Political News: ಕಾಂಗ್ರೆಸ್ ಪಕ್ಷದ ನಾಟಕಗಳನ್ನು ನೋಡಿ ನೋಡಿ ಜನರು ಬೇಸತ್ತಿದ್ದಾರೆ: ಬಿ.ವೈ.ವಿಜಯೇಂದ್ರ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ನಿನ್ನೆ ಕಲಬುರಗಿಯಲ್ಲಿ ನಡೆದ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಟಕಗಳನ್ನು ನೋಡಿ ನೋಡಿ ಜನರು ಬೇಸತ್ತಿದ್ದಾರೆ. ಐದಾರು ದಶಕಗಳಿಂದ ಅಧಿಕಾರ ಅನುಭವಿಸಿ, ಒಂಬತ್ತು ಬಾರಿ ಶಾಸಕ, ಸಂಸದ, ಕೇಂದ್ರ ಸಚಿವರು, ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ನಂತರವೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸನ್ಮಾನ್ಯ ಶ್ರೀ ಖರ್ಗೆ ಅವರು, ಈಗ ಅಸಹಾಯಕರಂತೆ ಬೇಡುತ್ತಿರುವ ನಾಟಕ, ನಿಮ್ಮ ವೈಫಲ್ಯಗಳ ಪ್ರದರ್ಶನವಷ್ಟೇ! ಎಂದು ವಿಜಯೇಂದ್ರ ಜರಿದಿದ್ದಾರೆ.

ಅರ್ಧ ಶತಮಾನದಷ್ಟು ಕಾಲ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇತ್ತು, ಈಗ ರಾಜ್ಯದಲ್ಲೂ ನಿಮ್ಮದೇ ಸರ್ಕಾರ ಇದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರು ತಮ್ಮ ಮೇಲಿಟ್ಟ ಭರವಸೆಯನ್ನು, ಸ್ವಾರ್ಥ ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿದ್ದು ಯಾರೆಂದು ಇದರಿಂದಲೇ ಸಾಬೀತಾಗಿದೆ! ಅಧಿಕಾರವಿದ್ದಾಗ ಅಭಿವೃದ್ಧಿ ಮಾಡದೆ, ಈಗ ವೇದಿಕೆ ಮೇಲೆ ದಯನೀಯವಾಗಿ ಬೇಡುವ ನಾಟಕವಾಡಿ ಜನರನ್ನು ಮರುಳು ಮಾಡುವುದು ಸಾಧ್ಯವಿಲ್ಲ!

ಪ್ರಸಿದ್ಧ ಸೋಮನಾಥ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದ ಪ್ರಧಾನಿಯವರನ್ನು ಟೀಕಿಸುವ ಮಾನ್ಯ ಖರ್ಗೆಯವರೇ, ಇನ್ನು ಎಷ್ಟು ದಿನ ನಿಮ್ಮೊಳಗಿರುವ ನಂಜನ್ನು ಬಯಲು ಮಾಡಿಕೊಳ್ಳುತ್ತೀರಿ? ನಾಡಿನ ಇತಿಹಾಸ ಮತ್ತು ಅಸ್ಮಿತೆಯ ಮೇಲೆ ನಿಮಗೇಕೆ ಇಷ್ಟು ಅಸಹನೆ? ಸೋಮನಾಥ ಭಾರತದ ಪುನರುತ್ಥಾನದ ಸಂಕೇತ. ಅದನ್ನು ಚುನಾವಣೆಗೆ ತಳುಕು ಹಾಕುವುದು ನಿಮ್ಮ ವೈಚಾರಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ಪಕ್ಷದ ನಾಯಕರು ದೇಗುಲದ ಪುನರುತ್ಥಾನಕ್ಕೂ ಅಡ್ಡಿ ಪಡಿಸಿದ್ದ ಮಹಾನುಭಾವರು! ದೇಶದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಶ್ರದ್ಧೆಗಳ ಬಗ್ಗೆ ಮಾತನಾಡುವ ನೈತಿಕತೆ ನಿಮ್ಮ ಪಕ್ಷ ಎಂದೋ ಕಳೆದುಕೊಂಡಿದೆ. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ರವರು ಇತಿಹಾಸದ ಪುನರುತ್ಥಾನದ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟುತ್ತಿದ್ದಾರೆ ಎಂದು ವಿಜಯೇಂದ್ರ ಮೋದಿಜಿ ಪರ ಬ್ಯಾಟ್ ಬೀಸಿದ್ದಾರೆ.

ಮೋದಿ ಜೀ ರವರ ನೇತೃತ್ವದಲ್ಲಿ, ಈ 11 ವರ್ಷಗಳಲ್ಲಿ, 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಒಂದು ದಿನವೂ ವಿರಮಿಸದೆ, ದೇಶದ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತಿರುವ ಹೆಮ್ಮೆಯ ಪ್ರಧಾನಿಗಳ ಬಗ್ಗೆ, ಸತತವಾಗಿ ಅಧಿಕಾರದ ಸ್ಥಾನದಲ್ಲಿದ್ದೂ, ಅಭಿವೃದ್ಧಿ ಕೆಲಸ ಮಾಡದೆ, ನಿಮ್ಮ ಪಕ್ಷದ ವೇದಿಕೆಯಲ್ಲಿ, ನೀವು ಏನೇ ಮಾತನಾಡಿದರೂ, ಜನರು ಖಂಡಿತ ಮರುಳಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

About The Author