Thursday, May 1, 2025

Latest Posts

ಆರ್ಥಿಕ ಹೊಡೆತಕ್ಕೆ ತತ್ತರಿಸಿದ ಮಹಾ ಸರ್ಕಾರದಿಂದ ಗ್ಯಾರಂಟಿಗೆ ಕತ್ತರಿ : ಲಾಡ್ಕಿ ಬಹಿನ್‌ ಹಣ ಇನ್ಮುಂದೆ ಶ್ರೀಮಂತರಿಗಿಲ್ಲ

- Advertisement -

National Political News: ರಾಜ್ಯ ಸರ್ಕಾರದ ಮಾದರಿಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವ ಮಹಾರಾಷ್ಟ್ರದಲ್ಲಿ ಇದೀಗ ಜನಪ್ರಿಯ ಲಾಡ್ಕಿ ಬಹಿನ್‌ ಯೋಜನೆಗೆ ಮಿತಿಯನ್ನು ವಿಧಿಸಲು ಅಲ್ಲಿನ ಮಹಾಯುತಿ ಸರ್ಕಾರ ಮುಂದಾಗಿದೆ. ಆರಂಭದಲ್ಲಿ ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಇದರ ಮುಖ್ಯ ಗುರಿಯಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿತ್ತು.

ಇನ್ನೂ ರಾಜ್ಯದ 21ರಿಂದ 65 ವಯಸ್ಸಿನ ಎಲ್ಲಾ ಮಹಿಳೆಯರಿಗೆ ಮಾಸಿಕ 1,500 ರೂಪಾಯಿಗಳನ್ನು ನೀಡುವ ಈ ಯೋಜನೆಯನ್ನು 2024ರ ಜುಲೈನಲ್ಲಿ ಆರಂಭಿಸಲಾಗಿತ್ತು. ಅಲ್ಲದೆ ಪ್ರಮುಖವಾಗಿ ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಈ ಯೋಜನೆಯು ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಈ ಮೊದಲು ರಾಜ್ಯದ ಎಲ್ಲ ವರ್ಗದ ಮಹಿಳೆಯರಿಗೂ ಅನ್ವಯವಾಗುತ್ತಿದ್ದ ಈ ಯೋಜನೆಯ ಹಣವನ್ನು ಇದೀಗ ಕೇವಲ ಬಡ ಮಹಿಳೆಯರಿಗೆ ಮಾತ್ರ ನೀಡುವುದಾಗಿ ವಿತ್ತ ಸಚಿವ ಹಾಗೂ ಡಿಸಿಎಂ ಅಜಿತ್‌ ಪವಾರ್‌ ಘೋಷಿಸಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ನಮ್ಮಲ್ಲಿನ ಅವಸರ ಹಾಗೂ ಗೊಂದಲಗಳ ಕಾರಣದಿಂದ ಅನೇಕ ಜನ ಆರ್ಥಿಕವಾಗಿ ಸ್ಥಿತಿವಂತರಿದ್ದವರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ ನಮ್ಮ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಮಹತ್ವದ ಯೋಜನೆಯಾಗಿರುವ ಲಾಡ್ಕಿ ಬಹಿನ್‌ ಯೋಜನೆಯು ಬಡ ಮಹಿಳೆಯರಿಗಷ್ಟೇ ಸೀಮಿತವಾಗಿದ್ದು, ಇದರಲ್ಲಿ ಅಗತ್ಯ ಬದಲಾವಣೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಯಾವುದೇ ಕಾರಣಕ್ಕೂ ನಾವು ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವುದಿಲ್ಲ. ಈಗಾಗಲೇ ಯೋಜನೆಯಡಿ ಹಣ ಪಡೆದಿರುವವರು ಅದನ್ನು ಮರಳಿಸಬೇಕೆಂದು ನಾವು ಹೇಳುವುದಿಲ್ಲ. ನಾವು ಇದಕ್ಕಾಗಿ ಸಾಕಷ್ಟು ಹಣ ಒದಗಿಸುವ ಮೂಲಕ, ಬಡ ಸ್ತ್ರೀಯರು ಹಣ ಪಡೆಯುವಂತೆ ಮಾಡಲಿದ್ದೇವೆ. ಅಲ್ಲದೆ ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯಿಂದ 10 ಸಾವಿರ ಕೋಟಿ ರೂಪಾಯಿಗಳನ್ನು ಲಾಡ್ಕಿ ಬಹಿನ್‌ ಯೋಜನೆಗೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಪವಾರ್‌, ವಾರ್ಷಿಕ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಶೇ.40ರಷ್ಟು ಹಣವನ್ನು ಈ ಯೋಜನೆಗೆ ಬಳಸುತ್ತಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಲಾಡ್ಕಿ ಬಹಿನ್‌ಗೆ ಮಾಡಲಾದ ಖರ್ಚನ್ನು ಹೊರತುಪಡಿಸಿದರೂ ಸಹ ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿಧಿಯಲ್ಲಿ ಶೇ.18 ರಿಂದ 19ರಷ್ಟು ಏರಿಕೆಯಾಗಿದೆ ಎಂದು ಪವಾರ್‌ ವಿವರಿಸಿದ್ದಾರೆ.

