Saturday, December 7, 2024

Latest Posts

ಚಿತ್ರ ವಿಮರ್ಶೆ: ನಂಬಿಕೆ-ಕಂಬನಿಗೆ ಭೈರತಿ ರಣಗಲ್ ಕಾವಲಿಗ!

- Advertisement -

Sandalwood News:
ಚಿತ್ರ : ಭೈರತಿ ರಣಗಲ್
ನಿರ್ದೇಶನ: ನರ್ತನ್
ನಿರ್ಮಾಣ: ಗೀತಾ ಶಿವರಾಜಕುಮಾರ್
ತಾರಾಗಣ: ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸೆ, ಛಾಯಾಸಿಂಗ್, ಅವಿನಾಶ್, ಗೋಪಾಲ್ ಕೃಷ್ಣ ದೇಶಪಾಂಡೆ ಇತರರು.

ರೇಟಿಂಗ್ 5/3.5

ನಾನ್ ತಾಳ್ಮೆ ಕಳಕೊಂಡಾಗೆಲ್ಲ ತುಂಬ ಜನ ತಲೆಗಳನ್ನು ಕಳ್ಕೊಂಡಿದ್ದಾರೆ… ಜನರಿಗೋಸ್ಕರ ನಾನ್ ಯಾರನ್ನ ಬೇಕಾದ್ರೂ ಕಳ್ಕೊತ್ತೀನಿ. ಆದರೆ ಜನರನ್ನೇ ಕಳಕ್ಕೊಳೋದಿಲ್ಲ…

ನಾಯಕ ಭೈರತಿ ರಣಗಲ್ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲಿ ರಾಶಿ ರಾಶಿ ಹೆಣಗಳು ಉರುಳಿರುತ್ತವೆ. ಅನ್ಯಾಯದ ವಿರುದ್ಧ ಹೋರಾಟಕ್ಕೆ ನಿಂತ ಭೈರತಿ, ಕ್ರಿಮಿನಲ್ ಗಳನ್ನು ಸದೆಬಡಿಯೋಕೆ ಕ್ರಿಮಿನಲ್ ಆಗಿಯೇ ಫೀಲ್ಡ್ ಗಿಳಿದಿರುತ್ತಾನೆ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಒಂದೇ ಮಾತಲ್ಲಿ ಹೇಳುವುದಾದರೆ ಇದೊಂದು ಆಕ್ಷನ್ ಪ್ಯಾಕ್ಡ್ ಸಿನಿಮಾ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಕಂಟೆಂಟ್ ಇಲ್ಲಿದೆ. ಆ ಕಾರಣಕ್ಕೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧದ ಆರಂಭದಲ್ಲಿ ನಿಧಾನಗತಿ ಎನಿಸುವ ಸಿನಿಮಾ, ಘಟನೆಯೊಂದರ ಬಳಿಕ ಹೊಸ ತಿರುವು ಪಡೆದುಕೊಂಡು ವೇಗ ಕಂಡುಕೊಳ್ಳುತ್ತದೆ. ದ್ವಿತಿಯಾರ್ಧ ಅಚ್ಚರಿಯ ಬೆಳವಣಿಗೆ ನಡುವೆ ಕುತೂಹಲದೊಂದಿಗೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಸಿನಿಮಾದಲ್ಲಿ ಹೈಲೆಟ್ ಅಂದರೆ ಚಿತ್ರಕಥೆ. ಕಥೆಗೆ ಪೂರಕವಾಗಿ ಸ್ಕ್ರೀನ್ ಪ್ಲೇ ಮೂಡಿಬಂದಿದೆ. ಹೀರೋ ಹರಿಬಿಡುವ ಡೈಲಾಗ್ ಕೂಡ ಸಿನಿಮಾದೊಳಗಿನ ಕಿಚ್ಚನ್ನು ಎಬ್ಬಿಸುತ್ತದೆ. ಇಲ್ಲಿ ಅಸಹಾಯಕತೆ ಇದೆ. ತಣ್ಣನೆಯ ಪ್ರೀತಿ ಇದೆ. ಕ್ರೌರ್ಯವಿದೆ. ನಂಬಿಕೆ ಇದೆ, ಮೋಸವಿದೆ, ಅನ್ಯಾಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಂಬನಿ ನೂರೆಂಟು ಕಥೆಗಳನ್ನು ಹೇಳುತ್ತಾ ಹೋಗುತ್ತೆ. ಹೀರೋ ಅನ್ಯಾಯದ ವಿರುದ್ಧ ನ್ಯಾಯದ ಧ್ವನಿ ಎತ್ತುತ್ತಾನೆ. ಅದ್ಯಾವುದೂ ವರ್ಕೌಟ್ ಆಗೋದಿಲ್ಲ. ಕೊನೆಗೆ ದಂಡಂ ದಶಗುಣಂ ಅನ್ನೋ ಮಂತ್ರಕ್ಕೆ ರೆಡಿಯಾಗುತ್ತಾನೆ. ಆಮೇಲೆ ನಡೆಯೋದೆಲ್ಲವೂ ಅದ್ಭುತ.

ಎಲ್ಲಾ ಸಿನಿಮಾಗಳಂತೆ ಇಲ್ಲೂ ಹೀರೋ ಜನಪರ ಹೋರಾಡುತ್ತಾನೆ. ಆದರೆ, ಹೀರೋ ಹೋರಾಡುವ ವಿಷಯ ಮಾತ್ರ ಅಲ್ಟಿಮೇಟ್. ಚಿತ್ರದಲ್ಲಿ ಮೇಕಿಂಗ್ ವಿಶೇಷ. ಸಿನಿಮಾ ಕಥೆಗೆ ತಕ್ಕಂತೆಯೇ ಚಿತ್ರಕಥೆ ವೇಗ ಕಂಡುಕೊಂಡಿದೆ. ಪ್ರತಿ ದೃಶ್ಯ ಕೂಡ ವಿಜೃಂಭಿಸಿದೆ. ಮುಖ್ಯವಾಗಿ ಇಲ್ಲಿ ಹೈಲೆಟ್ ಅಂದರೆ, ಆಕ್ಷನ್, ಹೀರೋ ಗನ್ ಮತ್ತು ಲಾಂಗ್ ಹಿಡಿದು ಹೊಡೆದಾಡುವ ದೃಶ್ಯಗಳು ನೋಡುವ ಒಂದು ವರ್ಗಕ್ಕೆ ಇಷ್ಟವಾಗದೇ ಇರದು. ಇಲ್ಲಿ ಡೈಲಾಗ್ ಮಜಾ ಕೊಡುತ್ತವೆ. ಕತ್ತರಿ ಪ್ರಯೋಗ ಕೂಡ ಸಿನಿಮಾವನ್ನು ಒಂದೇ ಗುಕ್ಕಿನಲ್ಲಿ ನೋಡಿಸಿಕೊಂಡು ಹೋಗುತ್ತೆ. ಕೆಲವು ಕಡೆ ಮೈನಸ್ ಎನಿಸುವ ಅಂಶಗಳಿವೆಯಾದರೂ, ಒಂದಷ್ಟು ಎಮೋಷನಲ್ ದೃಶ್ಯಗಳು ಅವೆಲ್ಲವನ್ನೂ ಮರೆಸುತ್ತೆ. ಎಲ್ಲೋ ಒಂದು ಕಡೆ ರಮೇಶ್ ಅರವಿಂದ್ ಅವರ ಹಿನ್ನೆಲೆ ಧ್ವನಿ ಸರಿ ಹೊಂದಿಲ್ಲ. ರಣಗಲ್ ಚರಿತ್ರೆಯ ಹಿನ್ನೆಲೆ ಹೇಳುವ ಧ್ವನಿಯಲ್ಲಿ ಖಡಕ್ ಇರಬೇಕಿತ್ತು. ಬೇರೆ ಗಟ್ಟಿ ಧ್ವನಿ ಇದ್ದಿದ್ದರೆ, ಸಿನಿಮಾ ಇನ್ನೂ ಮಜ ಎನಿಸುತ್ತಿತ್ತು. ಆದರೂ, ಆ ವಾಯ್ಸ್ ಪಕ್ಕಕ್ಕಿಟ್ಟು ನೋಡುವುದಾದರೆ, ಭೈರತಿಯ ಆಟ ಆದ್ಭುತ.

