ಸಂಕ್ರಾಂತಿ ಎಂದೇ ಆಚರಿಸುತ್ತಾರೆ. ಗುಜರಾತಿಗಳು ಉತ್ತರಾಯಣ ಎಂದರೆ, ಅಸ್ಸಾಮಿಗರು ಮಾಘ ಬಿಹು ಎನ್ನುತ್ತಾರೆ.

ಮಘಾ ಸಾಜಿ ಎಂದು ಹಿಮಾಚಲಿಗಳು ಸಂಕ್ರಾಂತಿ ಆಚರಿಸುತ್ತಾರೆ. ಬೆಂಗಾಲಿಗರು ಇದನ್ನು ಪೌಶ್ ಬೌಬನ್ ಎಂದು ಕರೆಯುತ್ತಾರೆ. ದೆಹಲಿ, ಬಿಹಾರ, ಹರ್ಯಾಣಾದವರು ಸಾಕ್ರತ್ ಎನ್ನುತ್ತಾರೆ. ಹೀಗೆ ಭಾರತದ ಹಲವೆಡೆ ಸಂಕ್ರಾಂತಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಕರೆದು, ಬೇರೆ ಬೇರೆ ರೀತಿಯಾಗಿ ಸಂಭ್ರಮಿಸುತ್ತಾರೆ. ತಮ್ಮದೇ ಆದ ಪದ್ಧತಿಯಿಂದ ಪೂಜಿಸುತ್ತಾರೆ.

ಈ ಹಬ್ಬವನ್ನೇಕೆ ಆಚರಿಸುವುದೆಂದರೆ, ಸೂರ್ಯ ಮತ್ತು ನಾವು ಬೆಳೆದ ಬೆಳೆ ಮತ್ತು ನಾವು ಸಾಕಿದ ಪ್ರಾಣಿಗಳಿಗೆ ಕೃತಜ್ಞತೆ ಸಲ್ಲಿಸಲು ಆಚರಿಸಲಾಗುತ್ತದೆ. ಹಾಗಾಗಿ ಹಬ್ಬದ ಹೆಸರು ಬೇರೆ ಬೇರೆಯಾದರೂ, ಕೃತಜ್ಞತೆ ಹೇಳುವ ಪದ್ಧತಿ ಮಾತ್ರ ಸೇಮ್.

ಯುವಜನತೆಗೂ ತಿಳಿದಿರಲಿ ಹಬ್ಬದ ಪದ್ಧತಿ

ಮುಂಚಿನಂತೆ ಈಗಿನ ಮಕ್ಕಳಲ್ಲಿ ಹಬ್ಬದ ಸಂಭ್ರಮವಿಲ್ಲ. ಮುಂಚೆ ಎಲ್ಲ ದುಡ್ಡಿಲ್ಲದಿದ್ದರೂ, ಪದ್ಧತಿ ಆಚರಣೆ ಇತ್ತು. ಹಬ್ಬದ ಗಮ್ಮತ್ತಿತ್ತು. ಇದ್ದುದರಲ್ಲೇ ಹಂಚಿ ತಿನ್ನುವ ಸಂಭ್ರಮವಿತ್ತು. ಆದರೆ ಈಗ ಅದೆಲ್ಲ ಇಲ್ಲ. ಎಲ್ಲರೂ ದುಡಿಮೆಯಲ್ಲಿ ಬ್ಯುಸಿಯಾಗಿದ್ದಾರೆ. ನೀವು ಎಷ್ಟೇ ಬ್ಯುಸಿ ಇದ್ದರೂ, ನಿಮ್ಮ ಮಕ್ಕಳಿಗೆ ಹಬ್ಬ ಆಚರಿಸುವ ಪದ್ಧತಿಯ ಬಗ್ಗೆ ತಿಳಿಸಿ. ಬಾಲ್ಯದ ಹಬ್ಬದ ಗಮ್ಮತ್ತಿನ ಬಗ್ಗೆ ತಿಳಿಸಿ. ನಿಮ್ಮ ಮಾತು ಕೇಳಿಯೇ, ನಾವೂ ಹಬ್ಬವನ್ನು ಆಚರಿಸೋಣ, ಪದ್ಧತಿ ಮುಂದುವರೆಸೋಣವೆಂಬ ಮನಸ್ಸು ಮಕ್ಕಳಿಗೆ ಬರುವಂತೆ ಮಾಡಿ. ಹಬ್ಬದ ಸಂಭ್ರಮ ಎಂದಿಗೂ ನಶಿಸಿ ಹೋಗದಿರಲಿ.

About The Author