Friday, July 18, 2025

Latest Posts

ಪಾಕ್‌ ಎಷ್ಟು ರಫೆಲ್‌ ಯುದ್ಧ ವಿಮಾನಗಳನ್ನ ಹೊಡೆದುರುಳಿಸಿದೆ ಹೇಳಿ..? : ಪ್ರಧಾನಿ ಮೋದಿ ಪ್ರಶ್ನಿಸಿ ರೇವಂತ್‌ ರೆಡ್ಡಿ ಹೊಸ ವಿವಾದ..

- Advertisement -

ಹೈದ್ರಾಬಾದ್‌ : ಭಾರತದ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಸೇನೆ ಎಷ್ಟು ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರಮೋದಿ 140 ಕೋಟಿ ಭಾರತೀಯರಿಗೆ ತಿಳಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒತ್ತಾಯಿಸಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಬಲೂಚಿಸ್ತಾನ್‌ ಬೇರ್ಪಡಿಸೋಕೆ ನೀವು ವಿಫಲರಾಗಿದ್ದೀರಿ..

ಹೈದ್ರಾಬಾದ್‌ನಲ್ಲಿ ಜೈ ಹಿಂದ್ ಸಮಾವೇಶದಲ್ಲಿ ಮಾತನಾಡಿದ್ದ ರೆಡ್ಡಿ, ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗುವ ಮೊದಲು ಸರ್ವಪಕ್ಷ ಸಭೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರಮೋದಿ, ನೆರೆಯ ದೇಶದೊಂದಿಗಿನ ಸಶಸ್ಯ ಸಂಘರ್ಷವನ್ನು ನಿಲ್ಲಿಸುವ ಮೊದಲು ಏಕೆ ಸಭೆ ಕರೆಯಲಿಲ್ಲ..? 140 ಕೋಟಿ ಭಾರತೀಯರ ಆಶಯದ ಹೊರತಾಗಿಯೂ, ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಪಿಒಕೆ ಮೇಲೆ ಹಿಡಿತ ಸಾಧಿಸಲು ಮೋದಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮೋದಿ ನಮಗೆ ಖಾತರಿ ನೀಡಿ, ನಿಜವಾಗಿಯೂ ಏನಾಗಿದೆ..?

ಸಿಕಂದರಾಬಾದ್ ಕಂಟೋನ್ವೆಂಟ್‌ನ ಸೈನಿಕರು ಯುದ್ಧದಲ್ಲಿ ಭಾಗವಹಿಸಿದ್ದರು. ತೆಲಂಗಾಣದಲ್ಲಿ ತಯಾರಾಗುತ್ತಿರುವ ಯುದ್ಧ ವಿಮಾನಗಳು ನಮ್ಮ ದೇಶದ ಮೇಲಿನ ಗೌರವವನ್ನು ಎತ್ತಿಹಿಡಿದವು. ನರೇಂದ್ರಮೋದಿ ತಂದಿದ್ದ ರಫೇಲ್ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿತು. ಎಷ್ಟು ರಫೇಲ್ ವಿಮಾನಗಳನ್ನು ಹೊಡೆದುರುಳಿಸಿತು ಎಂಬುದರ ಕುರಿತು ಯಾವುದೇ ಚರ್ಚೆಯಾಗಿಲ್ಲ. ಇತ್ತೀಚಿನ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಎಷ್ಟು ರಫೇಲ್ ವಿಮಾನಗಳನ್ನು ಉರುಳಿಸಿದೆ ಎಂಬುದಕ್ಕೆ ನರೇಂದ್ರಮೋದಿ ಉತ್ತರಿಸಿ, ನಮಗೆ ಖಾತರಿ ನೀಡಿ ಎಂದು ರೇವಂತ್‌ ರೆಡ್ಡಿ ಕೇಳಿ ಕೊಂಡಿದ್ದಾರೆ.

ಸಾವಿರಾರು ಕೋಟಿ ಮೌಲ್ಯದ ಒಪ್ಪಂದಗಳನ್ನು ಮೋದಿಯವರಿಗೆ ಹತ್ತಿರವಿರುವ ಜನರಿಗೆ ನೀಡಲಾಗಿದೆ. ಅದರ ಬಳಿಕ ಅವರು ರಫೇಲ್ ವಿಮಾನಗಳನ್ನು ಖರೀದಿಸಿದರು. ನಾಲ್ಕು ದಿನಗಳ ಯುದ್ಧದ ನಂತರ, ಯಾರು ಯಾರನ್ನು ಬೆದರಿಸಿದರು ಮತ್ತು ಯಾರು ಯಾರಿಗೆ ಶರಣಾದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಇದ್ದಕ್ಕಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಬಂದು ಭಾರತಕ್ಕೆ ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದಾರೆ ಅಂತ ರೆಡ್ಡಿ ಕೇಂದ್ರದ ನಡೆಯ ಬಗ್ಗೆ ಕಿಡಿಕಾರಿದ್ದಾರೆ.

ಇಂದಿರಾ ಗಾಂಧಿ ದೇಶದ ಮೇಲೆ ಆಕ್ರಮಣ ಮಾಡುವವರಿಗೆ ಪಾಠ ಕಲಿಸುತ್ತೇವೆ ಎಂಬ ಸಂದೇಶ ನೀಡಿದ್ದರು..

