Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಸಿಬಿಐ ತನಿಖೆ ವಾಪಸ್ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇದು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ. ದೇಶದಲ್ಲಿ ನಾಯಾಂಗ ವ್ಯವಸ್ಥೆ ಇದೆ. ಸರ್ಕಾರದ ನಿರ್ಣಯಗಳ ವಿರುದ್ಧವಾಗಿಯೂ ನ್ಯಾಯಾಲಯಗಳು ತೀರ್ಪು ನೀಡಿವೆ. ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಸ್ವತಂತ್ರವಾಗಿವೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆ. ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿ ವಾಪಸ್ ಪಡೆದಿರುವುದು ಸರಿಯಲ್ಲ. ಸಂಬಂಧಿಸಿದ ಏಜೆನ್ಸಿಗಳು ಆರೋಪ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಸಚಿವ ಸಂಪುಟದ ಈ ನಿರ್ಧಾರವನ್ನ ನ್ಯಾಯಾಲಯ ತಿರಸ್ಕರಿಸಲಿದೆ ಅನ್ನೋ ವಿಶ್ವಾಸವಿದೆ. ಡಿ.ಕೆ. ಶಿವಕುಮಾರ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತೆ. ಈಗಾಗಲೇ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ದೋಷಾರೋಪ ಪಟ್ಟಿ ಸಲ್ಲಿಕೆಯ ಹಂತದಲ್ಲಿರುವುದರಿಂದ ಟೆಕ್ನಿಕಲ್ ಗ್ರೌಂಡ್ಸ್ ಮೇಲೆ ಹೋಗೋದಿಲ್ಲ. ಒಂದುವೇಳೆ ಅದು ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಆದ್ರೆ ರಾಜಕೀಯ ಅಧಿಕಾರ ನಡೆಸೋದು ಸರಿಯಲ್ಲ. ಯಾವ ಸಂಪುಟದಲ್ಲಿ ಡಿ.ಕೆ.ಶಿ ಡಿಸಿಎಮ್ ಇದ್ದಾರೆ, ಆ ಸಂಪುಟದಿಂದ ಅವರನ್ನ ನಾಮಕೇವಾಸ್ತೇ ಒಂದು ದಿನ ಹೊರಗೆ ಇಟ್ಟು ಶಿಫಾರಸ್ಸು ವಾಪಸ್ ಪಡೆಯುವುದರ ಅರ್ಥವೇನು ? ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಅನ್ನೋದು ಸ್ಪಷ್ಟವಾಗುತ್ತೆ ಎಂದು ಜೋಶಿ ಹೇಳಿದ್ದಾರೆ.
ಜಾತಿ ಜನಗಣತಿ ವರದಿ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಕಾಂಗ್ರೆಸ್ ಸರ್ಕಾರದಲ್ಲೇ ಗೊಂದಲವಿದೆ. ಜಾತಿ ಜನಗಣತಿ ವಿಚಾರದಲ್ಲಿ ದೊಡ್ಡ ಪ್ರಮಾಣದ ಗೊಂದಲ ಸೃಷ್ಟಿಯಾಗುತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಜಾತಿ ಜನಗಣತಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಕೆಲಸವನ್ನ ನಾವು ಮಾಡುತ್ತೇವೆ ಅಂತಾ ರಾಜ್ಯ ಸರ್ಕಾರ ಹೇಳುತ್ತಿದೆ. ಜಾತಿ ಜನಗಣತಿ ವರದಿಯ ಪತ್ರ ಮಾಯವಾಗಿದೆ ಅಂತಾ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರದಲ್ಲೇ ಸಹಮತವಿಲ್ಲ. ಡಿ.ಕೆ.ಶಿವಕುಮಾರ, ಶಾಮನೂರು ಶಿವಶಂಕರಪ್ಪ ಮೊದಲಾದವರಿಂದ ವಿರೋಧವಿದೆ. ಈ ಕುರಿತು ವರದಿ ಜಾರಿಯಾಗಬಾರದೆಂಬ ವಿರೋಧ ಅವರಲ್ಲೇ ಇದೆ. ಸರ್ಕಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಇರುವಾಗ ವರದಿ ಹೇಗೆ ಸಲ್ಲಿಸುತ್ತಾರೆ ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಕೆಲ ಶಾಸಕರನ್ನ ಎತ್ತಿಕಟ್ಟಿ ಸಿಎಂ ಸಿದ್ದರಾಮಯ್ಯ ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಜನರ ಹಿತದೃಷ್ಟಿಯಿಂದ ಸರ್ಕಾರ ಸರಿಯಾಗಿ ನಡೆಸಬೇಕು. ಆದ್ರೆ ಸಿದ್ಧರಾಮಯ್ಯ 20 ಶಾಸಕರನ್ನ ಮೈಸೂರಿಗೆ ಕಳಿಸುವ ಪ್ರಯತ್ನ ಮಾಡಿದ್ರು. ಸದ್ಯ ಹಲವು ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಜನ ಐದು ವರ್ಷ ಅಧಿಕಾರ ನೀಡಿದ್ದು ಗೊಂದಲಗಳಿಲ್ಲದೇ ಕೆಲಸ ಮಾಡಲು. ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮಗಳು ನಿಂತು ಹೋಗಿವೆ. ಬಹಳಷ್ಟು ಭಾಗದಲ್ಲಿ ಸಚಿವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿತ ಕಂಡಿದೆ. ಸರ್ಕಾರ ಈ ನ್ಯೂನ್ಯತೆಗಳನ್ನ ಸರಿಪಡಿಸಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿಯವರನ್ನ ಅಪಶಕುನ ಎಂಬ ರಾಹುಲ್ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದಿರೋದೇ ಉತ್ತಮ. ಅವರು ಯಾವ ಕೀಳುಮಟ್ಟಕ್ಕೆ ಇಳಿಯುತ್ತಾರೆ ಅನ್ನೋದಕ್ಕೆ ಈ ಹೇಳಿಕೆಯೇ ಸಾಕ್ಷಿ. ರಾಹುಲ್ ಗಾಂಧಿಗೆ ಹೊಸ ವಿಷಯ ಬರೆದುಕೊಡೋವರೆಗೂ ಅವರು ಏನೇನೋ ಮಾತನಾಡುತ್ತಾರೆ. ದೇಶದಲ್ಲಷ್ಟೇ ಅಲ್ದೇ ಇಡೀ ವಿಶ್ವದಲ್ಲಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು, ಮೋದಿಯವರ ಮೇಲೆ ಜನಾಶೀರ್ವಾದ ಹೆಚ್ಚಾಗುತ್ತೆ ಎಂದು ಜೋಶಿ ಹೇಳಿದ್ದಾರೆ.
ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