Monday, March 10, 2025

Latest Posts

ಸಿರಿಯಾ ಸಂಘರ್ಷ, ಸಾವಿರಾರು ಜನರ ನರಮೇಧ: ಬಷರ್‌ ಅಲ್‌ ಅಸ್ಸಾದ್‌ ಸರ್ಕಾರ ಪತನದ ಬಳಿಕ ಸಿರಿಯಾ ಕೊತ ಕೊತ..

- Advertisement -

International News: ಸಿರಿಯಾದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಸರ್ಕಾರ ಪತನದ ಹಲವು ತಿಂಗಳುಗಳ ಬಳಿಕ ಇದೀಗ ಮತ್ತೆ ಸಿರಿಯಾ ಅಲ್ಲಿ ನಾಗರಿಕ ಹಿಂಸಾಚಾರ ಮುಂದುವರೆದಿದ್ದು, ಹೆಣಗಳ ರಾಶಿಯೇ ಬಿದ್ದಿದೆ. ಕಳೆದ ಗುರುವಾರವಷ್ಟೇ ಇಲ್ಲಿನ ಲಟಾಕಿಯಾ ಪ್ರಾಂತ್ಯದಲ್ಲಿ ಅಂದಿನ ಅಸಾದ್ ಸರ್ಕಾರದಲ್ಲಿ ಮಿಲಿಟರಿ ಕಮಾಂಡರ್ ಆಗಿದ್ದ ಸುಹಿಲ್ ಅಲ್ ಹಸಾನ್ ತನ್ನ ಗುಂಪಿನೊಂದಿಗೆ ಸದ್ಯ ಅಧಿಕಾರದಲ್ಲಿರುವ ಅಹ್ಮದ್ ಅಲ್ ಶಾರಾ ಬಂಡುಕೋರ ಗುಂಪಿನ ಭದ್ರತಾ ಪಡೆಗಳ‌ ಮೇಲೆ ದಾಳಿ ಮಾಡಿದ್ದನು. ಇದಕ್ಕೆ ಪ್ರತಿಯಾಗಿ ಸಿರಿಯಾ ಭದ್ರತಾ ಪಡೆಯು ಆ ಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಸ್ಫೋಟಕ ಸುರಿಸಿ ತನ್ನ ದಾಳಿಯನ್ನು ನಡೆಸಿದೆ. ಅಲ್ಲದೆ ಅಸಾದ್ ಬೆಂಬಲಿತರಾಗಿರುವ ಅಲಾವೈಟ್ ಸಮುದಾಯದ ಜನರನ್ನು ಭದ್ರತಾ ಪಡೆಗಳು ಕಂಡ ಕಂಡಲ್ಲಿ‌ ಗಂಡು ಹಾರಿಸಿ ಕೊಲ್ಲುತ್ತಿವೆ.

ಇನ್ನೂ ಈ ಹಿಂಸಾಚಾರದಿಂದ ಕಳೆದೆರಡು ದಿನಗಳಲ್ಲಿ ಬರೊಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಜನರ ಹತ್ಯೆಯಾಗಿದ್ದು, 750 ನಾಗರಿಕರು, ಸಿರಿಯಾ ಭದ್ರತಾ ಪಡೆಯ 125, ಹಾಗೂ ಅಸಾದ್ ಬೆಂಬಲಿತ ಪಡೆಯ 148 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ ಹಿಂಸೆ ಪೀಡಿತ ಟಾರ್ಟಸ್‌ ಹಾಗೂ ಲಟಾಕಿಯಾದಲ್ಲಿ ಕರೆಂಟ್ ಕೂಡ ಕಟ್ ಮಾಡಲಾಗಿದ್ದು, ನೀರಿನ ಪೊರೈಕೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಈ ಪರಿಸ್ಥಿತಿಯಿಂದ ಅಲ್ಲಿನ ಜನರು ನರಕಯಾತನೆ ಅನುಭವಿಸುವಂತಾಗಿದೆ.

ಇಷ್ಟೇ ಅಲ್ಲದೆ ಶಿಯಾ ಮುಸ್ಲಿಂನ ಒಂದು ಶಾಖೆಯಾದ ಈ ಅಲಾವೈಟ್‌ಗಳಿಗೆ ನಡು ರಸ್ತೆಯಲ್ಲಿಯೇ ಗೋಲಿ ಬಾರ್‌ ಮಾಡುತ್ತೇವೆ. ಯಾರೊಬ್ಬರನ್ನೂ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಸಿರಿಯಾ ಭದ್ರತಾ ಪಡೆಗಳು ನೀಡಿವೆ. ಇದರಿಂದ ಭಯಭೀತರಾಗಿ ಅಲಾವೈಟ್‌ ಸಮುದಾಯದ ಜನರು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಲ್ಲದೆ ಇನ್ನೂ ಕೆಲವರು ತಮ್ಮ ಜೀವ ಭಯದಿಂದ ಬೆಟ್ಟಗಳ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಈ ಅಲಾವೈಟ್‌ಗಳು ಹೆಚ್ಚಾಗಿ ವಾಸವಾಗಿರುವ ಬನಿಯಾ ಸ್ಥಳದಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿಯನ್ನು ನಡೆಸಿವೆ. ಇದರಿಂದ ಅಲ್ಲಿ ಬೀದಿ ಬೀದಿಗಳಲ್ಲೂ ಹೆಣಗಳ ರಾಶಿ ಬಿದ್ದಿದೆ. ಶವ ಸಂಸ್ಕಾರಕ್ಕೂ ಭದ್ರತಾ ಪಡೆಗಳು ಜನರನ್ನು ಬಿಡುತ್ತಿಲ್ಲ. ಈ ಮುಸ್ಲಿಂ ರಾಷ್ಟ್ರದಲ್ಲಿ ಬಷರ್ ಅಲ್ ಅಸಾದ್ ಹಾಗೂ ಬಂಡುಕೋರರ ನಡುವಿನ ಕಾದಾಟ ತೀವ್ರ ಸ್ವರೂಪದ ಹಿಂಸಾಚಾರಕ್ಕೆ ಕಾರಣವಾಗಿದೆ. ಹೀಗಾಗಿ ಬಂಡುಕೋರರು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಸಿರಿಯಾ ದಾರುಣ ಅಂತ್ಯದತ್ತ ಸಾಗುತ್ತಿದೆ.

2013ರ ಬಳಿಕ ದೊಡ್ಡ ಹಿಂಸಾಚಾರ..

ಇನ್ನೂ ಬ್ರಿಟನ್‌ ಮೂಲದ ಸಿರಿಯನ್ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, 2013 ರಲ್ಲಿ ಅಸ್ಸಾದ್ ಪಡೆಗಳು ನಡೆಸಿದ್ದ ರಾಸಾಯನಿಕ ದಾಳಿಯ ನಂತರ ಅತಿ ಹೆಚ್ಚು ಸಾವುನೋವುಗಳಿಗೆ ಈ ದಾಳಿಯು ಕಾರಣವಾಗಿದೆ. ಅಲ್ಲದೆ ಇದು ಡಮಾಸ್ಕಸ್ ರಾಜಧಾನಿಯಲ್ಲಿ 1,400 ಜನರ ಸಾವಿಗೆ ಕಾರಣವಾಗಿದೆ. ಸುನ್ನಿ ಇಸ್ಲಾಮಿಸ್ಟ್ ನಾಯಕತ್ವದಲ್ಲಿ ಸಿರಿಯಾದ ಮಧ್ಯಂತರ ಸರ್ಕಾರವನ್ನು ಅಧ್ಯಕ್ಷ ಅಹ್ಮದ್ ಅಲ್-ಶರಾ ಮುನ್ನಡೆಸುತ್ತಿದ್ದಾರೆ. ಈ ಜನರನ್ನು ಕೊಲ್ಲುವ ಅಥವಾ ಕೈದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವವರು ತಮ್ಮ ಹೊಣೆಗಾರಿಕೆಯನ್ನು ಮೊದಲು ತಿಳಿದುಕೊಳ್ಳಲಿ ಎಂದು ಸಿರಿಯನ್ನರು ಹಾಗೂ ಅದರ ಅಂತರರಾಷ್ಟ್ರೀಯ ಸಮುದಾಯಕ್ಕೆ‌ ರೆಹಮಾನ್ ಒತ್ತಾಯಿಸಿದ್ದಾರೆ.