ಪ್ರಧಾನಿ ಮೋದಿ ನೆರೆಯ ದೇಶಕ್ಕೆ ಸೂಕ್ತ ಉತ್ತರ ನೀಡುವಲ್ಲಿ ವಿಫಲವಾದರೂ, ಚೀನಾ ಭಾರತದ 4000 ಚದರ ಕಿಲೋ ಮೀಟರ್ ಭೂಪ್ರದೇಶವನ್ನು ಅತಿಕ್ರಮಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ 1967ರಲ್ಲಿ ಚೀನಾವನ್ನು ಸೋಲಿಸಿದ್ದರು. ಅಲ್ಲದೆ ಯಾರಾದರೂ ಭಾರತದೊಂದಿಗೆ ಜಗಳಕ್ಕಿಳಿದರೆ ಅವರಿಗೆ ಪಾಠ ಕಲಿಸಲಾಗುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದರು ಎಂದು ಶ್ಲಾಘಿಸಿದ್ದಾರೆ. ಆಗಿನ ಅಮೆರಿಕ ಸರ್ಕಾರದ ಬೆದರಿಕೆಗಳ ಹೊರತಾಗಿಯೂ, ಇಂದಿರಾ ಗಾಂಧಿ 1971ರ ಭಾರತ-ಪಾಕ್ ಯುದ್ಧದಿಂದ ಹಿಂದೆ ಸರಿಯಲಿಲ್ಲ ಮತ್ತು ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶವನ್ನು ರಚಿಸುವುದನ್ನು ಮುಂದುವರೆಸಿದರು ಎಂದು ತಿಳಿಸಿದ್ದಾರೆ.

ಬಿಜೆಪಿ ತಿರುಗೇಟು:

ರಫೇಲ್ ಮತ್ತು ಆಪರೇಷನ್ ಸಿಂಧೂರ್ ಸೇರಿದಂತೆ ಪ್ರಮುಖ ರಕ್ಷಣಾ ವಿಷಯಗಳಲ್ಲಿ ಪಾಕಿಸ್ತಾನದ ನಿಲುವನ್ನು ರೇವಂತ್ ರೆಡ್ಡಿ ಪ್ರತಿಧ್ವನಿಸುತ್ತಿದ್ದಾರೆ ಎಂದು ತೆಲಂಗಾಣ ಬಿಜೆಪಿ ಘಟಕವು ರೇವಂತ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ರೆಡ್ಡಿ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳನ್ನು ಪ್ರಶ್ನಿಸುವುದನ್ನು ಮೀರಿ, ಪಾಕಿಸ್ತಾನವನ್ನು ಮನ ಪಾಕಿಸ್ತಾನ ಅಂದರೆ ನಮ್ಮ ಪಾಕಿಸ್ತಾನ ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದೆ. ಪಕ್ಷವು ಹೇಳುವ ಈ ಹೇಳಿಕೆಗಳು ಪಾಕಿಸ್ತಾನದ ನಿರೂಪಣೆಗೆ ಹೊಂದಿಕೆಯಾಗುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಜಿಕಲ್ ಸೈಕ್ ಮತ್ತು ಬಾಲಕೋಟ್ ದಾಳಿಯನ್ನು ಪ್ರಶ್ನಿಸುವುದರಿಂದ ಹಿಡಿದು ನಮ್ಮ ಸಶಸ್ತ್ರ ಪಡೆಗಳನ್ನು ಅಣಕಿಸುವುದು ಮತ್ತು ಆಗ್ನಿಪಥ್ ಅನ್ನು ವಿರೋಧಿಸುವವರೆಗೂ – ಭಾರತದ ವಿರುದ್ಧ ನಿಲ್ಲುವುದು ಕಾಂಗ್ರೆಸ್ಸಿನ ಡಿಎನ್‌ಎ ಯಲ್ಲಿದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡುವ ಬದಲು ವಿಶ್ವ ಸುಂದರಿ ಫೋಟೋಗಳಿಗೆ ಅಂಟಿಕೊಳ್ಳಿ ಎಂದು ಬಿಜೆಪಿ ವ್ಯಂಗ್ಯವಾಡಿದ್ದು, ರೇವಂತ್ ರಾಷ್ಟ್ರೀಯ ಭದ್ರತೆ ನಿಮ್ಮದಷ್ಟೇ ಅಲ್ಲ. ರಾಷ್ಟ್ರ ಗೆದ್ದಾಗ, ಕಾಂಗ್ರೆಸ್ ಬೇಸರಗೊಳ್ಳುತ್ತದೆ ಎಂದು ಟೀಕಾಪ್ರಹಾರ ನಡೆಸಿದೆ.

ಇನ್ನೂ ಪ್ರಮುಖವಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಸಂಭ್ರಮಿಸಿದವರಲ್ಲಿ ಮೊದಲಿಗರಾಗಿ ರೇವಂತ್‌ ರೆಡ್ಡಿ ಇದ್ದರು, ಹೈದ್ರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಜೊತೆಯಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ವಿಜಯೋತ್ಸವ ಆಚರಿಸಿದ್ದರು. ಆದರೆ ದಿಢೀರ್‌ ಅಂತ ತೆಲಂಗಾಣ ಸಿಎಂ ಉಲ್ಪಾ ಹೊಡೆದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸುವಂತಾಗಿದೆ.

- Advertisement -

Latest Posts

Don't Miss