ಮನೆ ಕೆಲಸ ಅಥವಾ ಆಫೀಸು ಕೆಲಸದ ಮಧ್ಯೆ ಹೆಣ್ಣು ಮಕ್ಕಳು ಸರಿಯಾಗಿ ತಿನ್ನೋದನ್ನೇ ಮರೆತು ಬಿಡ್ತಾರೆ. ಮಕ್ಕಳ ಕೆಲಸ, ಮನೆ ಕೆಲಸದಲ್ಲಿ ಮುಳುಗಿರುವ ಮಹಿಳೆಯರು ತಮಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು, ಒಳ್ಳೆಯ ಆಹಾರ ಸೇವಿಸುವುದು ತುಂಬಾ ಮುಖ್ಯವಾಗಿದೆ. ಈ ವಿಷಯವನ್ನು ಎಲ್ಲ ಮಹಿಳೆಯರು ತಿಳಿದುಕೊಳ್ಳಬೇಕು. ಎಷ್ಟೋ ಹೆಣ್ಣು ಮಕ್ಕಳು ಮನೆ ಜನರನ್ನ ನೋಡಿಕೊಳ್ಳುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನವೇ ಕೊಡುವುದಿಲ್ಲ. ಹಾಗಾಗಿಯೇ ಇಂಥ ಎಷ್ಟೋ ಮಹಿಳೆಯರು, ಬೇಗ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಹಾಗಾದ್ರೆ ಮಹಿಳೆಯರು ಸೇವಿಸಬೇಕಾದ ಆಹಾರಗಳು ಯಾವುದು..? ಇದರಿಂದ ಅವರಿಗಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಹಸಿರು ತರಕಾರಿ: ಹಸಿರು ತರಕಾರಿಯನ್ನ ಸ್ವಚ್ಛಗೊಳಿಸಿ ಸೇವಿಸಿ. ಇದರಿಂದ ಹಲವು ರೀತಿಯ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ಅದರಲ್ಲೂ ಬ್ರೊಕೊಲಿ ಸೇವನೆಯಿಂದ ಬ್ರೆಸ್ಟ್ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ಬೀಟ್‌ರೂಟ್, ಕ್ಯಾರೆಟ್ ಕೂಡ ಅಗತ್ಯ ಸೇವಿಸಿ. ಇದು ನಿಮ್ಮ ಮುಖದಲ್ಲಿ ಹೊಳಪನ್ನು ತರುತ್ತದೆ. ಕಣ್ಣಿನ ಆರೋಗ್ಯ ಕಾಪಾಡುತ್ತದೆ.
ಎರಡನೇಯದಾಗಿ ಹಣ್ಣು ಹಂಪಲು: ಒಂದೊಂದು ಹಣ್ಣಿನಲ್ಲಿಯೂ ಒಂದೊಂದು ಗುಣವಿರುತ್ತದೆ. ಹಾಗಾಗಿ ದಿನಕ್ಕೆ ಮೂರು ರೀತಿಯ ಹಣ್ಣನ್ನ ತಿನ್ನಿ. ಆಗ ಎಲ್ಲದರ ಪೋಷಕಾಂಶವೂ ನಿಮ್ಮ ದೇಹ ಸೇರತ್ತೆ. ಮತ್ತು ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ತರುತ್ತದೆ. ಆದ್ರೆ ಹಣ್ಣು- ತರಕಾರಿಗಳನ್ನ ಸ್ವಚ್ಛವಾಗಿ ತೊಳೆದು ತಿನ್ನಿ..
ಮೂರನೇಯದಾಗಿ ಮೊಳಕೆ ಕಾಳುಗಳು: ಮೊಳಕೆ ಕಾಳುಗಳ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ. ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಇದರ ಸೇವನೆಯಿಂದ ಬಿಪಿ ಶುಗರ್ ಬರದಂತೆ ತಡೆಯಬಹುದು. ಮತ್ತು ಇದು ನಿಮ್ಮ ದೇಹದ ತೂಕ ಹೆಚ್ಚದಂತೆ, ನಿಮಗೆ ಹೆಚ್ಚು ಆಯಾಸವಾಗುವುದನ್ನು ತಡೆಯುತ್ತದೆ.
ನಾಲ್ಕನೇಯದಾಗಿ ಡ್ರೈಫ್ರೂಟ್ಸ್: ಡ್ರೈಫ್ರೂಟ್ಸ್ ತಿನ್ನುವುದರಿಂದ ನಿಮ್ಮಲ್ಲಿ ಶಕ್ತಿ ಬರುತ್ತದೆ. ಚೈತನ್ಯದಿಂದ ಕೂಡಿರಲು ಇದು ಸಹಾಯ ಮಾಡುತ್ತದೆ. ನಿಶ್ಯಕ್ತಿಯಿಂದ ಬಳುವುತ್ತಿರುವವರಿಗೆ, ಡ್ರೈ ಫ್ರೂಟ್ಸ್ ಒಳ್ಳೆಯ ಆಹಾರ.
ಐದನೇಯದಾಗಿ ಹಾಲು, ತುಪ್ಪ, ಮೊಸರು: ಹೆಣ್ಣು ಮಕ್ಕಳು ಪ್ರತಿದಿನ ಹಾಲು, ಮೊಸರು, ತುಪ್ಪದ ಸೇವನೆ ಮಾಡಬೇಕು. ಹಾಲು ಕುಡಿದದರೆ, ಶಕ್ತಿ ಬರುತ್ತದೆ. ತುಪ್ಪ ತಿಂದರೆ ಮೂಳೆ ಗಟ್ಟಿಯಾಗಿರುತ್ತದೆ. ಇನ್ನು ಮೊಸರಿನ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ. ಈ ಮೇಲೆ ಹೇಳಿದ ಎಲ್ಲ ಆಹಾರಗಳೂ, ಹೆಣ್ಣು ಮಕ್ಕಳ ತಿಂಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮತ್ತು ಭವಿಷ್ಯದಲ್ಲಿ ಗರ್ಭಧರಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಈಗಾಗಲೇ ತಾಯಿಯಾದವರು, ತಮ್ಮ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಕೂಡ ಈ ಆಹಾರ ಸಹಕಾರಿಯಾಗಿದೆ.




