ಸಾವು ಅಂದ್ರೆ ಹಲವರು ಭಯ ಪಡ್ತಾರೆ. ಇನ್ನು ಕೆಲವರು ಸಾವು ಬಂದ್ರೆ ಬರಲಿ, ಆದ್ರೆ ಇದ್ದೂ ಸತ್ತಂತೆ ಇರುವ ಜೀವನ ಮಾತ್ರ ಬೇಡಾ ಅಂತಾರೆ. ಇದು ಸತ್ಯವಾದ ಮಾತೇ. ಆದ್ರೆ, ನಾವಿವತ್ತು ಸಾವಿಗೆ ಹೆದರಿದ ರಾಜನ ಅವಸ್ಥೆ ಏನಾಯಿತು..? ಹೆದರಿ ಹೆದರಿ ಕೊನೆಗೂ ರಾಜ ಕಾಲನಿಂದ ತಪ್ಪಿಸಿಕೊಂಡನಾ..? ಯಾರು ಆ ರಾಜ.. ಈ ಎಲ್ಲಿ ಮಾಹಿತಿಯನ್ನ ಕಥೆ ಮೂಲಕ ಹೇಳಲಿದ್ದೇವೆ..
ಅಭಿಮನ್ಯುವಿನ ಪುತ್ರನಾದ ಪರೀಕ್ಷಿತನಿಗೆ ಸಾವು ಹತ್ತಿರ ಬಂದಿರುತ್ತದೆ. ಆತ ಆತನ ಗುರುಗಳಲ್ಲಿ ಹೋಗಿ, ಈ ಬಗ್ಗೆ ಕೇಳಿದಾಗ. ಹೌದು ಇನ್ನೇನು 7 ದಿನಗಳಲ್ಲಿ ನಿನ್ನ ಸಾವು ನಿನ್ನ ಹತ್ತಿರಬರಲಿದೆ ಎನ್ನುತ್ತಾರೆ. ತನ್ನ ರಾಜ್ಯಭಾರವನ್ನು ಮಗ ಜನಮೇಜಯನಿಗೆ ವಹಿಸಿ, ಶುಕ್ರಾಚಾರ್ಯರ ಬಳಿ ಹೋದ. ಅಲ್ಲಿ ಹೋಗಿ ಶುಕ್ರಾಚಾರ್ಯರಿಂದ ಭಾಗವತ ಕಥೆ ಕೇಳಿದ. ಹೀಗೆ 6 ದಿನಗಳು ಉರುಳಿದವು. ತಾನು ಇನ್ನೊಂದೇ ದಿನ ಬದುಕಿರುವುದು, ಆದರೂ ಕಾಲನ ಕೈಯಿಂದ ಹೇಗಾದರೂ ತಪ್ಪಿಸಿಕೊಳ್ಳಲೇಬೇಕೆಂದು ರಾಜ ನಿರ್ಧರಿಸಿದ.
ಆಗ ರಾಜ ಪರೀಕ್ಷಿತ, ಶುಕ್ರಾಚಾರ್ಯರೇ, ನನ್ನ ಸಾವು ಹತ್ತಿರ ಬರುತ್ತಿದ್ದಂತೆ, ನನ್ನ ಮನಸ್ಸಿನಲ್ಲಿರುವ ಹೆದರಿಕೆಯೂ ಹೆಚ್ಚಾಗುತ್ತಿದೆ. ಇದೆಕ್ಕೇನಾದರೂ ಉಪಾಯ ತಿಳಿಸಿ ಎನ್ನುತ್ತಾನೆ. ಆಗ ಶುಕ್ರಾಚಾರ್ಯರು, ನಾನು ನಿನಗೊಂದು ಕಥೆ ಹೇಳುತ್ತೇನೆ. ಆಗ ನಿನ್ನ ಭಯ ಹೋಗಬಹುದು ಎಂದು ಹೇಳಿ, ಕಥೆ ಹೇಳಲು ಶುರು ಮಾಡುತ್ತಾರೆ.
