ಬೆಂಗಳೂರು: ಕಾಂಬೋಡಿಯಾ ಹಾಗೂ ಥಾಯ್ಲೆಂಡ್ ನಡುವೆ ತೀವ್ರ ಘರ್ಷಣೆ ಮುಂದುವರೆದಿದೆ. ಶಿವನ ದೇವಸ್ಥಾನದ ವಿಚಾರಕ್ಕೆ ನಡೆದ ಗಲಭೆಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಬುಧವಾರ ದಟ್ಟವಾದ ಅರಣ್ಯಕ್ಕೆ ಸೇರಿರುವ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯನ್ ಡ್ರೋನ್ ಪತ್ತೆಯಾಗಿದೆ ಎಂದು ಥಾಯ್ಲೆಂಡ್ ಆರೋಪಿಸಿತ್ತು. ಇದಾದ ಸ್ವಲ್ಪ ಹೊತ್ತಿನ ಬಳಿಕ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್ ಸೈನಿಕರು ಗಾಯಗೊಂಡಿದ್ದರು. ತೀರ ವಿಕೋಪಕ್ಕೆ ತಿರುಗಿದ ಗಲಾಟೆ ಎರಡು ದೇಶಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.
ಇನ್ನೂ ಈ ಘಟನೆ ಬೆನ್ನಲ್ಲೇ ಎರಡೂ ದೇಶಗಳು ತಮ್ಮಲ್ಲಿನ ರಾಯಭಾರಿಗಳನ್ನು ಹೊರಕ್ಕೆ ಹಾಕಿವೆ. ಬಳಿಕ ಥಾಯ್ಲೆಂಡ್ ಕಾಂಬೋಡಿಯಾದ ಮೇಲೆ ಡ್ರೋನ್ ಅಟ್ಯಾಕ್ ಮಾಡಿದೆ. ಇದರಿಂದ ಕೆರಳಿದ ಕಾಂಬೋಡಿಯಾ ಥಾಯ್ಲೆಂಡ್ ಮೇಲೆ ಗುಂಡಿನ ದಾಳಿ ನಡೆಸಿದೆ. ಇದರಿಂದ ಉಭಯ ದೇಶಗಳ ನಡುವಿನ ಸಂಪರ್ಕ ಬಂದ್ ಆಗಿದೆ. ಎರಡೂ ದೇಶಗಳು ತಮ್ಮ ತಮ್ಮ ಗಡಿಗಳನ್ನು ಮುಚ್ಚಿಕೊಂಡಿವೆ. ಅಲ್ಲದೆ ತಮ್ಮ ದೇಶದ ಜನರು ವಾಪಸ್ ಆಗುವಂತೆ ಸೂಚಿಸಿದ್ದು, ಪರಿಸ್ಥಿತಿ ಸಂಘರ್ಷದ ದಾರಿ ಹಿಡಿಯುವ ಲಕ್ಷಣಗಳು ಕಂಡು ಬರುತ್ತಿವೆ.
ಮೊದಲಿಗೆ ನೆಲ ಬಾಂಬ್ ಅನ್ನು ಕಾಂಬೋಡಿಯಾ ಇಟ್ಟಿತ್ತು ಎಂದು ಥಾಯ್ಲೆಂಡ್ ಆರೋಪಿಸಿತ್ತು. ಕಾಂಬೋಡಿಯಾದ ದಾಳಿಯಿಂದ ಥಾಯ್ಲೆಂಡ್‌ನ 9 ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಂಬೋಡಿಯಾದ ದಾಳಿಗೆ ತಿರುಗೇಟು ನೀಡಿರುವ ಥಾಯ್ಲೆಂಡ್ ಸೇನೆಯು ಬಿಎಮ್ 21 ರಾಕೆಟ್‌ಗಳನ್ನು ಉಡಾಯಿಸಿದೆ. ಅಲ್ಲದೆ ಎಫ್ 16 ಯುದ್ಧ ವಿಮಾನದ ಮೂಲಕ ವೈಮಾನಿಕ ದಾಳಿ ನಡೆಸಿದೆ. ಉಭಯ ದೇಶಗಳ ನಡುವಿನ ಘರ್ಷಣೆಯಲ್ಲಿ 800 ಕಿಲೋ ಮೀಟರ್ ಗಡಿಯಲ್ಲಿ ಆರು ಸ್ಥಳಗಳಲ್ಲಿ ದಾಳಿಗಳು ನಡೆದಿವೆ.
ಬ್ಯಾಂಕಾಕ್ ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರಕ್ಕಾಗಿ ಎರಡೂ ದೇಶಗಳ ನಡುವೆ ಫೈಟ್ ನಡೆಯುತ್ತಿದೆ. ದಶಕಗಳಿಂದ ಮುಂದುವರೆದಿರುವ ಈ ತಿಕ್ಕಾಟಕ್ಕೆ ಇದೀಗ ಮತ್ತೆ ಸಂಘರ್ಷದ ರೂಪ ಬಂದಿದೆ. ಬೌದ್ಧ ರಾಷ್ಟ್ರಗಳ ನಡುವೆ ಹಿಂದೂ ದೇವಾಲಯಕ್ಕಾಗಿ ತಿಕ್ಕಾಟ ನಡೆಯುತ್ತಿರುವುದು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.