State News: ರಾಜ್ಯದಲ್ಲಿ ಟ್ಯಾಟೂಗೆ ಬೀಳುತ್ತಾ ಮೂಗುದಾರ..?
ಟ್ಯಾಟೂನಿಂದ ಹೆಚ್‌ಐವಿ, ಸ್ಕಿನ್ ಕ್ಯಾನ್ಸರ್ ಸಾಧ್ಯತೆ..!
ರಸ್ತೆ ಬದಿಯ ಟ್ಯಾಟೂ ಕಡಿವಾಣಕ್ಕೆ ನೂತನ ಕಾನೂನು..
ದೇಶದಲ್ಲಿಯೇ ಮೊದಲ ಬಾರಿ ಟ್ಯಾಟೂಗೆ ಆರೋಗ್ಯ ಇಲಾಖೆ ನಿಯಂತ್ರಣ..
ಟ್ಯಾಟೂಗೆ ಕೆಮಿಕಲ್ ಬಳಕೆ ಜೀವಕ್ಕೆ ತರುತ್ತೆ ಕುತ್ತು..
ಟ್ಯಾಟೂ ಪ್ರೀಯರು ತಮ್ಮ ಕೈಗಳ ಮೇಲೆ ಹಾಕಿಸಿಕೊಳ್ಳುವ ಅಚ್ಚೆಗಳಲ್ಲಿ ಬಳಸುವ ಕೆಮಿಕಲ್‌ಗಳಿಂದ ಮಾರಣಾಂತಿಕ ಸೋಂಕುಗಳು ಕಂಡು ಬಂದ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಈ ಮೂಲಕ ರಾಜ್ಯದಲ್ಲಿ ಟ್ಯಾಟೂ ಹಾಕುವವರಿಗೆ ಮತ್ತು ಹಾಕಿಸಿಕೊಳ್ಳವ ಇಬ್ಬರಿಗೂ ಅನ್ವಯವಾಗುವಂತೆ ನೂತನ ಕಾನೂನೊಂದನ್ನು ರಚಿಸಲು ರಾಜ್ಯ ಸರ್ಕಾರ ಸಿದ್ದವಾಗಿದೆ. ಹೊಸ ಕಾನೂನಿನ ಮೂಲಕ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ಅಚ್ಚೆ ಹಾಕುವುದಕ್ಕೆ ರಾಜ್ಯ ಸರ್ಕಾರ ಮೂಗುದಾರ ಹಾಕಲು ಹೊರಟಿದೆ. ಇನ್ನೂ ಸರ್ಕಾರ ಜಾರಿಗೆ ತರಲು ಬಯಸಿರುವ ನೂತನ ಟ್ಯಾಟೂ ನೀತಿಯು ಅಸ್ವಚ್ಚತೆಯಿಂದ ಉಂಟಾಗುವ ಸೋಂಕು ತಡೆಯುವ ಉದ್ದೇಶ ಇಟ್ಟುಕೊಂಡಿದೆ. ಈ ಕಾನೂನು ಟ್ಯಾಟೂ ಕಲಾವಿದರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಚರ್ಮದ ಕ್ಯಾನ್ಸರ್ ಮತ್ತು ಹೆಚ್ಐವಿಯಂತಹ ಸೋಂಕುಗಳ ಅಪಾಯವನ್ನು ತಗ್ಗಿಸುವುದು ಇದರ ಉದ್ದೇಶವಾಗಿದೆ.
ಟ್ಯಾಟೂ ನಿಯಂತ್ರಣಕ್ಕೆ ಕರ್ನಾಟಕದ್ದೆ ಮೊದಲ ಹೆಜ್ಜೆ..
ಇಡೀ ದೇಶದಲ್ಲಿ ಟ್ಯಾಟೂ ವಿಚಾರದಲ್ಲಿ ಯಾವುದೇ ರಾಜ್ಯ ಈ ರೀತಿಯ ನಿಯಂತ್ರಣ ನಿಲುವನ್ನು ಹೊಂದಿಲ್ಲ. ಆದರೆ ಮೊದಲ ಬಾರಿಗೆ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಈ ಹೊಸ ನಿಯಮಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ ಎನ್ನುವುದು ಗಮನಾರ್ಹವಾಗಿದೆ. ಇನ್ನೂ ಮುಖ್ಯವಾಗಿ ಯಾರೇ ಆಗಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ವೈದ್ಯರಿಂದ ಮೆಡಿಕಲ್ ಚೆಕಪ್ ರಿಪೋರ್ಟ್‌ನ್ನು ಕಡ್ಡಾಯವಾಗಿ ಪಡೆದಿರಬೇಕು. ಇಷ್ಟೇ ಅಲ್ಲದೆ ಟ್ಯಾಟೂ ಹಾಕುವವರು ತಾವು ಬಳಸುವ ಬಣ್ಣ, ಕೆಮಿಕಲ್, ಸೂಜಿ ಮತ್ತು ಸ್ವಚ್ಛತೆ ಕುರಿತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಹ ನೂತನ ಮಾರ್ಗಸೂಚಿಗಳು ರಾಜ್ಯ ಸರ್ಕಾರದ ನೂತನ ನಿಯಮಗಳಲ್ಲಿ ಅಡಕವಾಗಿವೆ.
ಇನ್ನೂ ಈ ಮೂಲಕ ಟ್ಯಾಟೂ ಪ್ರೇಮಿಗಳಿಗೆ ಶಾಕ್ ನೀಡಲು ಮುಂದಾಗಿರುವ ಆರೋಗ್ಯ ಇಲಾಖೆಯು ಶೀಘ್ರದಲ್ಲೇ ನೂತನ ನಿಯಮಗಳನ್ನು ಜಾರಿಗೆ ತರಲಿದೆ. ಚರ್ಮದ ಕ್ಯಾನ್ಸರ್, ಹೆಚ್‌ಐವಿ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ವೈರಸ್‌ನಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಉಲ್ಭಣಗೊಳ್ಳುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ತಪಾಸಣೆ ನಡೆಸಿತ್ತು. ಆಗ ಅ ವರದಿಯಲ್ಲಿ ಈ ಸೋಂಕುಗಳು ಹರಡಲು ಟ್ಯಾಟೋ ಕೂಡ ಒಂದು ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ, ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಹೆಜ್ಜೆ ಇಡುತ್ತಿದೆ.