ಮಹಾ ಸರ್ಕಾರದ ಮೇಲೆ 9.3 ಲಕ್ಷ ಕೋಟಿ ರೂಪಾಯಿ ಸಾಲ..

ಕರ್ನಾಟಕದ ರೀತಿ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿರುವ ಮಹಾರಾಷ್ಟ್ರ ಹಾಗೂ ತೆಲಂಗಾಣ ಸರ್ಕಾರಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗಿವೆ. ಮಹಾರಾಷ್ಟ್ರ ಸರ್ಕಾರದ ಮೇಲೆ ಇದೇ ಮೊದಲ ಬಾರಿ ದಾಖಲೆಯ ₹9.3 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಬಿದ್ದಿದ್ದು, 2026-27ನೇ ಸಾಲಿನಲ್ಲಿ 45,891 ಕೋಟಿ ರೂಪಾಯಿಗಳ ಆದಾಯದ ಕೊರತೆಯನ್ನು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿತ್ತು. ಹೀಗಾಗಿ ರೈತರ ಸಾಲಮನ್ನಾಗೆ ತಡೆ ಹಾಗೂ ಮಹಿಳೆಯರಿಗೆ ನೀಡುತ್ತಿದ್ದ ತಿಂಗಳ ಮಾಶಾಸನಕ್ಕೆ ಮಿತಿ ಹಾಕಲಾಗಿದೆ.

ಮಹಿಳೆಯರಿಗೆ ಅರ್ಧ ದರದಲ್ಲಿ ಬಸ್‌ ಟಿಕೆಟ್‌, ಮಹಿಳೆಯರಿಗೆ ಮಾಸಾಶನ ಸೇರಿ ಸಾಕಷ್ಟು ಪುಕ್ಕಟೆ ಯೋಜನೆ ಭರವಸೆ ನಿಡಿದ್ದ ಮಹಾರಾಷ್ಟ್ರದಲ್ಲಿ ಸಾಲದ ಪ್ರಮಾಣ ಹೆಚ್ಚಳ ಹಾಗೂ ಆದಾಯ ಕೊರತೆ ಉಂಟಾಗಿದೆ. ಹೀಗಾಗಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಮಹತ್ವಾಕಾಂಕ್ಷೆಯ ಚುನಾವಣೆ ಘೋಷಣೆಗಳಿಗೆ ನಿರೀಕ್ಷಿತ ಹಣ ಲಭಿಸಿಲ್ಲ.

ಮುಖ್ಯಮಂತ್ರಿ ಲಾಡ್ಕಿ ಬಹಿನ್‌ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ ನೀಡುವ 1500 ರಿಂದ 2100 ರೂಪಾಯಿಗಳಿಗೆ ಏರಿಸುವ ಹಾಗೂ ರೈತರ ಸಾಲಮನ್ನಾ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಲಡ್ಕಿ ಬಹಿನ್‌ ಯೋಜನೆಯ ₹10 ಸಾವಿರ ಕೋಟಿ ರೂಪಾಯಿ ಕಡಿತ ಮಾಡಿ 36 ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಲಾಗಿದೆ. ಅದರ ಬದಲು ಹಾಲಿ ಯೋಜನೆಗಳಿಗೆ ಆದ್ಯತೆ ನೀಡಿ, ಸಾಲ ಮತ್ತು ವಿತ್ತೀಯ ಕೊರತೆಯು ನಿಗದಿಪಡಿಸಿದ ಮಿತಿಯೊಳಗಿರುವಂತೆ ನೋಡಿಕೊಳ್ಳಲು ದೇವೇಂದ್ರ ಫಡ್ನವೀಸ್‌ ನೇತೃತ್ವದ ಮಹಾಯುತಿ ಸರ್ಕಾರ ನಿರ್ಧರಿಸಿದೆ.

- Advertisement -

Latest Posts

Don't Miss