Hubli News: ಹುಬ್ಬಳ್ಳಿ: ಅಮಿತ್ ಶಾ ಅದೊಂದು ಹೇಳಿಕೆ ನಿಜಕ್ಕೂ ಅಂಬೇಡ್ಕರ್ ಅಭಿಮಾನಿಗಳಿಗೆ ಮಾತ್ರವಲ್ಲದೇ ದಲಿತ ಸಂಘಟನೆಯ ಹೋರಾಟದ ಕಿಚ್ಚನ್ನು ಹೊತ್ತುವಂತೆ ಮಾಡಿದೆ. ಅಮಿತ್ ಶಾ ವಿರುದ್ಧ ಹೋರಾಟಕ್ಕೆ ಹುಬ್ಬಳ್ಳಿ ಬಂದ್ ಕರೆ ಕೊಟ್ಟಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿದೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಹೊತ್ತಿಕೊಂಡ ಹೋರಾಟದ ಕಿಚ್ಚು ಹುಬ್ಬಳ್ಳಿಯ ತುಂಬೆಲ್ಲಾ ಹರಡಿತು. ಹೌದು.. ಗಬ್ಬೂರಿನಿಂದ, ದಾಜಿಬಾನಪೇಟೆ, ದುರ್ಗದ ಬೈಲ್, ಹಳೇ ಹುಬ್ಬಳ್ಳಿ, ಇಂಡಿಪಂಪ್, ಅರವಿಂದನಗರ ಹೀಗೆ ಹುಬ್ಬಳ್ಳಿಯ ಸಂಪೂರ್ಣ ಸ್ತಬ್ಧವಾಗಿದ್ದು, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ ಬಂದ್ ಗೆ ಸಂಪೂರ್ಣ ಬೆಂಬಲ ದೊರೆತಂತಾಗಿದೆ. ಈಗಾಗಲೇ ಪೊಲೀಸ್ ಕಮೀಷನರೇಟ್ ನಿಂದ 2000 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಇನ್ನೂ ದಲಿತ ಸಂಘಟನೆಗಳು ಮಾತ್ರವಲ್ಲದೆ ಮಹಿಳೆಯರು, ಕಾಂಗ್ರೆಸ್ ಮುಖಂಡರು ಕೂಡ ಬಂದ್ ಗೆ ಬೆಂಬಲ ನೀಡಿದ್ದು, ಟ್ರಾಕ್ಟರ್ ಮೂಲಕ ಚನ್ನಮ್ಮ ವೃತ್ತಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ಜನರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡು ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸುತ್ತಿರುವುದು ನಿಜಕ್ಕೂ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.