ದುಬೈ: ಎನ್‍ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಹಂಗಾಮಿ ತರಬೇತುದಾರರಾಗಿ ಆಯ್ಕೆ ಆಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಮಾಜಿ ಆಟಗಾರ ಲಕ್ಷ್ಮಣ್ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.
ಇತ್ತಿಚೆಗೆಷ್ಟೆ ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದೀಗ ಕೊರೋನಾ ಸೋಂಕಿಗೆ ಗುರಿಯಾಗಿರುವ ರಾಹುಲ್ ದ್ರಾವಿಡ್ ಬದಲು ಕಾರ್ಯನಿರ್ವಹಿಸಲಿದ್ದಾರೆ.
ಮಂಗಳವಾರ ಭಾರತ ತಂಡ ಯುಎಇಗೆ ತೆರೆಳುವ ಮುನ್ನ ಕೋಚ್ ದ್ರಾವಿಡ್ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಯಿತು. ಹೀಗಾಗಿ ತಂಡದ ಜೊತೆ ದ್ರಾವಿಡ್ ಪ್ರಯಾಣ ಬೆಳಸಲಿಲ್ಲ. ಸೋಂಕಿಗೆ ಗುರಿಯಾಗಿರುವ ದ್ರಾವಿಡ್ ನೆಗೆಟಿವ್ ಫಲಿತಾಂಶ ಬಂದ ಕೂಡಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಹಂಗಾಮಿ ಕೋಚ್ ಲಕ್ಷ್ಮಣ್ ಹರಾರೆಯಿಂದ ಉಪನಾಯಕ ಕೆ.ಎಲ್. ರಾಹುಲ್, ದೀಪಕ್ ಹೂಡಾ ಮತ್ತು ಆವೇಶ್ ಖಾನ್ ಜೊತೆ ದುಬೈಗೆ ಬಂದಿಳಿದಿದ್ದಾರೆ.
ಯುಎಇಗೆ ಬಂದ ರೋಹಿತ್ ಪಡೆ
ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆಡಲು ಭಾರತ ತಂಡ ಮಂಗಳವಾರ ಯುಎಇಗೆ ಬಂದಿಳಿಯಿತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ)ಯಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದ ಆಟಗಾರರು ಯುಎಇಗೆ ತೆರೆಳಿದರು.ಬುಧಾವಾರದಿಂದ ರೋಹಿತ್ ನೇತೃತ್ವದಲ್ಲಿ ಭಾರತ ತಂಡ ಅಭ್ಯಾಸ ಆರಂಭಿಸಿದೆ.ಆ.28ರಂದು ಪಾಕಿಸ್ಥಾನ ವಿರುದ್ಧ ಸಣಸಲಿದೆ. ಇನ್ನು ಮೂರು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಲಿದೆ.