ನವದೆಹಲಿ : ವಕ್ಫ್ ಇಸ್ಲಾಮ್‌ನ ಪರಿಕಲ್ಪನೆಯಾಗಿದ್ದರೂ ಆ ಧರ್ಮದ ಅವಿಭಾಜ್ಯ ಅಂಗವಲ್ಲ. ಅಲ್ಲದೆ ಅದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ಸರ್ಕಾರಿ ಭೂಮಿಯ ಮೇಲೆ ಯಾರೂ ಹಕ್ಕು ಸಾಧಿಸಲು ಸಾಧ್ಯವಿಲ್ಲ. ವಕ್ಫ್ ಎಂದು ಘೋಷಿಸಲಾದ ಆಸ್ತಿಗಳನ್ನು ಮರುಪಡೆಯಲು ಕಾನೂನುಬದ್ಧವಾಗಿ ಅಧಿಕಾರವನ್ನು ಸರ್ಕಾರ ಹೊಂದಿದೆ ಎಂದೂ ತಿಳಿಸಿದೆ.
ಹೀಗಾಗಿ ಸರ್ಕಾರಿ ಭೂಮಿಯನ್ನು ಯಾರು ಪಡೆದುಕೊಳ್ಳಲು ಸಾಧ್ಯವಿಲ್ಲ..
ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಈ ವೇಳೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಕ್ಫ್ ಅನ್ನು ಇಸ್ಲಾಂನ ಅತ್ಯಗತ್ಯ ಭಾಗವೆಂದು ತೋರಿಸುವವರೆಗೆ ಉಳಿದ ವಾದಗಳಿಗೆ ಬೆಲೆ ಇಲ್ಲ ಎಂದು ಹೇಳಿದ್ದಾರೆ. ಸರ್ಕಾರಿ ಭೂಮಿ ವಕ್ಫ್‌ಗೆ ಸೇರಿದೆ ಎಂದು ಘೋಷಿಸಲಾಗಿದ್ದರೂ ಅಂಥ ಆಸ್ತಿಯನ್ನು ಸರ್ಕಾರ ಉಳಿಸಿಕೊಳ್ಳಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪಿದೆ. ಹಾಗಾಗಿ ವಕ್ಫ್ ಬೈ ಯೂಸರ್ ಎಂಬುದು ಮೂಲಭೂತ ಹಕ್ಕಲ್ಲ, ಹೀಗಾಗಿ ಸರ್ಕಾರಿ ಭೂಮಿಯನ್ನು ಯಾರು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಯ್ದೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ..
ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಟಿಪ್ಪಣಿಯಲ್ಲಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರವು , ವಕ್ಫ್ ಮೂಲತಃ ಒಂದು ಜಾತ್ಯತೀತ ಪರಿಕಲ್ಪನೆಯಾಗಿದೆ. ವಕ್ಫ್‌ನ ಜಾತ್ಯತೀತ ಅಂಶಗಳನ್ನು ಮಾತ್ರವೇ ನಿಯಂತ್ರಣಕ್ಕೊಳಪಡಿಸುತ್ತದೆಯೇ ಹೊರತು, ಧಾರ್ಮಿಕ ಸ್ವಾತಂತ್ರ್ಯವನ್ನಲ್ಲ, ಹಾಗಾಗಿ ವಕ್ಫ್ ಕಾಯ್ದೆಗೆ ತಡೆ ನೀಡುವುದು ತುರ್ತು ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಇನ್ನೂ ಈ ಸಂಬಂಧ ದಾಖಲಾಗಿರುವ ಅರ್ಜಗಳನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಾಸೀಹ್ ಅವರಿದ್ದ ಪೀಠವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಇನ್ನೂ ಈ ಹಿಂದೆ ಇದ್ದ ವಕ್ಫ್ ಬೋರ್ಡ್ ಪರಿಕಲ್ಪನೆಯ ಕುರಿತು ಸಾಕಷ್ಟು ಆಕ್ಷೇಪಗಳು ಹಾಗೂ ಆರೋಪಗಳು ಇದ್ದವು. ಹೀಗಾಗಿ ಕೇಂದ್ರ ಸರ್ಕಾರವು ಅದಕ್ಕೆ ತಿದ್ದುಪಡಿ ತಂದು ಅದರಲ್ಲಿ ಪ್ರಮುಖವಾದ ಅಂಶಗಳನ್ನು ಅಳವಡಿಸಿತ್ತು. ಇದನ್ನು ವಿರೋಧಿಸಿ, ಸಿಂಧುತ್ವವನ್ನು ಪ್ರಶ್ನಿಸಿ ವಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದವು. ಅವುಗಳ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ವಕ್ಫ್’ ಎಂದರೇನು ? ಏನಿದು ವಿವಾದ
‘ವಕ್ಫ್’ ಎಂಬ ಪರಿಕಲ್ಪನೆಯು ಇಸ್ಲಾಮಿಕ್ ಕಾನೂನುಗಳು ಮತ್ತು ಸಂಪ್ರದಾಯಗಳಲ್ಲಿ ಬೇರೂರಿದೆ. ಇದು ಮಸೀದಿಗಳು, ಶಾಲೆಗಳು, ಆಸ್ಪತ್ರೆಗಳು ಅಥವಾ ಇತರ ಸಾರ್ವಜನಿಕ ಸಂಸ್ಥೆಗಳನ್ನು ನಿರ್ಮಿಸುವಂತಹ ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಮುಸ್ಲಿಂ ಪರಿಕಲ್ಪನೆಯಲ್ಲಿ ಮಾಡಿದ ದತ್ತಿ ವ್ಯವಸ್ಥೆಯನ್ನು ಸೂಚಿಸುತ್ತದೆ. ವಕ್ಫ್ ನ ಮತ್ತೊಂದು ರೀತಿಯಲ್ಲಿ ಅರ್ಥೈಸಿ ವ್ಯಾಖ್ಯಾನಿಸುವ ಲಕ್ಷಣವೆಂದರೆ ಅದು ಅಳಿಸಲಾಗದು ಎಂದಾಗುತ್ತದೆ – ಅಂದರೆ ಅದನ್ನು ಮಾರಾಟ ಮಾಡಲು, ಉಡುಗೊರೆಯಾಗಿ ನೀಡಲು, ಆನುವಂಶಿಕವಾಗಿ ಅಥವಾ ಹೊರೆಯಾಗಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಒಂದು ಆಸ್ತಿಯನ್ನು ವಕ್ಫ್ ನಿಂದ, ಅಂದರೆ ವಕ್ಫ್ ನ ಸೃಷ್ಟಿಕರ್ತನಿಂದ ಒಮ್ಮೆ ಕೈಬಿಟ್ಟರೆ, ಅದು ದೇವರಲ್ಲಿ ಸೇರುತ್ತದೆ ಮತ್ತು ಇಸ್ಲಾಮಿಕ್ ನಂಬಿಕೆಯ ಪ್ರಕಾರ ದೇವರು ಶಾಶ್ವತವಾಗಿರುವುದರಿಂದ, ‘ವಕ್ಫ್ ಆಸ್ತಿ’ಯೂ ಸಹ ಹಾಗೆಯೇ ಶಾಶ್ವತವಾಗಿ ಇರುತ್ತದೆ.
ವಕ್ಫ್ ಆಸ್ತಿ ಎಷ್ಟಿದೆ?
ಭಾರತದಲ್ಲಿ ಒಟ್ಟು 8.72 ಲಕ್ಷ ವಕ್ಫ್ ಆಸ್ತಿಗಳಿವೆ. 8 ಲಕ್ಷ ಎಕರೆ ವಕ್ಫ್ ಆಸ್ತಿ ವಿಸ್ತೀರ್ಣ ಆಗಿದೆ. ಆಸ್ತಿಯ ಅಂದಾಜು ಮೌಲ್ಯ 1 ಲಕ್ಷ ಕೋಟಿ ರೂ.. ಆಸ್ತಿಯಲ್ಲಿ ಒಟ್ಟು 1,50,569 ಸ್ಮಶಾನಗಳಿವೆ. 1,19,200 ಮಸೀದಿಗಳಿವೆ. 1,13,187 ಅಂಗಡಿ ಮತ್ತು 92,505 ಮನೆಗಳಿವೆ. 1,40,788 ಕೃಷಿ ಭೂಮಿಗಳಿವೆ. ವಕ್ಫ್ ಆಸ್ತಿಯ ವ್ಯಾಪ್ತಿಯಲ್ಲಿ 33,492 ಧಾರ್ಮಿಕ ಸ್ಥಳಗಳಿವೆ. ದೇಶದಲ್ಲಿ 32 ವಕ್ಫ್ ಮಂಡಳಿಗಳಿವೆ. ಈ ಎಲ್ಲ ಆಸ್ತಿಗಳಿಗೆ ಸಂಬಂಧಿಸಿದ ಮೇಲ್ವಿಚಾರಣೆಗಾಗಿ ಕೇಂದ್ರ ಸರ್ಕಾರ ವಕ್ಫ್ ಮಸೂದೆಯಲ್ಲಿ ಹಲವು ತಿದ್ದುಪಡಿ ತಂದಿದ್ದು, ಇದರಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂಬ ವಾದವನ್ನು ವಿಪಕ್ಷಗಳು ಮಾಡುತ್ತಿವೆ.