Saturday, July 27, 2024

Latest Posts

ಕನ್ನಡದ ಧ್ವಜ ಸುಟ್ಟವರ ವಿರುದ್ಧ, ಧ್ವನಿ ಎತ್ತಿದ ಕನ್ನಡದ ಕಲಾವಿದರು..!

- Advertisement -

ಕನ್ನಡದ ಧ್ವಜ, ಕನ್ನಡಿಗರ ಹೆಮ್ಮೆ. ಸ್ವಾಭಿಮಾನದ ಪ್ರತೀಕ ಎಂದೇ ಹೇಳಬಹುದು. ಇಂತಹ ಅನೇಕ ಭಾವನೆಗಳನ್ನು ಹೊಂದಿರುವ ಕನ್ನಡದ ಧ್ವಜವನ್ನು ಕೆಲ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಈ ವಿಷಯ ಗಮನ ಬರುತ್ತಿದ್ದಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲು ಮುಖ್ಯವಾಗಿ ಸ್ಯಾಂಡಲ್‌ವುಡ್‌ನ ಕಲಾವಿದರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ದರ್ಶನ್, ಜಗ್ಗೇಶ್, ಶಿವರಾಜ್‌ಕುಮಾರ್, ಗಣೇಶ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್, ವಿನೋದ್ ಪ್ರಭಾಕರ್, ಮೇಘನ ಗಾವ್ಕಂರ್, ಸೇರಿದಂತೆ ಹಲವು ಕಲಾವಿದರು ಆಕ್ರೋಶ ಹೊರ ಹಾಕಿದ್ದಾರೆ.

ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್‌ನ ಕೆಲವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿರುವ ಕೆಲವು ಎಂಇಎಸ್ ಬೆಂಬಲಿಗರು, ”ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ” ಎಂದು ಬರೆದುಕೊಂಡಿದ್ದಾರೆ.

ಕನ್ನಡದ ಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಡಿಸೆಂಬರ್ ೧೩ ರಂದು ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್‌ನವರು ಪ್ರತಿಭಟನಾ ರ‍್ಯಾಲಿ ಮಾಡಿ ತಿಲಕ್‌ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು. ಪೊಲೀಸರು ಅಂತೆಯೇ ದೂರು ಸ್ವೀಕರಿಸಿ, ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ಹಾಗೂ ಇನ್ನಿಬ್ಬರನ್ನು ಬಂದಿಸಿದ್ದರು.

ಕನ್ನಡದ ಧ್ವಜವನ್ನು ಸುಟ್ಟುಹಾಕಿರುವ ವಿರುದ್ದ ಬಾರಿ ಆಕ್ರೋಶ ವ್ಯಕ್ತವಾಗಿದ್ದು ಸ್ಯಾಂಡಲ್‌ವುಡ್‌ನ ಕಲಾವಿದರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ.
ಕನ್ನಡ ಧ್ವಜ ಸುಟ್ಟವರ ವಿರುದ್ಧ ನಟ ಶಿವರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಧ್ವಜವನ್ನು ಸುಟ್ಟವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ”ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ” ಎಂದು ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬೆಳಗಾವಿ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಒತ್ತಾಯ ಮಾಡಿದ್ದಾರೆ. ಟ್ವೀಟ್‌ಗೆ ಡಾ ರಾಜ್‌ಕುಮಾರ್ ಅವರು ಒಂದು ಕೈಯಲ್ಲಿ ಕನ್ನಡದ ಧ್ವಜ ಹಿಡಿದ ಚಿತ್ರ ಹಾಗೂ ಮತ್ತೊಂದು ಕೈಯಲ್ಲಿ, ”ಆಳ್ ಕನ್ನಡ ತಾಯ್, ಬಾಳ್ ಕನ್ನಡ ತಾಯ್” ಎಂಬ ಸಾಲು ಬರೆದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ನಟ ಜಗ್ಗೇಶ್ ಸಹ ಇಂದು ಬೆಳಿಗ್ಗೆ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದರು. ”ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ. ಹಾಗೂ ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟ್ವೀಟ್ ಮಾಡಿ ಒತ್ತಾಯ ಮಾಡಿದ್ದರು.

ನಟ ದರ್ಶನ್ ಸಹ ಇಂದು ಇದೇ ವಿಷಯವಾಗಿ ಟ್ವೀಟ್ ಮಾಡಿ ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
ದುನಿಯಾ ವಿಜಯ್ ಟ್ವೀಟ್ ಮಾಡಿ ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ.
ರಿಷಬ್ ಶೆಟ್ಟಿ ಟ್ವೀಟ್ ಮಾಡಿ ನಮ್ಮ ಕರುನಾಡ ಧ್ವಜ ಸುಟ್ಟು, ಕನ್ನಡ ತಾಯಿ, ತಾಯ್ನಾಡಿಗೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಕನ್ನಡಪರ ಹೋರಟಗಾರರನ್ನ ಬಿಡುಗಡೆ ಮಾಡಬೇಕಾಗಿ ವಿನಂತಿ ಮಾಡಿದ್ದಾರೆ.

- Advertisement -

Latest Posts

Don't Miss