ಲಂಡನ್:ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಓವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು.ಇಂಗ್ಲೆಂಡ್ ಪರ ಕಣಕ್ಕಿಳಿದ ಜಾಸನ್ ರಾಯ್ ಮತ್ತು ಜಾನಿ ಬೈರ್ ಸ್ಟೊ ಉತ್ತಮ ಆರಂಭ ಕೊಡುವಲ್ಲಿ ಎಡವಿದರು. ದಾಳಿಗಿಳಿದ ಬುಮ್ರಾ ಜಾಸನ್ ರಾಯ್ (0 ರನ್), ಜಾನು ಬೈರ್ ಸ್ಟೊ (7 ರನ್), ಜೋ ರೂಟ್ (0 ರನ್) ಅವರುಗಳನ್ನು ಬಲಿತೆಗೆದುಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಜೋಸ್ ಬಟ್ಲರ್ (30ರನ್), ಬೆನ್ ಸ್ಟೋಕ್ಸ್ ಶಮಿಗೆ ವಿಕೆಟ್ ಒಪ್ಪಿಸಿದರು. ಲಿಯಾಮ್ ವಿಲಿಂಗ್ ಸ್ಟೋನ್ ಬುಮ್ರಾಗೆ ಬಲಿಯಾದರು.ಮೊಯಿನ್ ಅಲಿ 14, ಡೇವಿಡ್ ವಿಲ್ಲಿ 21, ಕ್ರೇಗ್ ಒವರ್ಟನ್ 8, ಬ್ರೈಡನ್ ಕಾರ್ಸ್ 15, ಟೊಪ್ಲೆ ಅಜೇಯ 6 ರನ್ ಗಳಿಸಿದರು. ಇಂಗ್ಲೆಂಡ್ ತಂಡ 25.2 ಓವರ್ ಗಳಲ್ಲಿ 110 ರನ್ ಗಳಿಗೆ ಆಲೌಟ್ ಆಯಿತು.
ಭಾರತ ಪರ ಬೂಮ್ರಾ 19ಕ್ಕೆ 6 ವಿಕೆಟ್ ಪಡೆದರು. ಶಮಿ 31ಕ್ಕೆ 3 ವಿಕೆಟ್ ಪಡೆದರು. ಕನ್ನಡಿಗ ಪ್ರಸಿದ್ಧ ಕೃಷ್ಣ 1 ವಿಕೆಟ್ ಪಡೆದರು.
111 ರನ್ ಗಳ ಸುಲಭ ಗುರಿ ಬೆನ್ನತ್ತಿದ ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 18.4 ಓವರ್ ಗಳಲ್ಲಿ 114 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ ಅಜೇಯ 76, ಶಿಖರ್ ಧವನ್ ಅಜೇಯ 31 ರನ್ ಗಳಿಸಿದರು.
6 ವಿಕೆಟ್ ಪಡೆದ ಬೂಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.