ಕಥೆ ಏನು?
ರೋಣಾಪುರ ಎಂಬ ಊರಲ್ಲಿ ಕುಡಿಯುವ ನೀರೀಗೂ ಪರದಾಡುವ ಜನ. ಕಿತ್ತು ತಿನ್ನುವ ಬಡತನ. ಬಾಲ್ಯದಲ್ಲೇ ಭೈರತಿ ರಣಗಲ್ ಅನ್ಯಾಯದ ವಿರುದ್ಧ ಸಿಡಿದೇಳುತ್ತಾನೆ. ಸರ್ಕಾರಿ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳಿಗೆ ಬಾಂಬ್ ಇಟ್ಟು ಹತ್ಯೆ ಮಾಡುತ್ತಾನೆ. ನಂತರ ಜೈಲುಪಾಲಾಗಿ, ಜೈಲಲ್ಲೇ ಕಾನೂನು ಓದುತ್ತಾನೆ. ಲಾಯರ್ ಆಗಿ ಹೊರಬರುವ ರಣಗಲ್, ಊರಿನ ಜನರ ಪರ ನಿಲ್ಲುತ್ತಾನೆ. ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇದ್ದಾಗ, ಕೈಯಲ್ಲಿ ಲಾಂಗ್ ಹಿಡಿಯುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದು ಸಸ್ಪೆನ್ಸ್.

ಯಾರು ಹೇಗೆ?

ಶಿವರಾಜಕುಮಾರ್ ಅವರ ವಯಸ್ಸಿಗೆ ತಕ್ಕಂತಹ ಪಾತ್ರ ಸಿಕ್ಕಿದೆ. ಅವರ ಪಂಚೆ,ಶರ್ಟ್ ಹೈಲೆಟ್. ಎಂದಿಗಿಂತಲೂ ಅವರ ಲುಕ್ ಮತ್ತು ಗತ್ತು ಇಲ್ಲಿ ಹೊಸದಾಗಿದೆ. ನಡೆಯೋ ಸ್ಟೈಲ್ ಹರಿಬಿಡುವ ಮಾತು, ನೋಡುವ ನೋಟ, ಖುಷಿ ಎನಿಸುವ ಬಾಡಿಲಾಂಗ್ವೇಜ್, ಹಿಡಿಯುವ ಲಾಂಗ್ ಮತ್ತು ಗನ್ ಎಲ್ಲವೂ ಹೊಸತೆನಿಸಿದೆ. ಸ್ಕ್ರೀನ್ ಮೇಲೆ ಅವರ ಅಬ್ಬರ ರಾರಾಜಿಸಿದೆ. ರುಕ್ಮಿಣಿ ವಸಂತ್ ಡಾಕ್ಟರ್ ಆಗಿ ಇಷ್ಟ ಆಗುತ್ತಾರೆ. ಛಾಯಾಸಿಂಗ್ ತಂಗಿಯಾಗಿ ಇರುವಷ್ಟು ಸಮಯ ಕಾಡುತ್ತಾರೆ. ರಾಹುಲ್ ಬೋಸೆ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಅವಿನಾಶ್ ಹೊಸ ಗೆಟಪ್ ಮೂಲಕ ಗಮನ ಸೆಳೆದರೆ, ಗೋಪಾಲಕೃಷ್ಣ ದೇಶಪಾಂಡೆ ಇಷ್ಟ ಆಗುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪ್ರತಿ ಪಾತ್ರಗಳೂ ನ್ಯಾಯ ಸಲ್ಲಿಸಿವೆ. ರವಿಬಸ್ರೂರ್ ಅವರಿಗೆ ಹಿನ್ನೆಲೆ ಸಂಗೀತಕ್ಕೆ ಒಳ್ಳೆಯ ಸ್ಕೋಪ್ ಸಿಕ್ಕಿದೆ. ಅಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ. ಉಳಿದಂತೆ ಎರಡು ಬಿಟ್ ಹಾಡು ಇದೆಯಾದರೂ, ಗುನುಗುವಂತಿಲ್ಲ. ನವೀನ್ ಕುಮಾರ್ ಅವರ ಕ್ಯಾಮೆರಾ ಕೈಚಳಕ ರಣಗಲ್ ರೋಚಕತೆಗೆ ಸಾಕ್ಷಿಯಾಗಿದೆ. ಆಕಾಶ್ ಹಿರೇಮಠ್ ಅವರ ಕತ್ತರಿ ಪ್ರಯೋಗ ಚಿತ್ರದ ವೇಗ ಹೆಚ್ಚಿಸಿದೆ.

ವಿಜಯ್ ಭರಮಸಾಗರ, ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss