Spiritual: ಮಧ್ಯಪ್ರದೇಶದ ಖಜುರಾಹೋ ಎಂಬ ಪ್ರಸಿದ್ಧ ಸ್ಥಳದಲ್ಲಿ ಮತಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಶಿವಲಿಂಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇನ್ನು 100 ವರ್ಷ ತುಂಬುವುದರೊಳಗೆ, ಆ ಶಿವಲಿಂಗ, ದೇವಸ್ಥಾನದ ಮೇಲ್ಛಾವಣಿ ಮೀರಿ ಬೆಳೆಯುವ ಸಾಧ್ಯತೆ ಇದೆ. ಪ್ರತೀ ಎರಡರಿಂದ ಮೂರು ವರ್ಷಕ್ಕೊಮ್ಮೆ ಈ ಶಿವಲಿಂಗ 1 ಇಂಚು ಬೆಳೆಯುತ್ತದೆ. ಸದ್ಯ ಈ ಶಿವಲಿಂಗ 8ರಿಂದ 9 ಇಂಚು ದೊಡ್ಡದಾಗಿ ಬೆಳೆದಿದೆ.
ಛತ್ತೀಸ್‌ಘಡದ ಅಂಬಿಕಾಪುರ ಜಿಲ್ಲೆಯಲ್ಲಿ ಒಂದು ಹನುಮನ ದೇವಸ್ಥಾನವಿದೆ. ಆ ದೇವಸ್ಥಾನದಲ್ಲಿಯೂ ಹನುಮನ ಮೂರ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಹನುಮನ ಮೂರ್ತಿ ಭಕ್ತನ ಕೈಗೆ ಸಿಕ್ಕ ಕಥೆಯೇ ಬಲು ರೋಚಕವಾಗಿದೆ. ಒಂದು ದಿನ ಅದೇ ಊರಿನ ಹನುಮನ ಭಕ್ತನಿಗೆ ಒಂದು ಕನಸು ಬಿದ್ದಿತ್ತು. ಆ ಕನಸಿನಲ್ಲಿ ಬಂದ ಹನುಮ, ನಾನು ಈ ಮರದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ಬೇಗ ನನ್ನನ್ನು ಈ ಮರದಿಂದ ಹೊರತೆಗೆ ಎಂದು ಹೇಳಿದನಂತೆ.
ಮರುದಿನ ಕೊಡಲಿ ಹಿಡಿದು, ಮರ ಹುಡುಕುತ್ತಾ ಹೋದಾಗ, ಹನುಮ ಹೇಳಿದ ಸ್ಥಳದಲ್ಲಿ ಅಂಥದ್ದೊಂದು ಮರ ಆ ಭಕ್ತನಿಗೆ ಕಂಡಿತ್ತು. ಆ ಭಕ್ತ ಮರ ಕಡಿಯುವಾಗ, ಸ್ಥಳೀಯರು ಬಂದು, ಮರು ಕಡಿಯಲು ಕಾರಣವೇನು ಎಂದು ಕೇಳಿದಾಗ, ಇದರಲ್ಲಿ ಹನುಮ ಸಿಲುಕಿಕೊಂಡಿದ್ದಾನೆ. ನನ್ನನ್ನು ಬೇಗ ಹೊರತೆಗಿ ಎಂದು ನಿನ್ನೆ ನನ್ನ ಕನಸಿನಲ್ಲಿ ಬಂದು ಹೇಳಿದ್ದ. ಹಾಗಾಗಿ ಮರ ಕಡಿಯುತ್ತಿದ್ದೇನೆ ಎಂದು ಹೇಳುತ್ತಾನೆ.
ಆತನ ಮಾತು ಕೇಳಿ, ಸ್ಥಳೀಯರು ನಕ್ಕರು, ಆತನ ಮೇಲೆ ಕೋಪಗೊಂಡು ಬೈದರು, ನೀನು ಈ ಮರ ಕಡಿದು ಇದರಲ್ಲಿ ಹನುಮನ ಮೂರ್ತಿ ಸಿಗದಿದ್ದರೆ, ನಿನಗೆ ಕಠಿಣ ಶಿಕ್ಷೆ ಕೊಡುತ್ತೇವೆ ಎಂದರು. ಅದನ್ನೊಪ್ಪಿದ ಹನುಮನ ಭಕ್ತ, ಮತ್ತೆ ಮರ ಕಡಿಯಲು ಶುರು ಮಾಡಿದ. ಸೂಕ್ಷ್ಮ ರೀತಿಯಲ್ಲಿ ಮರ ಕಡಿದು, ಮಧ್ಯ ಭಾಗವನ್ನು ನಿಧಾನ ಗತಿಯಿಂದ ಕಡಿಯಲು ಶುರು ಮಾಡಿದಾಗ, ನಿಜವಾಗಿಯೂ ಅಲ್ಲೊಂದು ಹನುಮನ ಮೂರ್ತಿ ಇತ್ತು.
ಜನರಿಗೆ ಈ ಘಟನೆ ಕಂಡು ಆಶ್ಚರ್ಯವಾಯಿತು. ಬಳಿಕ, ಆ ಹನುಮನಿಗೆ ಅಲ್ಲೇ ಒಂದು ದೇವಸ್ಥಾನ ಕಟ್ಟಿ ಪ್ರತಿದಿನ ಪೂಜೆ ಮಾಡಲು ಆರಂಭಿಸಲಾಯಿತು. ಆ ಹನುಮನ ಮೂರ್ತಿ ಕೂಡ ವರ್ಷ ವರ್ಷ ದೊಡ್ಡದಾಗಿ ಬೆಳೆಯುತ್ತಿದೆ.