Thursday, February 6, 2025

Latest Posts

‘ಮಂಡ್ಯ ಜನರಿಗೆ ನನ್ನ ಧನ್ಯವಾದ, ವಿರೋಧಿಸುವವರಿಗೆ ನನ್ನ ಕೆಲಸಗಳೇ ಉತ್ತರ’

- Advertisement -

ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದ ಕೇಂದ್ರೀಯ ವಿದ್ಯಾಲಯದ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಸಿಕ್ಕ ವಿಷಯದ ಬಗ್ಗೆ ಸಂಸದೆ ಸುಮಲತಾ ಸಂತೋಷ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನ ತಮ್ಮ ಪೇಜ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ವಿರೋಧಿಗಳಿಗೂ ಟಾಂಗ್ ಕೊಟ್ಟಿರುವ ಸುಮಲತಾ, ಇನ್ನು ಮುಂದೆ ನನ್ನ ಕೆಲಸವೇ ಮಾತನಾಡುತ್ತದೆ. ಮಂಡ್ಯ ಜನರ ಅಭಿವೃದ್ಧಿಗಾಗಿ ನಾನು ಸದಾ ಸಿದ್ಧ ಎಂದಿದ್ದಾರೆ. ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದಿರುವ ಬರಹ ಇಂತಿದೆ.

“ಸುದ್ದಿಗಾಗಿ ಹೇಳಿಕೆಗಳನ್ನು ಕೊಡುವವರ ಮಧ್ಯ ನನ್ನ ಕೆಲಸಗಳಿಗೆ ಪ್ರೋತ್ಸಾಹವಾಗಿ ನಿಂತ ಸ್ವಾಭಿಮಾನಿ ಮಂಡ್ಯದ ಜನರಿಗೆ ನನ್ನ ಧನ್ಯವಾದಗಳು. ನಿಮ್ಮ ಬೆಂಬಲದಿಂದ ಬೇರೆಯವರ ಇಲ್ಲ ಸಲ್ಲದ ಮಾತಿಗೆ ಕಿವಿಗೊಡದೆ, ನನ್ನ ಕಾರ್ಯಗಳನ್ನು ಮುಂದುವರೆಸಲು ಸಾಧ್ಯವಾಗುತ್ತಿದೆ.

ನಾನು 2019ರಲ್ಲಿ ಸಂಸದೆಯಾಗಿ ಆಯ್ಕೆಯಾದಾಗ ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದ ಕೇಂದ್ರೀಯ ವಿದ್ಯಾಲಯದ ಶಾಲೆಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದೆ. ಅಲ್ಲಿನ ತಾತ್ಕಾಲಿಕ ಶಾಲಾ ಕಟ್ಟಡದ ದಾರುಣ ಪರಿಸ್ಥಿತಿಯನ್ನು ಕಂಡಾಗ ನನಗೆ ಆಘಾತವಾಗಿತ್ತು.

ಅಪಾಯದ ಗಂಭೀರತೆಯನ್ನು ಅರಿತು, ಶಾಲೆಯ ಕಟ್ಟಡದ ವಿಷಯವನ್ನು ಸಂಸತ್ತಿನಲ್ಲೂ ಪ್ರಸ್ತಾವನೆ ಮಾಡಿ ಸಭೆಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೆ. ಅಪಾಯದ ಅವಸ್ಥೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕಾದ ಪರಿಸ್ಥಿತಿ ಬಗ್ಗೆ ವಿವರಿಸಿದ್ದೆ. ಮಕ್ಕಳ ಜೀವ ಮತ್ತು ಭವಿಷ್ಯ ಎರಡೂ ದಾರುಣ ಸ್ಥಿತಿಯಲ್ಲಿದ್ದು ಎಷ್ಟೇ ಕಷ್ಟವಾದರೂ ಹೊಸ ಕಟ್ಟಡ ನಿರ್ಮಾಣವಾಗಬೇಕು ಎಂದು ಪಣತೊಟ್ಟಿದ್ದೆ.

