Uttara Pradesh News: ನಿನ್ನೆ ಮೌನಿ ಅಮಾವಾಸ್ಯೆ ಇದ್ದ ಕಾರಣ, ಕೋಟಿ ಕೋಟಿ ಜನ ಉತ್ತರಪ್ರದೇಶದ ಅಲಹಾಬಾದ್ನ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಕಾಲ್ತುಳಿತ ಸಂಭವಿಸಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದವರ ಮನೆಯವರಿಗೆ ತಲಾ 25 ಲಕ್ಷ ಪರಿಹಾರ ಘೋಷಿಸಲಾಗಿದೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾವನ್ನಪ್ಪಿದವರ ಕುಟುಂಬಸ್ಥರಿಗೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ನಿನ್ನೆ ಮೌನಿ ಅಮಾವಾಸ್ಯೆ ಇರುವ ಪ್ರಯುಕ್ತ 144 ವರ್ಷಕ್ಕೊಮ್ಮೆ ಬರುವ ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಮಾಡುವುದರಿಂದ, ಪಾಪ ಪರಿಹಾರವಾಗಿ ಮುಕ್ತಿ ಸಿಗುತ್ತದೆ. ಈ ಸಮಯದಲ್ಲಿ ಮಿಂದರೆ, ಜೀವನ ಪಾವನವಾಗುತ್ತದೆ ಅನ್ನೋ ನಂಬಿಕೆ ಇದೆ.
ಹಾಗಾಗಿಯೇ ಮೂಲೆ ಮೂಲೆಯಲ್ಲಿರುವ ನಾಗಾಸಾಧುಗಳು ಕುಂಭ ಮೇಳ ಶುರುವಾದ ದಿನವೇ, ಪ್ರಯಾಗ್ರಾಜ್ಗೆ ಬಂದಿಳಿದಿದ್ದಾರೆ. ಸಾಮಾನ್ಯ ಜನರು, ಸೆಲೆಬ್ರಿಟಿಗಳು ಸೇರಿ ಹಿಂದೂ ಧರ್ಮದಲ್ಲಿ ನಂಬಿಕೆ ಇರುವ ಹಲವರು ತ್ರಿವೇಣಿ ಸಂಗಮಕ್ಕೆ ಅಮೃತ ಸ್ನಾನಕ್ಕಾಗಿ ಬರುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಈ ರೀತಿಯಾಗಿರುವುದು ದುಃಖಕರ ಸಂಗತಿಯಾಗಿದೆ.
ಕರ್ನಾಟಕದಿಂದ ಕುಂಭಮೇಳಕ್ಕೆ ಹೋಗಿದ್ದ ಬೆಳಗಾವಿಯ ಹಲವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ, 90ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ಉಸಿರಾಟದ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದಾರೆ.