ಇಸ್ಲಾಮಾಬಾದ್: ಅಫ್ಘಾನಿಸ್ತಾನ (Afghanistan)ದಲ್ಲಿ ದಿನಕ್ಕೊಂದು ಕಾನೂನನ್ನು ಜಾರಿಗೆ ತರುತ್ತಿರುವ ತಾಲಿಬಾನ್ ಇದೀಗ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ತಮ್ಮ ಮುಖ ತೋರಿಸುವುದು, ಜೋರಾಗಿ ಮಾತನಾಡುವುದು ಮತ್ತು ಹಾಡು, ಕವಿತೆಗಳನ್ನು ಹೇಳುವುದನ್ನು ನಿಷೇಧಿಸಿದೆ. ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಜಾದಾ (Hibatullah Akhundzada) ಈ ಹೊಸ ಕಾನೂನನ್ನು ಅನುಮೋದಿಸಿದ್ದು, ತಾಲಿಬಾನ್ ಸಚಿವಾಲಯ (Taliban’s Justice Ministry) ಇದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.
ತಾಲಿಬಾನ್ನ ಕಟ್ಟುನಿಟ್ಟಾದ ಮುಖ್ಯ ನಿಯಮಗಳಲ್ಲಿ ಒಂದಾದ ಆರ್ಟಿಕಲ್ 13ರಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬಂದ ಸಂದರ್ಭದಲ್ಲಿ ತಮ್ಮ ಮುಖ ಮತ್ತು ದೇಹವನ್ನು ಸಂಪೂರ್ಣ ಮುಚ್ಚಿಕೊಳ್ಳಬೇಕು. ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದು, ಹಾಡು ಹೇಳುವುದು ಮತ್ತು ಕವಿತೆಗಳನ್ನು ಹೇಳುವುದನ್ನು ತಾಲಿಬಾನ್ ನಿಷೇಧಿಸಿದೆ. ಮಹಿಳೆಯ ಧ್ವನಿಯನ್ನು ಖಾಸಗಿ ಎಂದು ಪರಿಗಣಿಸಿರುವ ತಾಲಿಬಾನ್ ಸಚಿವಾಲಯ ಇತರರಿಗೆ ಮಹಿಳೆಯ ಧ್ವನಿ ಕೇಳಬಾರದು ಎಂಬ ಕಾನೂನನ್ನು ಜಾರಿಗೆ ತಂದಿದೆ.
ತಾಲಿಬಾನ್ನ ಹೊಸ ಕಾನೂನಿನಲ್ಲಿ ಮಹಿಳೆಯರು ತಮ್ಮ ಸಂಬಂಧಿಕರಲ್ಲದ ಪುರುಷರನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ. ಅಲ್ಲದೆ ನೂತನ ನಿಯಮಗಳ ಪ್ರಕಾರ ಪ್ರಯಾಣಿಕರು ಮತ್ತು ಚಾಲಕರು ನಿಗದಿತ ಸಮಯದಲ್ಲಿ ಪ್ರಾರ್ಥನೆಗಾಗಿ ವಾಹನಗಳನ್ನು ನಿಲ್ಲಿಸಲೇಬೇಕು ಎಂದು ತಾಲಿಬಾನ್ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸದಾಗಿ ತಂದಿರುವ ನಿಯಮಗಳ ಬಗ್ಗೆ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. ತಾಲಿಬಾನ್ನ ಈ ನಿರ್ಬಂಧಗಳಿಂದ ಅಫ್ಘಾನಿಸ್ತಾನದ ಜನರಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ. ದಿನಕ್ಕೊಂದು ಕಾನೂನನ್ನು ಜಾರಿಗೆ ತಂದು ಹುಚ್ಚಾಟ ಮೆರೆಯುತ್ತಿರುವ ತಾಲಿಬಾನ್ ವಿರುದ್ಧ ಇದೀಗ ಎಲ್ಲೆಡೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.