ಕೊರೊನಾ ಸಂದರ್ಭದಲ್ಲಿ ಬಿ.ಶ್ರೀರಾಮುಲು ಸಚಿವ ಸ್ಥಾನದಲ್ಲಿದ್ದಾಗ ಔಷಧಿ ಮತ್ತು ಪಿಪಿ ಕಿಟ್ ಗಳ ಖರೀದಿ ಹಾಗೂ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಗಳು ಕೇಳಿಬಂದಿದ್ದವು. ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಬಹಳಷ್ಟು ನಾಯಕರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಭ್ರಷ್ಟಾಚಾರ ಸಾಬೀತಾದರೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ, ಮಾಜಿ ಸಚಿವ ಬಿ. ನಾಗೇಂದ್ರ ಅವರು ನನ್ನನ್ನು ಜೈಲಿಗೆ ಕಳಿಸುವುದಾಗಿ ಹೇಳಿರುವುದು ಇದೇ ಮೊದಲ ಬಾರಿ ಅಲ್ಲ. ಈಗಲೂ ಅವರದೇ ಸರ್ಕಾರವಿದೆ, ನನ್ನ ವಿರುದ್ಧ ಸೂಕ್ತ ತನಿಖೆ ನಡೆಸಿ ಭ್ರಷ್ಟಾಚಾರ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಯಾರೇ ತಪ್ಪು ಮಾಡಿದರೆ ಕಾನೂನು ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೋವಿಡ್ ಸಂದರ್ಭ ಆರೋಗ್ಯ ಸಚಿವನಾಗಿದ್ದ ನಾನು ಕೋವಿಡ್ ಭಯವಿಲ್ಲದೇ ಆಸ್ಪತ್ರೆಗಳಿಗೆ ತೆರಳಿ ಸೋಂಕಿತರನ್ನು ಭೇಟಿ ಮಾಡಿ ಮಾತನಾಡಿಸಿದ್ದೆ. ಸೋಂಕಿತರ ಹಾಗೂ ಆಸ್ಪತ್ರೆಗಳಲ್ಲಿ ಅವಶ್ಯವಿರುವ ಔಷಧಿ, ಪಿಪಿ ಕಿಟ್‌ಗಳ ಕುರಿತು ಸ್ವತಃ ಅನುಭವಕ್ಕೆ ತೆಗೆದುಕೊಂಡು ಖರೀದಿಸಲಾಗಿತ್ತು. ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ರೆಡ್ಡಿ – ರಾಮುಲು ಮೇಲೆ ಸೋಮಣ್ಣ ಕೋಪವೇಕೆ?
ಇದೇ ವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಬ್ಯಾಟ್ ಬೀಸಿರುವ ಶ್ರೀರಾಮುಲು, ಹೈಕಮಾಂಡ್ ನನಗೆ ಜವಾಬ್ದಾರಿ ವಹಿಸಿದರೆ ಅಸಮಾಧಾನಗೊಂಡಿರುವ ಜಿ.ಎಂ. ಸಿದ್ಧೇಶ್ವರ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸೇರಿ ಎಲ್ಲ ನಾಯಕರೊಂದಿಗೆ ಮಾತುಕತೆ ನಡೆಸಿ ಒಗ್ಗಟ್ಟಾಗಿಸಲು ಸಿದ್ಧನಿದ್ದೇನೆ. ಈ ಕುರಿತು ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತಾಡಿರುವೆ. ಕಾದು ನೋಡುವುದಾಗಿ ಹೇಳಿದ್ದಾರೆ. ಅವರು ಜವಾಬ್ದಾರಿ ವಹಿಸಿದರೆ ಖಂಡಿತ ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಮುಂದಾಗುವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮುಂದುವರೆಯುತ್ತಾರೆ. ಅವರೊಂದಿಗೆ ಸಹ ಎಲ್ಲರನ್ನೂ ಒಗ್ಗೂಡಿಸುವ ಕುರಿತು ಮಾತಾಡಿರುವೆ ಎಂದು ಹೇಳಿದರು.
ಇನ್ನು ಪಕ್ಷದ ಹಿತದೃಷ್ಟಿಯಿಂದ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕಾರಣಕ್ಕೆ ನಾನು ಮತ್ತು ಜನಾರ್ದನ ರೆಡ್ಡಿ ಮಾತ್ರವಲ್ಲ ಎಲ್ಲರೂ ಒಂದಾಗುವುದು ಅವಶ್ಯವಿದೆ. ಇಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಸಂಡೂರು ಉಪ ಚುನಾವಣೆ ಬಳಿಕ ತುಸು ಮನಸ್ತಾಪವಾಗಿದ್ದು ಬಿಟ್ಟರೆ ಯಾವುದೇ ದೊಡ್ಡ ಕಂದಕ ಇರಲಿಲ್ಲ. ಈಗ ಒಂದಾಗಿರುವುದು ಕಾರ್ಯಕರ್ತರಲ್ಲಿಯೂ ಹುಮ್ಮಸು ಮೂಡಿಸಿದೆ. ನಾವಿಬ್ಬರೂ ಒಟ್ಟಾಗಿ ಪಕ್ಷ ಸಂಘಟನೆಯೊಂದಿಗೆ ಅಧಿಕಾರಕ್ಕೆ ತರುವ ಕಾರ್ಯ ಮಾಡುತ್ತೇವೆ ಎಂದು ಭರವಸೆ ಮೂಡಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