ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ, 7ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ, ಅಹೋರಾತ್ರಿ ಹೋರಾಟ ಮುಂದುವರೆದಿದೆ. ರಾಜ್ಯ ಬಿಜೆಪಿ ನಾಯಕರೂ ಕೂಡ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದು, ನಿನ್ನೆಯಿಂದ ಹೋರಾಟ ತೀವ್ರಗೊಂಡಿದೆ.
ಅಹೋರಾತ್ರಿ ಹೋರಾಟದ ಸ್ಥಳದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊಕ್ಕಾಂ ಹೂಡಿದ್ದಾರೆ. ನಿನ್ನೆ ತಡರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಬಿವೈವಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾತ್ರಿ ವೇದಿಕೆ ಮೇಲೆ ಮಲಗಿದ್ದ ವಿಜಯೇಂದ್ರಗೆ, ಮಧ್ಯರಾತ್ರಿ ಎಬ್ಬಿಸಿದ ರೈತರು ಶುಭ ಕೋರಿದ್ದಾರೆ.
ಪ್ರತಿಭಟನೆ ವೇಳೆ ಮಾಧ್ಯಮದವರ ಜೊತೆ ಮಾತನಾಡಿರುವ ವಿಜಯೇಂದ್ರ, ಕಳೆದ 6 ದಿನಗಳಿಂದ ಕಬ್ಬು ಬೆಳೆಗಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕವಡೆಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ಈ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ.
ಗುರ್ಲಾಪುರದಲ್ಲಿ ಹತ್ತಿರುವ ಪ್ರತಿಭಟನಾ ಕಿಡಿ ರಾಜ್ಯಾದ್ಯಂತ ಹಬ್ಬುತ್ತಿದೆ. ಎಲ್ಲಾ ತಾಲೂಕುಗಳಲ್ಲೂ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನ ಸರ್ಕಾರದ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಬುಧವಾರ ಸಚಿವರು ಬರುತ್ತಾರೆ ಅನ್ನೋ ಮಾಹಿತಿ ಇದೆ. ಮುಂದೆ ಏನಾಗುತ್ತದೆ ಎಂದು ನೋಡೋಣ. ಹೋರಾಟ ಕೈಮೀರಿ ಹೋಗಬಾರದು ಅನ್ನೋದಾದ್ರೆ, ರೈತರ ಆಕ್ರೋಶವನ್ನು ಅರ್ಥ ಮಾಡಿಕೊಳ್ಳಿ. ಈಗಲೇ ಸ್ಪಂದನೆ ಮಾಡಲು ಸಚಿವರು ಸ್ಥಳಕ್ಕೆ ಬಂದರೆ ಒಳ್ಳೆಯದಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

