Wednesday, March 19, 2025

Latest Posts

ಸಂಪುಟ ವಿಸ್ತರಣೆಯಾಗುತ್ತೆ, ನಾನೂ ಮಂತ್ರಿಯಾಗ್ತೀನಿ : ಸಲೀಂ ಹೊರಹಾಕಿದ್ರು ಮಿನಿಸ್ಟರ್‌ ಅಗುವ ಡ್ರೀಮ್

- Advertisement -

Political News: ಕಳೆದೆರಡು ತಿಂಗಳುಗಳಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆಯುತ್ತಿರುವ ಪದವಿ ಪ್ರಹಸನವು ಮುಗಿಯುವ ಹಂತವನ್ನು ತಲುಪುತ್ತಿಲ್ಲ. ಒಂದು ಕಡೆ ಮುಖ್ಯಮಂತ್ರಿ ಬದಲಾವಣೆಯ ಬಿರುಗಾಳಿ ಎದ್ದಿದ್ದರೆ, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರಿಗೆ ಕೊಕ್‌ ನೀಡುವ ವಿಚಾರಗಳು ಚರ್ಚೆಯಾಗುತ್ತಿವೆ. ಆದರೆ ಈ ಎಲ್ಲದರ ನಡುವೆಯೇ ಈಗ ಸಚಿವ ಸಂಪುಟ ವಿಸ್ತರಣೆಯ ಮಾತುಗಳ ಜೊತೆಯೇ ಮಂತ್ರಿಗಿರಿಯ ಕನಸುಗಳು ಶಾಸಕರಿಂದ ಹೊರಬೀಳುತ್ತಿರುವುದು ಕುತೂಹಲ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗುವಂತೆಯೇ ಕೈ ಶಾಸಕರೊಬ್ಬರು ನೀಡಿರುವ ಹೇಳಿಕೆ ಕಾಂಗ್ರೆಸ್ ಶಾಸಕರಲ್ಲಿ ಮಂತ್ರಿಗಿರಿಯ ಕನಸು ಚಿಗುರುವಂತೆ ಮಾಡಿದೆ.

ಇನ್ನೂ ಇದೇ ವಿಚಾರವಾಗಿ ಮಾತನಾಡಿರುವ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರು, ಬರುವ ಮೇ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟದ ವಿಸ್ತರಣೆಯಾಗಲಿದ್ದು, ಈ ಬಾರಿ ನನಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಈ ಹಿಂದೆಯೇ ನನಗೆ ಮಂತ್ರಿಗಿರಿ ದೊರೆಯಬೇಕಿತ್ತು. ಆದರೆ ಈ ಬಾರಿ ನನಗೆ ಆ ಭಾಗ್ಯ ಒದಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಬಿಜೆಪಿ ಶಾಸಕರಾದ ಶಿವರಾಮ್ ಹೆಬ್ಬಾರ ಹಾಗೂ ಎಸ್.ಟಿ.ಸೋಮಶೇಖರ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಮಹತ್ವದ ಮಾಹಿತಿ ಇದೆ. ಇನ್ನೂ ಅವರಿಬ್ಬರು ನಮ್ಮ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ ಅನ್ನು ಕೂಡ ಅವರು ಸ್ವಾಗತಿಸಿದ್ದಾರೆ. ಅದರೆ ಅವರು ನಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಬೇಕಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ಇನ್ನೂ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಮುಖಂಡರು ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ಅವರನ್ನೂ ಸಹ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್‌ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ಬದಲಾವಣೆಯ ಜವಾಬ್ದಾರಿ ಹಾಗೂ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದು ಸಲೀಂ ಅಹಮದ್ ಹೇಳಿದ್ದಾರೆ. ಅಲ್ಲದೆ ವಕ್ಫ್‌ ಬೋರ್ಡ್‌ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದರಲ್ಲಿ ಸಚಿವ ಜಮೀರ್‌ ಅಹ್ಮದ್ ಅವರು ಬೇಸರಗೊಂಡಿದ್ದಾರೆ ಅಂತ ನನಗೆ ಅನ್ನಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಟ್ನಲ್ಲಿ.. ಪವರ್‌ ಶೇರಿಂಗ್‌ ಮಾತುಕತೆಯ ನಡುವೆಯೇ ದಿನಕ್ಕೊಂದರಂತೆ ಒಬ್ಬೊಬ್ಬ ಶಾಸಕರು ಈ ರೀತಿಯಾಗಿ ಮಂತ್ರಿಗಿರಿಯ ಆಸೆ ಹೊರಹಾಕುತ್ತಾ ಹೋದರೆ, ಆಂತರಿಕ ಕಲಹ, ಭಿನ್ನಾಭಿಪ್ರಾಯಗಳಿಂದ ಬಳಲುತ್ತಿರುವ ಕಾಂಗ್ರೆಸ್‌ ಪಕ್ಷವೂ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವುದನ್ನು ತಳ್ಳಿ ಹಾಕುವಂತಿಲ್ಲ..

- Advertisement -

Latest Posts

Don't Miss