ಆಗಿನ ಕೆಂದ್ರ ಶಿಕ್ಷಣ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ದೆ. ನಂತರ ಸಚಿವರು ಬದಲಾದರೂ, ಹೊಸ ಸಚಿವರ ಜೊತೆ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಸತತ ಸಂಪರ್ಕದಲ್ಲಿದ್ದೆ. ನಿರಂತರ ಪ್ರಯತ್ನಕ್ಕೆ ಫಲವಾಗಿ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ನೆನ್ನೆ ಅನುಮೋದನೆ ಸಿಕ್ಕಿದೆ. ಅತಿ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಹಾಗೂ ತಾಂತ್ರಿಕ ರೂಪುರೇಷೆಗಳನ್ನು ಪೂರ್ಣಗೊಳಿಸಿ, ಸುಸಜ್ಜಿತ ವ್ಯವಸ್ಥೆಯುಳ್ಳ ನೂತನ ಕೇಂದ್ರೀಯ ವಿದ್ಯಾಲಯ ಶಾಲೆಯ ಕಟ್ಟಡವು ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣವಾಗಲಿದೆ.

ಶಿಕ್ಷಣಕ್ಕೆ ಬೇಕಾದ ವಾತವಾರಣ ಮತ್ತು ಮೂಲಸೌಕರ್ಯ ಎಲ್ಲಾ ಮಕ್ಕಳ ಹಕ್ಕು. ಈಗ ದೊರೆತಿರುವ ಅನುಮೋದನೆಯಿಂದ ನನಗೆ ಬಹಳ ಸಂತೋಷವಾಗಿದೆ. ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಹಿಂದಿನ ಶಿಕ್ಷಣ ಸಚಿವರಾದ ರಮೇಶ್ ಪೊಕ್ರಿಯಾಲ್ ಅವರಿಗೂ ನನ್ನ ಧನ್ಯವಾದಗಳು. ಇಂತಃ ಪ್ರಾಮಾಣಿಕ ಪ್ರಯತ್ನಕ್ಕೆ ಫಲ ದೊರೆತಾಗ ಇನ್ನಷ್ಟು ಜನಪರ ಕೆಲಸಗಳಿಗೆ ಅಣಿಯಾಗಲು ಸ್ಫೂರ್ತಿ ದೊರಕುತ್ತದೆ.

ಸಂಸದೆಯಾಗಿ ಮಂಡ್ಯ ಕ್ಷೇತ್ರಕ್ಕೆ ನನ್ನ ಮುಖ್ಯ ಆದ್ಯತೆ ಆರೋಗ್ಯ ವ್ಯವಸ್ಥೆ, ಶಿಕ್ಷಣ, ರೈತರ ಹಿತರಕ್ಷಣೆ, ಸಕ್ಕರೆ ಕಾರ್ಖಾನೆಯ ಪುನರುತ್ಥಾನ, ಅಕ್ರಮ ಗಣಿಗಾರಿಕೆಯ ತಡೆ, ಕೆ.ಆರ್.ಎಸ್ ಅಣೆಕಟ್ಟೆಯ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕೆಲಸಗಳಲ್ಲಿ ಒಂದೊಂದೇ ಯಶಸ್ವಿಯಾಗಿ ಮುಂದುವರೆಯುತ್ತಿದೆ. ನಿಮ್ಮ ಬೆಂಬಲ ಹಾಗೂ ಹಾರೈಕೆಗಳು ಈಗೆ ಮುಂದುವರೆಯಲಿ.

ಯಾರ ಮಾತು ಏನೇ ಇರಲಿ, ಅದರ ಬಗ್ಗೆ ತಲೆಗೊಡದೆ ಆಗಬೇಕಾದ ಕೆಲಸಗಳನ್ನು ಬೆಂಬಿಡದೇ ನಿರಂತರ ಪ್ರಯತ್ನದ ಕಾರಣ ಮುಂದುವರಿಸುವುದು ನನ್ನ ಕರ್ತವ್ಯ. ಇದು ಮಂಡ್ಯದ ಸ್ವಾಭಿಮಾನಿ ಜನತೆಗೆ ಗೊತ್ತಿರುವ ವಿಚಾರ.

ಇವ್ಯಾವುವೂ ಪ್ರಚಾರಕ್ಕೆ ಮಾಡುವ ಕೆಲಸಗಳಲ್ಲ, ಬದಲಾಗಿ ನನ್ನ ಪ್ರಾಮಾಣಿಕ ಕರ್ತವ್ಯ. ಮುಂದೆಯೂ ಮಾಡುತ್ತೇನೆ. ನನ್ನ ಅಭಿವೃದ್ದಿ ಪರ ಕೆಲಸಗಳನ್ನು ವಿರೋಧಿಸುವವರಿಗೆ ಈ ನನ್ನ ಕೆಲಸಗಳೇ ಉತ್ತರ ಕೊಡುತ್ತವೆ. “

- Advertisement -

Latest Posts

Don't Miss