ಒಬ್ಬರು ಸತ್ತರೆ ಹತ್ತು ಜನ ಹುಟ್ಟುತ್ತಾರೆ.. ಇದು ಸಿನಿಮಾದ ಡೈಲಾಗ್ ಅಂತಾ ಅಂದುಕೊಳ್ಳಬೇಡಿ. ಜೆಸಿಬಿ ಚಾಲಕನ ಸಾಹಸ. ಪ್ರವಾಹದಲ್ಲಿ ಸಿಲುಕಿದ್ದ 9 ಮಂದಿಯನ್ನು ಜೆಸಿಬಿ ಚಾಲಕ ಸುಭಾನ್ ಧೈರ್ಯದಿಂದ ರಕ್ಷಿಸಿದ್ದಾರೆ. ಈಗ ಅವರು ರಿಯಲ್ ಹೀರೋ ಆಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರೋ ಮಳೆ ಎರಡೂ ರಾಜ್ಯಗಳನ್ನು ತಲ್ಲಣಗೊಳಿಸಿದೆ. ಅದ್ರಲ್ಲೂ ವಿಜಯವಾಡ, ಬೆಜವಾಡ, ಎಲೂರು, ಕೃಷ್ಣಾ ಮತ್ತು ಎನ್‌ಟಿಆರ್ ಜಿಲ್ಲೆಗಳು ಮಳೆ ಅವಾಂತರದಿಂದ ಸುಧಾರಿಸಿಕೊಂಡಿಲ್ಲ. ವಿಜಯವಾಡದಲ್ಲಿ ಬೀದಿ ಬೀದಿಗಳು ನೀರಿನಿಂದ ಜಲಾವೃತವಾಗಿದ್ದು, ಮನೆಗಳ ಟೇರಸ್ ಮೇಲೆ ಜನರು ಆಶ್ರಯ ಪಡೆದಿದ್ದಾರೆ. ಬೋಟ್ಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯ ನಡೀತಿದೆ. ಡ್ರೋನ್ಗಳ ಮೂಲಕ ಜನರಿಗೆ ಊಟ- ನೀರು ಪೂರೈಕೆಯಾಗ್ತಿದೆ. ವಿನಾಶಾಕಾರಿ ಮಳೆಯಿಂದಾಗಿ ಎರಡೂ ರಾಜ್ಯಗಳಲ್ಲಿ 35 ಜನರು ಜೀವಬಿಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಇದೆಲ್ಲದರ ನಡುವೆ ಗಮನ ಸೆಳೆದಿರೋದು ಅಂದ್ರೆ, ಜೆಸಿಬಿ ಚಾಲಕ ಸಾಹಸ.
ರಣಭೀಕರ ಮಳೆಗೆ ತತ್ತರಿಸಿದ ಜಿಲ್ಲೆಗಳಲ್ಲಿ ಆಂಧ್ರಪ್ರದೇಶದ ಖಮ್ಮಂ ಕೂಡ ಒಂಡಾಗಿದೆ. ಭಾರೀ ಪ್ರವಾಹದಿಂದ ಪ್ರಕಾಶ್ ನಗರ ಸೇತುವೆ ಕೂಡ ಮುಳುಗಡೆಯಾಗಿತ್ತು. ಸೇತುವೆ ಮೇಲೆ ಪ್ರವಾಹದಲ್ಲಿ ಸಿಲುಕಿದ್ದ 9 ಮಂದಿಯನ್ನು ಜೆಸಿಬಿ ಚಾಲಕ ಸುಭಾನ್ ರಕ್ಷಿಸಿದ್ದಾರೆ. ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಹೆಲಿಕಾಪ್ಟರ್‌ಗಳು ಮಾಡಲಾಗದ್ದನ್ನು ಒಬ್ಬ ಸಾಮಾನ್ಯ ವ್ಯಕ್ತಿ ಮಾಡಿದ್ದಾನೆ.. ಅದೂ ಸಹ ಜೆಸಿಬಿ ಚಾಲಕ ತನ್ನ ಪ್ರಾಣವನ್ನು ಪಣಕ್ಕಿಟ್ಟು 9 ಜನರಿಗೆ ಮರುಜೀವ ಕೊಟ್ಟಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 9 ಜನರ ಜೀವ ಕಾಪಾಡಿದ ದೇವದೂತನಿಗೆ ಜನರು ಹೂವಿನ ಹಾರ ಹಾಕಿ, ಜೈಕಾರ ಕೂಗಿದ್ದಾರೆ.
ತೆಲುಗು ರಾಜ್ಯಗಳಿಗೆ ಮತ್ತೊಂದು ಅಪಾಯ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಹಾಗೂ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಎನ್‌ಟಿಆರ್, ಏಲೂರು ಮತ್ತು ಪಲ್ನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗೋದಾವರಿ ಜಿಲ್ಲೆಗಳ ಜೊತೆಗೆ ವಿಜಯವಾಡದಲ್ಲಿ ಮತ್ತೊಮ್ಮೆ ಭಾರೀ ಮಳೆಯಾಗುವ ಸಾಧ್ಯತೆ ಇದೆ . ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದ ಬೆಜವಾಡ ನಗರ ಇನ್ನೂ ಚೇತರಿಸಿಕೊಂಡಿಲ್ಲ. ಇದ್ರ ನಡುವೆಯೇ ಮತ್ತೊಂದು ಮಹಾಮಳೆಯ ಸೂಚನೆ ನೀಡಲಾಗಿದೆ.
ಒಟ್ನಲ್ಲಿ ರಣಭೀಕರ ಮಳೆ ತೆಲುಗು ರಾಜ್ಯಗಳು ತತ್ತರಿಸಿ ಹೋಗಿವೆ. ಕೇಂದ್ರ ಸರ್ಕಾರ ಕೂಡ ಎರಡೂ ರಾಜ್ಯಗಳಿಗೆ ಅಗತ್ಯ ನೆರವು ನೀಡೋದಾಗಿ ಘೋಷಣೆ ಮಾಡಿದೆ. ಪರಿಹಾರ ಕಾರ್ಯಾಚರಣೆ ಕೂಡ ಬರದಿಂದ ಸಾಗಿದೆ.