Dharwad News: ಧಾರವಾಡದಲ್ಲಿ ಓರ್ವ ತಾಯಿ ತನ್ನ ಮಗುವಿನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾಳೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಯಲ್ಲಪ್ಪ ಫಕ್ಕೀರ ನಾಯಕರ ಎಂದು 3 ವರ್ಷ ಬಾಲಕ, ನವೆಂಬರ್ 8ರಂದು ಸಾವನ್ನಪ್ಪಿದ್ದ.
ಮನೆಯ ಪಕ್ಕದಲ್ಲಿ ಆಟವಾಡುವಾಗ ಕಬ್ಬಿಣದ ರಾಡ್ ಬಿದ್ದು ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿತ್ತು. ಅದನ್ನೇ ನಂಬಿದ ಕುಟುಂಬ ಮಗುವಿನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಮಗು ತಂದೆ ತಾಯಿಯ ಕಣ್ಣೆದುರಿಗೆ ಸಾವನ್ನನಪ್ಪಿರಲಿಲ್ಲ. ಬದಲಾಗಿ ನಾಗಲಿಂಗ ಎಂಬ ವ್ಯಕ್ತಿ ಮಗುವಿನ ಸಾವಿನ ಸುದ್ದಿಯ ಬಗ್ಗೆ ಹೇಳಿದ್ದ.
ಆದರೆ ಘಟನೆ ನಡೆದು 7 ದಿನಗಳವರೆಗೆ ಪಕ್ಕದ ಮನೆಯ ನಾಗಲಿಂಗ ನಾಪತ್ತೆಯಾಗಿದ್ದ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಗುವಿನ ತಾಯಿ, ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಪ್ರಾರಂಭಿಸಿದ್ದಾರೆ.
ಅಂತ್ಯಸಂಸ್ಕಾರ ಮಾಡಿದ ಜಾಗದಿಂದ ಮಗುವಿನ ಶವವನ್ನು ಹೊರತೆಗೆದು, ಶವ ಪರೀಕ್ಷೆ ನಡೆಸಬೇಕು ಎಂದು ಮೃತ ಬಾಲಕನ ತಾಯಿ ಒತ್ತಾಯಿಸಿದ್ದು, ಅದರಂತೆ ಅಂತ್ಯಸಂಸ್ಕಾರ ಮಾಡಿದ್ದ ಸ್ಥಳದಿಂದ ಮಗುವಿನ ದೇಹವನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಯೂ ಮಾಡಲಾಗಿದೆ.
ಸ್ಥಳದಲ್ಲಿ ನವಲಗುಂದ ತಹಶಿಲ್ದಾರ ಸಾಹುಕಾರ, ಪಿಎಸ್ಐ, ಸಮ್ಮುಖದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಸದ್ಯ ಬಾಲಕನ ಕುಟುಂಬ ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದು, ಇದು ಸಹಜ ಸಾವೋ ಅಥವಾ ಕೊಲೆಯೋ ಮರಣೋತ್ತರ ಪರೀಕ್ಷೆಯಿಂದ ಹೋರ ಬರ ಬೇಕಾಗಿದೆ.