ಮಂಡ್ಯ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ, ಅವರಿಗೆ ಜನರ ಆಶೀರ್ವಾದ ಇದೆ ಅಂತ ಮಳವಳ್ಳಿಯಲ್ಲಿ ಜೆಡಿಎಸ್ ಶಾಸಕ ಡಾ.ಅನ್ನದಾನಿ ಹೇಳಿದ್ದಾರೆ. ಇನ್ನು ಸುಮಲತಾ ಪತಿ ಅಂಬರೀಶ್ ಮೃತಪಟ್ಟಿದ್ದಾರೆ, ಅವರ ಮೇಲೆ ಅನುಕಂಪ ಇದೆ ಎಂದ ಶಾಸಕ, ನಮಗೆ ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ. ಪಕ್ಷೇತರ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿ ಸಾಧ್ಯವಾಗೋದಿಲ್ಲ. ಅನುಕಂಪದಿಂದ ಹೆಚ್ಚುವರಿ ಅನುದಾನ ನೀಡೋದಿಲ್ಲ. ಎಲ್ಲರಿಗೂ ನೀಡೋದು ಒಂದೇ ಅನುದಾನ ಅಂತ ಸುಮಲತಾಗೆ ಟಾಂಗ್ ನೀಡಿದ್ದಾರೆ. ಇನ್ನು ನಿಖಿಲ್ ತಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಹೀಗಾಗಿ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನ ಅಭಿವೃದ್ಧಿ ಮಾಡ್ತೇವೆ ಅಂತ ಅನ್ನದಾನಿ ಹೇಳಿದ್ರು.
ಇನ್ನು ಮಂಡ್ಯದಲ್ಲಿ ಮೈತ್ರಿ ಧರ್ಮಕ್ಕೆ ಅಪಚಾರ ಕುರಿತಾಗಿ ಮಾತನಾಡಿದ ಅನ್ನದಾನಿ, ನನ್ನ ಎದುರಾಳಿಗಳು ನನಗೆ ಬೆಂಬಲ ಕೊಡದೆ ಸುಮಲತಾ ಪರ ಪ್ರಚಾರ ನಡೆಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಅಂತ ಮಾಜಿ ಸಚಿವ ನರೇಂದ್ರ ಸ್ವಾಮಿ ವಿರುದ್ಧ ಕಿಡಿ ಕಾರಿದ್ರು. ಇನ್ನು ನಿಖಿಲ್ ಗೆದ್ರೆ ರಾಹುಲ್ ಗಾಂಧಿ ಪ್ರಧಾನಿಯಾಗೋದಕ್ಕೆ ಸಹಾಯವಾಗುತ್ತೆ. ನಾವೀಗಾಗಲೇ ರಾಹುಲ್ ಗಾಂಧಿಗೆ ಬೆಂಬಲ ನೀಡಿದ್ದೇವೆ.ಮೈತ್ರಿ ಧರ್ಮ ಪಾಲಿಸದೇ ಕಾಂಗ್ರೆಸ್ಸಿಗರೇ ಕಾಂಗ್ರೆಸ್ ಗೆ ಅಪಮಾನ ಮಾಡಿದ್ದಾರೆ ಈ ರೀತಿ ಒಳ ರಾಜಕಾರಣ ಮಾಡೋಕೆ ನಮಗೂ ಬರುತ್ತೆ. ಈ ವಿಷಯವನ್ನ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ರವರಿಗೆ ತಿಳಸಿರುವೆ ಎಂದರು.