Friday, April 25, 2025

Latest Posts

ಭೂಕಂಪಕ್ಕೆ ಸಾವಿನ ರಣಕೇಕೆ, ರಕ್ತಕ್ಕಾಗಿ ಪರದಾಟ : ಕೇಳದಾಯಿತೆ ದೇವನೇ ಈ ಜೀವಗಳ ಆರ್ತನಾದ..?

- Advertisement -

ಬೀಕರ ಭೂಕಂಪಕ್ಕೆ ತತ್ತರಿಸಿರುವ ಬ್ಯಾಂಕಾಕ್‌ ಹಾಗೂ ಮಯನ್ಮಾರ್‌ಗಳಲ್ಲಿ ಕಟ್ಟಡಗಳ‌ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನೋಡ ನೋಡುತ್ತಿದ್ದಂತೆ ನೆಲಕಚ್ಚಿರುವ ಬಹು ಮಹಡಿಗಳು, ಅಲ್ಲಲ್ಲಿ ಬಿರುಕು ಬಿಟ್ಟ ಭೂಮಿ, ಕುಸಿದು ಬಿದ್ದ ಸೇತುವೆಗಳು ಹೀಗೆ ಅಕ್ಷರಶಃ ಎರಡೂ ದೇಶಗಳಲ್ಲಿ ನರಕ ಸದೃಶ್ಯ ವಾತಾವರಣವೇ ನಿರ್ಮಾಣವಾಗಿದೆ. ಅಲ್ಲದೆ ಭಯಾನಕ ಭೂಕಂಪನಕ್ಕೆ ಸಾವಿನ ರಣಕೇಕೆ ಮುಂದುವರೆದಿದೆ. ಇನ್ನೂ ಒಂದೇ ದಿನದಲ್ಲಿ ಮೂರು ಬಾರಿ ಸಂಭವಿಸಿರುವ ಭೂಕಂಪದ ತೀವ್ರತೆಯು ಬ್ಯಾಂಕಾಕ್‌ನಿಂದ ಬಾಗ್ಲಾ ದೇಶದ ವರೆಗೂ ಹಬ್ಬಿದೆ. ಮಧ್ಯ ಮಯನ್ಮಾರ್‌ನ ಸಾಗೈಂಗ್ ನಗರದ ವಾಯುವ್ಯಕ್ಕೆ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೇಶದ ದೊಡ್ಡ ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಅಲ್ಲದೆ ಇಂದು ಮತ್ತೆ ಎರಡು ಬಾರಿ ಭೂಮಿಯು ಕಂಪಿಸಿದ್ದು, ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಆಸ್ಪತ್ರೆಗಳೇ ಕಣ್ಣೀರ ಕಥೆ ಹೇಳುವ ಸ್ಥಿತಿ..

ಇನ್ನೂ ಮಯನ್ಮಾರ್‌ನಲ್ಲಿ ಭೂಕಂಪದ ಹೊಡೆತಕ್ಕೆ ನಲುಗಿರುವ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಒಂದೆಡೆ ಉಳಿದುಕೊಳ್ಳಲು ಮನೆಗಳಿಲ್ಲ, ಇನ್ನೊಂದೆಡೆ ತಿನ್ನಲು ಅನ್ನವಿಲ್ಲ ಹೀಗೆ ನಿಜಕ್ಕೂ ಆ ಜನರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಭಯಾನಕ ಭೂಕಂಪಕ್ಕೆ ಜೀವ ರಕ್ಷಿಸಬೇಕಿದ್ದ ಆಸ್ಪತ್ರೆಗಳೇ ಇದೀಗ ಸಾವಿನ ಕಥೆಗಳನ್ನು ಹೇಳುವಂತಾಗಿರುವುದು ಎಂಥವರನ್ನು ಮನಕಲಕುವಂತೆ ಮಾಡುತ್ತಿದೆ. ಇನ್ನೂ ಈ ಪ್ರಬಲವಾಗಿ ಎರಡು ಬಾರಿ ಭೂಮಿಯ ಕಂಪನದ ಪರಿಣಾಮವಾಗಿ ಆಸ್ಪತ್ರೆಗಳೂ ಸಹ ನಾಮಾವಶೇಷವಾಗಿ ಹೋಗಿದ್ದು, ಗಾಯಾಳುಗಳಿಗೆ ರಸ್ತೆಯಲ್ಲಿಯೇ ಚಿಕಿತ್ಸೆ ನೀಡಿ ಜೀವ ಉಳಿಸುವ ದಯನೀಯ ಸ್ಥಿತಿ ಆ ನತದೃಷ್ಟ ಜನರದ್ದಾಗಿದೆ. ಮಯನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000 ಕ್ಕೆ ಏರಿಕೆಯಾಗಿದ್ದು, ಸುಮಾರು 2000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಜುಂಟಾ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಅಳಿದುಳಿದ ಆಸ್ಪತ್ರೆಗಳಲ್ಲಿ ಜನರ ಸಾಲುಗಳಲ್ಲಿ ನಿಂತು ಚಿಕಿತ್ಸೆ ಪಡೆಯುವುದೂ ಸಹ ಕಷ್ಟವಾಗಿದೆ.

