ಬೆಂಗಳೂರು : ಜಿಲ್ಲೆಗಳಲ್ಲಿ ಹೇಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ, ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವ ಕಾನೂನು ಸುವ್ಯವಸ್ಥೆಯ ಬಗ್ಗೆ ವಿವರ ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಡಿಸಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಸಭೆಯನ್ನು ನಡೆಸಿದ್ದಾರೆ. ಪ್ರಮುಖವಾಗಿ ಸಂಪೂರ್ಣ ರಾಜ್ಯದ ಪ್ರಗತಿ ಪರಿಶೀಲನಾ ಸಭೆಯಂತೆ ಹೇಳಲಾಗುವ ಇದರಲ್ಲಿ ಸಿಎಂ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ನಿರ್ದೇಶನದಂತೆ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ. ಎಲ್ಲರಿಗೂ ನಿಗದಿ ಪಡಿಸಿರುವ ಕಾರ್ಯಗಳನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಬೇಕು, ಇಲ್ಲವಾದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ಔಟ್ ಗೋಯಿಂಗ್ ಸಿಎಂ ಸಿದ್ದರಾಮಯ್ಯ ಅವರು ಡಿಸಿ, ಸಿಇಒ ಗಳ ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಯಂತ್ರ ಹೇಗೆ ಸಂಪೂರ್ಣವಾಗಿ ಹಳಿ ತಪ್ಪಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ಜರಿದಿದ್ದಾರೆ.
ಅಧಿಕಾರಿಗಳನ್ನು ಬಿಟ್ಟು ಮೊದಲು ಮಂತ್ರಿಗಳಿಗೆ ಕ್ಲಾಸ್ ತಗೊಳ್ಳಿ..
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ತಮ್ಮ ಕೋಪ-ತಾಪ, ರೋಷಾವೇಷ ಅಧಿಕಾರಿಗಳ ಮೇಲಲ್ಲ, ಸಚಿವ ಸಂಪುಟದ ಸದಸ್ಯರ ಮೇಲೆ ತೋರಿಸಿ. ನಿಮ್ಮ ಹತಾಶೆಯನ್ನು, ಅಸಹಾಯಕತೆಯನ್ನ ಅಧಿಕಾರಿಗಳ ಬದಲು ತಮ್ಮ ಮಾತಿಗೆ ನಯಾ ಪೈಸೆ ಬೆಲೆ ಕೊಡದ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕ್ಲಾಸ್ ತೆಗೆದುಕೊಂಡು ನಿಮ್ಮ ದಮ್ಮು ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ತಾವು ಸಚಿವರಿಗೆ ನೀಡಿರುವ ನಿರ್ದೇಶಗಳಲ್ಲಿ ಯಾವುದಾದರೂ ಒಂದಾದರೂ ಪಾಲನೆ ಆಗುತ್ತಿದೆಯಾ? ತಿಂಗಳಲ್ಲಿ ಒಂದು ದಿನ ಜನತಾದರ್ಶನ ಮಾಡಿ ಎಂದರೂ ಮಾಡುತ್ತಿಲ್ಲ. ಜಿಲ್ಲಾ ಪ್ರವಾಸ ಮಾಡಿ ಜನರ ಸಮಸ್ಯೆ ಕೇಳಿ ಎಂದರೂ ಮಾಡುತ್ತಿಲ್ಲ. ಕನಿಷ್ಟಪಕ್ಷ ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಎಂದರೂ ಗುರುವಾರದ ಸಂಪುಟ ಸಭೆಗೆ ಬಿಟ್ಟರೆ ಬಹುತೇಕ ಸಚಿವರು ವಿಧಾನಸೌಧದತ್ತ ತಲೆಯೂ ಹಾಕುತ್ತಿಲ್ಲ. ನಿವೃತ್ತ ಅಧಿಕಾರಿಗಳನ್ನು ಹೊರ ಗುತ್ತಿಗೆ ಸೇವೆಯಿಂದ ತಕ್ಷಣ ಬಿಡುಗಡೆ ಮಾಡಿ ಎಂದರೂ ಬಿಡುಗಡೆ ಮಾಡಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯನವರೇ ನಿಮ್ಮ ಮಾತಿಗೆ ಯಾರೊಬ್ಬರೂ ಕ್ಯಾರೇ ಎನ್ನುತ್ತಿಲ್ಲ..!
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ನೀಡಿ ಎಂದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಕಳೆದ ವರ್ಷದ ಪರಿಹಾರ ವಿತರಣೆಯೇ ಬಾಕಿ ಇದೆ. ಕೆರೆ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ ಎಂದು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದನ್ನು ಯಾರೂ ಕೇರ್ ಮಾಡಿಲ್ಲ. ರಾಜಕಾಲುವೆ ಅಕ್ರಮ ಒತ್ತುವರಿ ತೆರವು ಮಾಡಿ ಎಂದು ನಗರ ಪ್ರದಕ್ಷಿಣೆ ಹಾಕಿ ಬಂದರೂ ಯಾರೂ ಕ್ಯಾರೆ ಅನ್ನುತ್ತಿಲ್ಲ. ಜನಸ್ಪಂದನ ಅರ್ಜಿ ವಿಲೇವಾರಿ ತ್ವರಿತವಾಗಿ ಆಗಬೇಕು ಎಂಬ ಸೂಚನೆ ಭಾಷಣಕ್ಕೆ ಸೀಮಿತವಾಯಿತು ಎಂದು ಟೀಕಿಸಿದ್ದಾರೆ.
ಮೈಕ್ರೋಫೈನಾನ್ಸ್ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೆಡಿಪಿ ಸಭೆಗಳಲ್ಲಿ ಪರಿಶೀಲನೆ ನಡೆಸಿ ಎಂದರೂ ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಿಮ್ಮ ಗಮನಕ್ಕೆ ಬಂದಿದೆಯೇ ಇಲ್ಲವೋ ಗೊತ್ತಿಲ್ಲ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿನ್ನೆಯೂ ಕೊಡಗಿನಲ್ಲಿ ಒಂದು ಆತ್ಮಹತ್ಯೆ ಆಗಿದೆ. ಡಿಸಿಎಂ ಸಾಹೇಬರು ನೋಡಿದರೆ ತಾವು ಮಾಡಿದ ಎಂಜಿನಿಯರ್ ಗಳ ವರ್ಗಾವಣೆ ಆದೇಶಕ್ಕೆ ಸಡ್ಡು ಹೊಡೆದು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ತಮ್ಮ ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು ಧಮ್ಕಿ ಹಾಕುತ್ತಾರೆ. ನಿಮ್ಮ ಘನಂದಾರಿ ಕಾರ್ಯವೈಖರಿ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ದೊಡ್ಡ ಪಟ್ಟಿಯೇ ಇದೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ
ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಹಿಡಿತ ಇಲ್ಲದೆ ಹೋದರೆ ಆಡಳಿತ ಯಂತ್ರ ಹಳ್ಳ ಹಿಡಿಯುತ್ತೆ..
ಮನೆಯ ಯಜಮಾನ ಸರಿ ಇಲ್ಲದೆ ಹೋದರೆ ಹೇಗೆ ಸಂಸಾರ ಬೀದಿಗೆ ಬರುತ್ತದೋ ಅದೇ ರೀತಿ ಒಂದು ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಹಿಡಿತ ಇಲ್ಲದೆ ಹೋದರೆ ಆಡಳಿತ ಯಂತ್ರ ಹಳ್ಳ ಹಿಡಿಯುತ್ತದೆ. ಮುಖ್ಯಮಂತ್ರಿ ಮಾತಿಗೆ ಸಚಿವರೇ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಆಡಳಿತಶಾಹಿಯಲ್ಲಿ ಗೊಂದಲ ಮೂಡಿಸುತ್ತದೆ ಎಂದು ತಿವಿದಿದ್ದಾರೆ.
ಆದ್ದರಿಂದ ಮೊದಲು ನಿಮ್ಮ ಸಚಿವ ಸಂಪುಟ ಸಚಿವರಿಗೆ ನಿಮ್ಮ ಮಾತು, ಆದೇಶ ಪಾಲನೆ ಮಾಡುವಂತೆ ಕ್ಲಾಸ್ ತೆಗೆದುಕೊಂಡು ತಾಕೀತು ಮಾಡಿ. ಕೆಲಸ ಮಾಡದ ಸೋಮಾರಿ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಿ ಸಮರ್ಥರನ್ನು ತೆಗೆದುಕೊಳ್ಳಿ. ಇಷ್ಟಕ್ಕೂ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ಹೈಕಮಾಂಡ್ ಯಾಕೆ ಸೊಪ್ಪು ಹಾಕುತ್ತಿಲ್ಲ? ಇದು ತಾವು ಔಟ್ ಗೋಯಿಂಗ್ ಸಿಎಂ ಎಂಬುದಕ್ಕೆ ಪರೋಕ್ಷ ಸೂಚನೆಯೋ? ಅಥವಾ ಹೇಗಿದ್ದರೂ ಮುಖ್ಯಮಂತ್ರಿ ಬದಲಾವಣೆ ಆಗಲಿದೆ, ಈಗ ಸಂಪುಟ ವಿಸ್ತರಣೆ ಅಥವಾ ಪುನಾರಾಚನೆ ಯಾಕೆ ಎಂದು ಸುಮ್ಮನಿದ್ದಾರೋ? ಎಂದು ಆರ್. ಅಶೋಕ್ ತಮ್ಮ ಟ್ವೀಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.