ಒಂದೂರಲ್ಲಿ ಒಬ್ಬ ರಾಜನಿದ್ದ. ಆತ ಬೇಟೆಯಾಡಲು ಕಾಡಿಗೆ ಹೋದ. ಕತ್ತಲಾಗುತ್ತಿದ್ದಂತೆ, ಅವನು ತಂಗಿಕೊಳ್ಳಲು ಮನೆ ಹುಡುಕುತ್ತಿದ್ದ. ರಾತ್ರಿ ಇಲ್ಲೇ ಎಲ್ಲಾದರೂ ಉಳಿದು, ನಾಳೆ ಬೆಳಿಗ್ಗೆ ಅರಮನೆಗೆ ಹೋಗೋಣ. ರಾತ್ರಿ ನಾನು ಕಾಡಿನಲ್ಲಿ ಓಡಾಡಿದರೆ, ಹುಲಿ ಸಿಂಹಗಳ ಪಾಲಾಗುತ್ತೇನೆಂದು ಹೆದರಿ, ತಂಗಲು ಮನೆ ಹುಡುಕಲಾರಂಭಿಸಿದ. ಅವನಿಗೊಂದು ಗುಡಿಸಲು ಕಾಣಿಸಿತು.
ಚಿಕ್ಕ ಗುಡಿಸಲಿಲ್ಲ, ವೃದ್ಧನೊಬ್ಬ ವಾಸ ಮಾಡುತ್ತಿದ್ದ. ಆತನಿಗೆ ಗುಣಪಡಿಸಲಾಗದ ರೋಗವಿತ್ತು. ಆ ಗುಡಿಸಲು ಭಯಂಕರ ಅಸಹ್ಯವಾಗಿತ್ತು. ಹಳಸಿದ ಆಹಾರ. ಒಂದೆಡೆ ಜೋತಾಡುತ್ತಿದ್ದ, ಪ್ರಾಣಿಯ ಮಾಂಸ, ಅಲ್ಲಲ್ಲೇ ಮಲ ಮೂತ್ರ ವಿಸರ್ಜನೆ ಮಾಡಿ, ಆ ವೃದ್ಧ ಗುಡಿಸಲನ್ನ ಕೆಟ್ಟದ್ದಾಗಿ ಇಟ್ಟುಕೊಂಡಿದ್ದ. ಆಗ ರಾಜ. ಈ ಗುಡಿಸಲಲ್ಲಿ ಹೇಗೆ ಇರಲಿ. ಈ ಗುಡಿಸಲು ಎಷ್ಟು ಗಲೀಜಾಗಿದೆ. ಇಲ್ಲಿ ತಂಗಿದರೆ, ನಿದ್ದೆಯೂ ಬರುವುದಿಲ್ಲ. ಅಲ್ಲದೇ, ಈ ವೃದ್ಧನಿಗೆ ರೋಗ ಬೇರೆ ಇದೆ. ಆದರೆ ನಾನು ಹೊರಗೂ ಹೋಗುವ ಹಾಗಿಲ್ಲ. ಹೋದರೆ, ಕಾಡು ಪ್ರಾಣಿಗಳ ಪಾಲಾಗುವೆ. ಇರಲಿ, ಇಲ್ಲೇ ಇದ್ದುಬಿಡೋಣ ಎಂದು ನಿರ್ಧರಿಸಿದ.
ನಂತರ ಆ ವೃದ್ಧನ ಬಳಿ, ತನಗೆ ತಂಗಲು ಅನುಮತಿ ನೀಡುವಿರಾ ಎಂದು ಕೇಳಿದ. ಅದಕ್ಕೆ ವೃದ್ಧ, ನಿಮಗೆ ಇಲ್ಲಿರಲು ಅನುಮತಿ ನೀಡಲೇನು ಅಭ್ಯಂತರವಿಲ್ಲ. ಆದರೆ ನನ್ನ ಗುಡಿಸಿಲಿಗೆ ಒಮ್ಮೆ ಬಂದವರು, ಗುಡಿಸಲು ಬಿಟ್ಟು ಹೋಗುವುದೇ ಇಲ್ಲ ಎನ್ನುತ್ತಾರೆ. ಹಾಗಾಗಿ ನಾನು ಅನುಮತಿ ಕೊಡುವುದಿಲ್ಲ ಎನ್ನುತ್ತಾನೆ.
ಆಗ ರಾಜ ಮನಸ್ಸಿನಲ್ಲಿಯೇ, ಏನು ಇಂಥ ಗಲೀಜು ಜಾಗ ಬಿಟ್ಟು ಹೋಗುವುದಿಲ್ಲಎನ್ನುತ್ತಾರೆ. ನಾನಂತೂ ನಾಳೆ ಯಾವಾಗ ಆಗುತ್ತದೆ ಅಂತಾ ಕಾಯುತ್ತಿದ್ದೇನೆ ಎಂದುಕೊಳ್ಳುತ್ತಾನೆ. ಅಲ್ಲದೇ, ನಾನು ನಾಳೆ ಬೆಳಕಾದ ಮೇಲೆ ಎದ್ದು ಹೋಗಿಬಿಡುತ್ತೇನೆ ಎನ್ನುತ್ತಾನೆ. ಆಗ ವೃದ್ಧ ತನ್ನ ಗುಡಿಸಿಲಿನಲ್ಲಿರಲು ಅನುಮತಿ ಕೊಡುತ್ತಾನೆ. ಆದ್ರೆ ಮಧ್ಯರಾತ್ರಿಯಾಗುತ್ತಿದ್ದಂತೆ, ರಾಜನಿಗೆ ಗುಡಿಸಲು ಇಷ್ಟವಾಗಿಬಿಟ್ಟಿತು. ವಾಸನೆ ಈಗ ಪರಿಮಳದಂತೆ ಭಾಸವಾಗುತ್ತಿತ್ತು.
