ಗಾಲೆ: ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ಪಾಕಿಸ್ಥಾನವು ದ್ವಿತೀಯ ಇನ್ನಿಂಗ್ಸ್‍ನಲ್ಲಿ ಶ್ರೀಲಂಕಾಕ್ಕೆ ಪ್ರಹಾರವಿಕ್ಕಲು ಸಫಲವಾಗಿದೆ. ಪಂದ್ಯದ ಮೂರನೇ ದಿನದಂತ್ಯಕ್ಕೆ 176 ರನ್‍ಗಳಿಗೆ ಲಂಕಾದ 5 ವಿಕೆಟ್‍ಗಳನ್ನು ಕಿತ್ತಿರುವ ಪಾಕಿಸ್ಥಾನವು ಪಂದ್ಯವನ್ನು ತನ್ನೆಡೆಗೆ ತಿರುಗಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ಈ ಹಿನ್ನಡೆಯ ಹೊರತಾಗಿಯೂ ಶ್ರೀಲಂಕಾವು ಒಟ್ಟು 323 ರನ್‍ಗಳ ಮುನ್ನಡೆ ಹೊಂದಿದೆ. ಆದರೆ ಮೊದಲ ಟೆಸ್ಟಿನಲ್ಲಿ ಮೊದಲ ಇನ್ನಿಂಗ್ಸ್ ಕೊರತೆಯ ಹೊರತಾಗಿಯೂ ಪಾಕಿಸ್ಥಾನವು ಪಂದ್ಯ ಗೆದ್ದಿರುವುದರಿಂದ ಲಂಕಾವು ತನ್ನ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ.
ಮುಂಜಾನೆಯ ಅವಯಲ್ಲಿ ಶ್ರೀಲಂಕಾ ಬೌಲರುಗಳು ಪಾಕಿಸ್ಥಾನದ ಕೊನೆಯ ಮೂರು ವಿಕೆಟ್‍ಗಳನ್ನು ಬೇಗನೆ ಕೀಳಲು ಸಫಲರಾಗಿದ್ದರು. ಇದರಿಂದ ಪಾಕಿಸ್ಥಾನವು 231 ರನ್‍ಗಳಿಗೆ ಆಲೌಟಾಗಿ 142 ರನ್‍ಗಳ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿತ್ತು. ರಮೇಶ್ ಮೆಂಡಿಸ್ 5 ವಿಕೆಟ್ ಪಡೆದರು.
ಶ್ರೀಲಂಕಾದ ಎರಡನೇ ಇನ್ನಿಂಗ್ಸ್ ಮಾತ್ರ ಆರಂಭದಿಂದಲೇ ಕುಸಿತ ಕಂಡಿತು. ಆರಂಭಿಕರಾದ ಫೆರ್ನಾಂಡೋ ಮತ್ತು ಡಿಕ್‍ವೆಲಾ ಬೇಗನೆ ಔಟಾದರು. 59 ರನ್ ಆಗುವಾಗ ಲಂಕಾ ಮೂರನೇ ವಿಕೆಟ್ ಕಳಕೊಂಡಿತು.
ದಿನೇಶ್ ಚಾಂಡಿಮಲ್ ಮತ್ತು ಏಂಜೆಲೋ ಮ್ಯಾಥ್ಯೂಸ್ ತುಸು ಚೇತರಿಕೆ ನೀಡಿದರು. ಅವರಿಬ್ಬರೂ ಕೆಲವೇ ರನ್‍ಗಳ ಅಂತರದಲ್ಲಿ ನಿರ್ಗಮಿಸುವುದರೊಂದಿಗೆ ತಂಡವು ಸಂಕಷ್ಟಕ್ಕೆ ಸಿಲುಕಿತು. ಆದರೆ ದಿಮುತ್ ಕರುಣರತ್ನೆ ಮತ್ತು ಧನಂಜಯ ಡಿಸಿಲ್ವ ಹೆಚ್ಚಿನ ಹಾನಿಯಾಗದಂತೆ ತಡೆದರು.
ದಿನದಂತ್ಯಕ್ಕೆ ಕರುಣರತ್ನೆ 27 ರನ್‍ಗಳೊಂದಿಗೆ ಮತ್ತು ಡಿಸಿಲ್ವ 30 ರನ್‍ಗಳೊಂದಿಗೆ ಆಡುತ್ತಿದ್ದರು.
ಪಾಕಿಸ್ಥಾನದ ಪರವಾಗಿ ನಸೀಂ ಶಾ 2 ವಿಕೆಟ್ ಗಳಿಸಿದರೆ, ಅಘಾ ಸಲ್ಮಾನ್ , ಯಾಸಿರ್ ಶಾ, ಮಹಮ್ಮದ್ ನವಾಜ್ ತಲಾ 1 ವಿಕೆಟ್ ಗಳಿಸಿದರು.