6 ವರ್ಷಗಳ ವನವಾಸ ಅಂತ್ಯ – ಕ್ಷೇತ್ರಕ್ಕೆ ಮರಳಿದ ವಿನಯ್ ಕುಲಕರ್ಣಿ!

ಕಳೆದ ಆರು ವರ್ಷಗಳಿಂದ ಸ್ವಕ್ಷೇತ್ರಕ್ಕೆ ಪ್ರವೇಶವಿಲ್ಲದೆ ದೂರವೇ ಉಳಿದಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೊನೆಗೂ ಕಾನೂನು ಸಮರದಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಅನುಮತಿ ಪಡೆದು ಅವರು ಇಂದು ಅಧಿಕೃತವಾಗಿ ತಮ್ಮ ತವರು ಜಿಲ್ಲೆಯಾದ ಧಾರವಾಡಕ್ಕೆ ವಾಪಸಾಗಿದ್ದಾರೆ.

2016ರಲ್ಲಿ ನಡೆದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದರು. ಸಿಬಿಐ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ, ಸಾಕ್ಷಿಗಳನ್ನು ತಿರುಚಬಾರದು ಮತ್ತು ಸಾಕ್ಷ್ಯ ನಾಶಪಡಿಸಬಾರದು ಎಂಬ ಕಟ್ಟುನಿಟ್ಟಿನ ಷರತ್ತಿನ ಮೇಲೆ ನ್ಯಾಯಾಲಯ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಹೀಗಾಗಿ ಅವರು ಜಿಲ್ಲೆಯಿಂದ ಹೊರಗುಳಿದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಜಯಗಳಿಸಿದ್ದರು.

ಆರು ವರ್ಷಗಳ ಬಳಿಕ ಜಿಲ್ಲೆಗೆ ಕಾಲಿಟ್ಟಿರುವ ವಿನಯ್ ಕುಲಕರ್ಣಿ ಅವರು ನೇರವಾಗಿ ತಮ್ಮ ಮನೆಗೆ ತೆರಳಲಿಲ್ಲ. ಬದಲಿಗೆ, ಮುಂಜಾನೆಯೇ ಧಾರ್ಮಿಕ ಕ್ಷೇತ್ರಗಳ ದರ್ಶನದ ಮೂಲಕ ‘ಟೆಂಪಲ್ ರನ್’ ಆರಂಭಿಸಿದ್ದಾರೆ. ಬೆಳಿಗ್ಗೆ 7:30ಕ್ಕೆ ಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ನಂತರ ಬೆಳಿಗ್ಗೆ 8:30ಕ್ಕೆ ಧಾರವಾಡದ ಮುರುಘಾಮಠಕ್ಕೆ ತೆರಳಿ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಇದೇ ದಿನ ಬೆಳಿಗ್ಗೆ 11:00 ಗಂಟೆಗೆ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನ ಪಡೆದರು. ಈ ಎಲ್ಲಾ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕವಷ್ಟೇ ಅವರು ತಮ್ಮ ಅಧಿಕೃತ ನಿವಾಸಕ್ಕೆ ತೆರಳಿ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಇತ್ತ ತಮ್ಮ ನೆಚ್ಚಿನ ನಾಯಕ ಬರೋಬ್ಬರಿ ಆರು ವರ್ಷಗಳ ನಂತರ ಕ್ಷೇತ್ರಕ್ಕೆ ವಾಪಸ್ಸಾಗುತ್ತಿರುವುದನ್ನು ಕಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಇಂದು ಇಡೀ ದಿನ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿರುವ ಶಾಸಕ ವಿನಯ್ ಕುಲಕರ್ಣಿ, ನಾಳೆಯಿಂದಲೇ ನೇರವಾಗಿ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಲಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಅವರು ಮತ್ತೆ ಧುಮುಕಲಿದ್ದು, ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

About The Author