ಹಿಂಸಾಚಾರಕ್ಕೆ ಕಾರಣವೇನು?

ಅಸ್ಸಾದ್ ಸರ್ಕಾರದ ಪತನದ ಬಳಿಕ ಸಿರಿಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ, ಅಲ್ಲದೆ ಅಲಾವೈಟ್‌ಗಳ ಬೆಂಬಲದಿಂದ ಐದು ದಶಕಗಳಿಗೂ ಹೆಚ್ಚು ಕಾಲ ಸಿರಿಯಾವನ್ನು ಅಸ್ಸಾದ್‌ ರಾಜ‌ ಮನೆತನ ಆಳಿತ್ತು. ಆದರೆ ನಮ್ಮ ನಾಯಕತ್ವವು ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುವುದರ ಜೊತಗೆ ರಾಜಕೀಯ ಭವಿಷ್ಯವನ್ನು ಕಟ್ಟಿಕೊಡುತ್ತದೆ ಎಂದು ಸಿರಿಯಾದ ಅಧ್ಯಕ್ಷ ನೀಡಿದ್ದ ಭರವಸೆಯ ಬಳಿಕವೂ ಅಲ್ಲಿ ದಂಗೆಗಳು ಮುಂದುವರೆದಿವೆ.

ಇನ್ನೂ ಟರ್ಕಿಯೊಂದಿಗೆ ಪ್ರತ್ಯೇಕ ಸಂಘರ್ಷದಲ್ಲಿ ತೊಡಗಿರುವ ಸಿರಿಯನ್ ಕುರ್ದಿಷ್ ಸಶಸ್ತ್ರ ಗುಂಪಿನ ಉನ್ನತ ಕಮಾಂಡರ್ ಒಬ್ಬರು, ಟರ್ಕಿಶ್ ಬೆಂಬಲಿತ ಇಸ್ಲಾಮಿಸ್ಟ್ ಬಣಗಳು ಅಲವೈಟ್ ನಾಗರಿಕರ ಮರಣದಂಡನೆ ಸೇರಿದಂತೆ ಕೆಲವು ತೀವ್ರ ದೌರ್ಜನ್ಯಗಳನ್ನು ಎಸಗಿವೆ ಎಂದು ಆರೋಪಿಸಿದ್ದಾರೆ. ಅದರೆ ಟರ್ಕಿ ಇನ್ನೂ ಈ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಅಂದಹಾಗೆ ಈ ಎಲ್ಲ ಬೆಳವಣಿಗೆಗಳ ನಡುವೆ ಎರಡೂ ಕಡೆಯ್ ಈ ಹಿಂಸಾಚಾರದ ತನಿಖೆಗಾಗಿ ಸ್ವತಂತ್ರ ಸಮಿತಿಯನ್ನು ರಚಿಸುವುದಾಗಿ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಕಚೇರಿ ಘೋಷಿಸಿದೆ. ಅಲ್ಲದೆ ಅಲಾವೈಟ್‌ ಜನರನ್ನು ಮರಣದಂಡನೆ ಒಳಪಡಿಸುವುದರ ಗ್ರಾಫಿಕ್ ವೀಡಿಯೊಗಳನ್ನು ಸಿರಿಯನ್ನರು ಎಲ್ಲೆಡೆ ಹಂಚಿಕೊಂಡಿದ್ದಾರೆ.

- Advertisement -

Latest Posts

Don't Miss