ರಕ್ತಕ್ಕಾಗಿ ಪರದಾಟ..!

ಅಲ್ಲದೆ ಗಾಯಾಳುಗಳ ಜೀವ ಉಳಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಪ್ರಮುಖವಾಗಿ ರಕ್ತದ ತೀವ್ರ ಕೊರತೆಯಿಂದ ಆರೋಗ್ಯ ಇಲಾಖೆಯು ಕಂಗಾಲಾಗಿದೆ. ಬಹು ಮಹಡಿ ಕಟ್ಟಡಗಳ ಕೆಳಗೆ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯ ಜೊತೆ ಜೊತೆಗೆಯೇ ರಕ್ತವನ್ನು ಹೊಂದಿಸುವುದು ಅಲ್ಲಿನ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಕಂಪನದ ತೀವ್ರತೆಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದ ಆಸ್ಪತ್ರೆಗಳೂ ಸಹ ಮಣ್ಣು ಪಾಲಾಗಿವೆ. ಇನ್ನೂ ಕಟ್ಟಡಗಳ ಕೆಳಗೆ ನಮ್ಮವರು ಯಾರಾದರೂ ಸಿಗುತ್ತಾರಾ..? ಎಂಬ ಧಾವಂತದಲ್ಲಿ ಇಟ್ಟಿಗೆಗಳನ್ನು ಎತ್ತಿಟ್ಟು ಜನರು ಹುಡುಕಾಡುವ ಸ್ಥಿತಿ ನಿಜಕ್ಕೂ ಹೃದಯ ಒಡೆಯುವಂತಿದೆ. ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯರು, ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಹೀಗೆ ತಮ್ಮ ತಮ್ಮ ಕುಟುಂಬಸ್ಥರನ್ನು ಹುಡುಕಾಡುತ್ತಿರುವ ಜನರು ಕಣ್ಣೀರಲ್ಲಿಯೇ ಕೈ ತೊಳೆಯುವಂತಾಗಿದೆ. ಈ ಎಲ್ಲ ಘಟನೆಗಳಿಂದ ಮಯನ್ಮಾರ್‌ನ ನೈತಾಪಿ ಹಾಗೂ ಹಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಮಾನವೀಯತೆ ಮರೆಯದ ಭಾರತ..!

ಅಂದಹಾಗೆ ತನ್ನ ನೆರೆಯ ರಾಷ್ಟ್ರಗಳಿಗೆ ಯಾವುದೇ ಸಂಕಷ್ಟ ಎದುರಾದರೆ ತಕ್ಷಣ ಆಪತ್ಭಾಂದವನಂತೆ ಥಟ್ಟನೇ ಎದ್ದು ನಿಲ್ಲುವ ಭಾರತವು ಸಹ ಭೂಕಂಪ ಪೀಡಿತ ಬ್ಯಾಂಕಾಕ್‌ ಹಾಗೂ ಮಯನ್ಮಾರ್‌ ದೇಶಗಳಿಗೆ ನೆರವಿನ ಹಸ್ತ ಚಾಚಿದೆ. ಈಗಾಗಲೇ15 ಟನ್ ಪರಿಹಾರ ಸಾಮಗ್ರಿಗಳನ್ನು ಮಯನ್ಮಾರ್‌ಗೆ ಕಳುಹಿಸಿದೆ. ಹಿಂಡನ್ ವಾಯುನೆಲೆಯಿಂದ ಭಾರತೀಯ ವಾಯುಪಡೆಯ ಸಿ–130ಜೆ ಸರಕು ಸಾಗಣೆ ವಿಮಾನದಲ್ಲಿ ಮಯನ್ಮಾರ್‌ಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಮುಖ್ಯವಾಗಿ ನೊಂದ ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾಗುವ ಆಹಾರ ಪದಾರ್ಥಗಳು, ವಾಟರ್‌ ಪ್ಯೂರಿಫೈರ್‌, ಸೌರ ವಿದ್ಯುದೀಪಗಳು, ಔಷಧಿ ಸಾಮಗ್ರಿಗಳು, ಸಿರಿಂಜ್‌, ಬ್ಯಾಂಡೇಜ್‌ಗಳು ಸೇರಿದಂತೆ ಹಾಸಿಗೆ, ಹೊದಿಕೆಗಳನ್ನು ಭಾರತವು ಕಳುಹಿಸುವ ಮೂಲಕ ಮಾನವೀಯತೆಯ ಜಪ ಮಾಡಿದೆ. ಅಲ್ಲದೆ ಈ ಎರಡೂ ಸಂತ್ರಸ್ತ ದೇಶಗಳಿಗೆ ಅಗತ್ಯ ಸಹಾಯ ಸಹಕಾರ ನೀಡುತ್ತಿರುವುದು ಭಾರತೀಯರಾದ ನಾವೆಲ್ಲ ಹೆಮ್ಮೆ ಪಡುವ ಸಂಗತಿಯಾಗಿದೆ.

- Advertisement -

Latest Posts

Don't Miss