ಭಾರತದಲ್ಲಿ ಕಳೆದ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಏಕಾಏಕಿ ಶೇ. 40ರಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 20ರಿಂದ ಆಗಸ್ಟ್ 20ರ ನಡುವೆ ಕೆ.ಜಿಗೆ 48 ರೂ. ಇದ್ದ ಸಕ್ಕರೆ ಬೆಲೆ ಈಗ ಬಂಡವಾಳ ಮಾರುಕಟ್ಟೆಯಲ್ಲಿ 55 ರೂಪಾಯಿಗೂ ಅಧಿಕವಾಗಿದೆ. ದೇಶದ ಅತಿ ಹೆಚ್ಚು ಬೇಡಿಕೆಯಿರುವ ಈ ಆಹಾರ ಪದಾರ್ಥದ ಬೆಲೆ ದಿಢೀರ್ ಏರಿಕೆಯಾಗಿರುವುದು ಏಕೆ? ಎಂಬ ಪ್ರಶ್ನೆ ಈಗ ಮೂಡಿದೆ.
ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಕಬ್ಬು ಉತ್ಪಾದನೆಯಲ್ಲಿ ಉಂಟಾಗಿರುವ ಕುಸಿತ. ಹವಾಮಾನ ವೈಪರೀತ್ಯ ಮತ್ತು ಮಳೆಯ ಕೊರತೆಯಿಂದಾಗಿ 2025-26ರಲ್ಲಿ ಉತ್ಪಾದನೆ 27.9 ಮಿಲಿಯನ್ ಟನ್‌ಗೆ ಇಳಿದಿದೆ. ಆದರೆ ದೇಶದ ವಾರ್ಷಿಕ ಬಳಕೆಯು 28ರಿಂದ 28.5 ಮಿಲಿಯನ್ ಟನ್‌ಗಳಷ್ಟಿದ್ದು, ಆರಂಭಿಕ ದಾಸ್ತಾನು ಕಡಿಮೆಯಾಗಿರುವುದು ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಸೃಷ್ಟಿಸಿದೆ ಅಂತ ಹೇಳಬಹುದು.
ಇದರ ಜೊತೆಗೆ ಮುಂಬರುವ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿಯಂತಹ ಸಾಲು ಸಾಲು ಹಬ್ಬಗಳ ಬೇಡಿಕೆ ಇದಕ್ಕೆ ಮತ್ತೊಂದು ಕಾರಣ. ಹಬ್ಬದ ವೇಳೆ ಬೆಲೆ ಏರಬಹುದು ಎಂಬ ನಿರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಖರೀದಿದಾರರು ಮತ್ತು ವ್ಯಾಪಾರಿಗಳು ಮುಂಚಿತವಾಗಿ ಸ್ಟಾಕ್ ಮಾಡಲು ಮುಂದಾಗಿದ್ದಾರೆ. ಇದು ಮಾರುಕಟ್ಟೆಯಲ್ಲಿ ಕೃತಕ ಕೊರತೆ ಮತ್ತು ಸರಪಳಿ ಪರಿಣಾಮಕ್ಕೆ ಕಾರಣವಾಗಿದೆ ಎಂದು ಸಕ್ಕರೆ ಉದ್ಯಮ ಸಂಘಟನೆ ‘ISMA’ ಸ್ಪಷ್ಟಪಡಿಸಿದೆ.
ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಲು ಎಚ್ಚೆತ್ತ ಕೇಂದ್ರ ಸರ್ಕಾರ, ಸುಮಾರು ಒಂದು ದಶಕದ ಬಳಿಕ ಮೊದಲ ಬಾರಿಗೆ 1 ಮಿಲಿಯನ್ ಟನ್ ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಆಮದು ಮಾಡಿಕೊಳ್ಳುವ ಈ ಸಕ್ಕರೆಯನ್ನು ರಿಫೈನರಿಗಳಲ್ಲಿ ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಪೂರೈಕೆ ಸುಧಾರಿಸಿ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ನಿರೀಕ್ಷಿಬಹುದು.
ಇದರೊಂದಿಗೆ ಸಕ್ಕರೆ ನಿರಂತರ ಪೂರೈಕೆಗಾಗಿ ಸೆಪ್ಟೆಂಬರ್‌ನಿಂದ ಹದಿನೈದು ದಿನಗಳಿಗೊಮ್ಮೆ ಕೋಟಾ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಒಟ್ಟಿನಲ್ಲಿ, ಸರ್ಕಾರದ ಈ ದಿಟ್ಟ ಕ್ರಮಗಳು ಹಬ್ಬದ ಸಂದರ್ಭದಲ್ಲಿ ಸಕ್ಕರೆ ಬೆಲೆ ಮತ್ತಷ್ಟು ಏರದಂತೆ ತಡೆದು, ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ರಿಲೀಫ್ ನೀಡುವ ಹಂತದಲ್ಲಿವೆ.