ಬೆಳಕು ಹರಿದ ಬಳಿಕ, ವೃದ್ಧ ಬಂದು, ರಾಜನನ್ನು ಹೋಗಲು ಹೇಳಿದಾಗ, ರಾಜ ಇಲ್ಲ ನಾನು ಇಲ್ಲಿಯೇ ಇರುತ್ತೇನೆಂದು ಹೇಳಿದ.ಅದಕ್ಕೆ ವೃದ್ಧ. ನಾನು ನಿನ್ನೆಯೇ ಹೇಳಿದ್ದೆ, ಇಲ್ಲಿ ತಂಗಬೇಡಿ, ನೀವು ಮರುದಿನ ಹೋಗಲು ಇಚ್ಛಿಸುವುದಿಲ್ಲವೆಂದು ಅಂತಾ. ಆದರೂ ನೀವು ಕೇಳಲಿಲ್ಲ. ಈಗ ನಾನೇನು ಮಾಡಲಿ..? ಎಂದು ಬೇಸರಿಸಿಕೊಳ್ಳುತ್ತಾನೆ.
ಇಷ್ಟು ಕಥೆ ಹೇಳಿದ ಬಳಿಕ, ಶುಕ್ರಾಚಾರ್ಯರು ಪರೀಕ್ಷಿತನನ್ನು ಕುರಿತು, ನೋಡು ಆ ರಾಜ ಮಾಡಿದ್ದು ಸರಿಯೇ ಹೇಳು ಎನ್ನುತ್ತಾರೆ. ಆಗ ಪರೀಕ್ಷಿತ, ಇವನೆಂಥ ಮೂರ್ಖ ರಾಜ, ತನ್ನ ಅರಮನೆಗೆ ಬಂದು ಸುಖದಿಂದ ಇರುವುದು ಬಿಟ್ಟು, ಆ ಗಲೀಜು ಗುಡಿಸಲಿಲ್ಲ ಇರುತ್ತಾನೆ ಎನ್ನುತ್ತಾನಲ್ಲ ಎಂದು ಹೇಳುತ್ತಾನೆ. ಆಗ ಶುಕ್ರಾಚಾರ್ಯರು, ಆ ರಾಜ ಯಾರು ಗೊತ್ತೇ..? ಎಂದು ಕೇಳುತ್ತಾರೆ. ಪರೀಕ್ಷಿತನಿಗೆ ಉತ್ತರ ಹೊಳೆಯುವುದಿಲ್ಲ.
ಆಗ ಶುಕ್ರಾಚಾರ್ಯರು, ಆ ರಾಜ ಬೇರೆ ಯಾರೂ ಅಲ್ಲ, ನೀವೇ. ನಿಮ್ಮ ದೇಹವೇ ಆ ಗುಡಿಸಲು. ದೇಹವೆಂಬ ಗುಡಿಸಲಲ್ಲಿ ಇರಬೇಕಾದಷ್ಟು ದಿನ ನೀವಿದ್ದಿರಿ. ಈಗ ನೀವು ಈ ಗುಡಿಸಲನ್ನು ಬಿಟ್ಟು ಹೋಗುವ ಸಮಯ ಬಂದಿದೆ. ಹಾಗಾಗಿ ಕಾಲನ ಕರೆಗೆ ಓಗೊಟ್ಟು ಹೋಗಿರಿ ಎನ್ನುತ್ತಾರೆ. ಆಗ ಪರೀಕ್ಷಿತನಿಗೆ ಸಾವಿನ ಭಯ ಹೋಗುತ್ತದೆ. ಶುಕ್ರಾಚಾರ್ಯರ ಮಾತು ನಿಜವೆನ್ನಿಸುತ್ತದೆ. ಧೈರ್ಯದಿಂದ 7ನೇ ದಿನ ಪರೀಕ್ಷಿತ ತನ್ನ ದೇಹ ತ್ಯಾಗ ಮಾಡುತ್ತಾನೆ.