Crime News: ಮಾಗಡಿ ಶಾಸಕ ಬಾಲಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಿಯಲ್ ಎಸ್ಟೆಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಆತನ ಶತ್ರುಗಳೇ ಅಥವಾ ರೌಡಿಶೀಟರ್‌ಗಳು ಮರ್ಡರ್ ಮಾಡಿರಹುದೆಂದು ಶಂಕಿಸಲಾಗಿತ್ತು. ಆದರೆ ಇದೀಗ ಪೊಲೀಸ್ ತನಿಖೆಯ ವೇಳೆ ಹೆಣ್ಣು ಕೊಟ್ಟ ಅತ್ತೆಯೇ ಅಳಿಯನ ಉಸಿರು ನಿಲ್ಲಿಸಿರುವ ವಿಚಾರ ಬಯಲಾಗಿದ್ದು, ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಅಂದಹಾಗೆ ಕಳೆದ ವಾರ ಮಾರ್ಚ್ 22ರಂದು ಹೆಸರುಗಟ್ಟ ಬಳಿ ಉದ್ಯಮಿ ಲೋಕನಾಥ್ ಸಿಂಗ್ ಕೊಲೆಯಾಗಿತ್ತು. ಇನ್ನೂ 2024ರ ಡಿಸೆಂಬರ್ ತಿಂಗಳಲ್ಲಿ ಲೋಕನಾಥ್ ಸಿಂಗ್ ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರ ಮಗಳು ಯಶಸ್ವಿನಿ ಜೊತೆ ಮದುವೆಯಾಗಿದ್ದರು. ವಯಸ್ಸಿನ ಅಂತರದ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ. ಆದರೆ ಅವಳ ಪೋಷಕರನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ಲೋಕನಾಥ್ ಸಿಂಗ್ ಮದುವೆಯಾಗಿದ್ದನು. ಈತನ ಕಾಟ ತಾಳಲಾರದೆ ಮರ್ಯಾದೆಗೆ ಹೆದರಿ ಹಾಗೂ ಮಗಳ ಭವಿಷ್ಯವನ್ನು ಗಮನಿಸಿ ಒಲ್ಲದ ಮನಸ್ಸಿನಿಂದ ಉದ್ಯಮಿ ಮದುವೆ ಮಾಡಿಕೊಟ್ಟಿದ್ದಾರೆ.
ಅಳಿಯನ ವರ್ತನೆಗೆ ನೊಂದಿದ್ದ ಹೇಮಾ..
ಆದರೆ ದಿನಕಳೆದಂತೆ ಲೋಕನಾಥ್ ಸಿಂಗ್ ಕುರಿತು ಒಂದೊಂದಾಗಿ ಸ್ಫೋಟಕ ವಿಚಾರಗಳು, ಅನೈತಿಕ ಸಂಬಂಧದ ಬಗ್ಗೆ ಹೆಂಡತಿ ಹಾಗೂ ಅವಳ ತಂದೆ, ತಾಯಿ ಗಮನಕ್ಕೆ ಬರಲು ಆರಂಭಿಸುತ್ತವೆ. ಇನ್ನೂ ಒಲ್ಲದ ಮನಸ್ಸಿನಿಂದ ಮಗಳ ಮದುವೆ ಮಾಡಿಕೊಟ್ಟಿದ್ದೇವೆ, ಆದರೆ ಅವಳ ಜೀವನ ಸಂಕಷ್ಟಕ್ಕೆ ಸಿಲುಕಿತಲ್ಲ ಎಂದು ಯಶಸ್ವಿನಿ ಪೋಷಕರು ಕೊರಗುತ್ತಿದ್ದರು. ಅದರೆ ಮಗಳಿಗೆ ನೀಡುತ್ತಿರುವ ಕಾಟ ಹಾಗೂ ಅಕ್ರಮ ಸಂಬಂಧದ ಬಗ್ಗೆ ವಿಚಾರಿಸಿದಾಗ ಅವರೊಂದಿಗೆ ಆತ ಗಲಾಟೆ ಮಾಡಿಕೊಳ್ಳುತ್ತಿದ್ದನು. ಲೋಕನಾಥನ ಈ ವರ್ತನೆಯಿಂದ ಮನನೊಂದಿದ್ದ ಯುವತಿಯ ತಂದೆ, ತಾಯಿ ಅಳಿಯನಿಗೆ ಮುಹೂರ್ತ ಫಿಕ್ಸ್ ಮಾಡೇ ಬಿಟ್ಟಿದ್ದರು.
ನಿದ್ದೆಯಲ್ಲಿಯೇ ಪರಲೋಕ ಸೇರಿದ್ದ ಲೋಕನಾಥ..
ಇನ್ನೂ ಕುಟುಂಬದಲ್ಲಿ ಹಲವು ದಿನಗಳಿಂದ ಮುಂದುವರೆದಿದ್ದ ಮುಸುಕಿನ ಗುದ್ದಾಟದ ನಡುವೆಯೇ ತಾಯಿ ಹೇಮಾ ಜೊತೆ ಮಗಳು ಹಾಗೂ ಅಳಿಯ ಬಿಜಿಎಸ್ ಲೇಔಟ್‌ಗೆ ಕಳೆದ ಮಾರ್ಚ್ 22ರಂದು ಬಂದಿದ್ದರು. ಅಲ್ಲದೆ ಲೋಕನಾಥ್ ಸಿಂಗ್‌ಗೆ ಸಂಬಂಧಿಸಿದ್ದ ಸ್ಥಳದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ-ಹೆಂಡತಿ ಹಾಗೂ ಅತ್ತೆ ಪಾರ್ಟಿ ಮಾಡಿದ್ದಾರೆ. ಅಂದಹಾಗೆ ಅತ್ತೆಯ ಪೂರ್ವ ಯೋಜನೆಯಂತೆಯೇ ಈ ವೇಳೆ ಜೊತೆಯಲ್ಲಿದ್ದ ಲೋಕನಾಥ್ ಗನ್ ಮ್ಯಾನ್‌ಗೆ ಹೊರಹೋಗಲು ತಿಳಿಸಿದ್ದಾಳೆ. ಇನ್ನೂ ಪಾರ್ಟಿಯಲ್ಲಿ ಎಣ್ಣೆ ಹೊಡೆದು ಮತ್ತಿನಲ್ಲಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿಬಿಟ್ಟಿದ್ದಳು. ಅಲ್ಲದೆ ಹೀಗೆ ಮಾತ್ರೆ ಬೆರೆಸಿದ್ದ ಆಕೆ, ಯಾವಾಗ ಅಳಿಯ ನಿದ್ರೆಗೆ ಜಾರುತ್ತಾನೆ ಎಂದು ಕಾಯುತ್ತಿದ್ದಳು. ಅಂತಿಮವಾಗಿ ಲೋಕನಾಥ್ ಸಿಂಗ್ ಮಲಗಿದ ಬಳಿಕ ಹರಿತವಾದ ಆಯುಧದಿಂದ ಅತ್ತೆ, ಅಳಿಯನ ಕುತ್ತಿಗೆ ಸೀಳುವ ಮೂಲಕ ಅವನ ಖೇಲ್ ಖತಂ ಮಾಡಿದ್ದಾಳೆ. ಮೊದಲೇ ಮಾತ್ರೆಯಿಂದ ನಿದ್ದೆಯಲ್ಲಿದ್ದ ಲೋಕನಾಥ್ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ. ಇನ್ನೂ ಪ್ರಕರಣ ಕೈಗೆತ್ತಿಕೊಂಡ ಸೋಲದೇವನಹಳ್ಳಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಅಂತಿಮವಾಗಿ ಕೊಲೆಗಡುಕ ಅಮ್ಮ- ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ನಲ್ಲಿ.. ಸಮಾಜದಲ್ಲಿ ದಿನಕ್ಕೊಂದರಂತೆ ಅಪರಾಧಗಳು ನಡೆಯುತ್ತಲೇ ಇವೆ. ಅದರಲ್ಲಿ ಪ್ರಿಯಕರ ಪ್ರಿಯತಮೆಯ ಕೊಲೆ ಮಾಡುವುದು, ಪ್ರಿಯತಮೆ ಪ್ರಿಯಕರನ ಉಸಿರು ನಿಲ್ಲಿಸುವುದು, ಗಂಡ ಹೆಂಡತಿಗೆ ಹಾಗೂ ಹೆಂಡತಿ ಗಂಡನ ಚಟ್ಟ ಕಟ್ಟುವುದು ಈ ರೀತಿಯ ಕೇಸ್‌ಗಳನ್ನು ನಾವು ನೋಡುತ್ತಿರುತ್ತೇವೆ. ಆದರೆ ಅದಕ್ಕೆಲ್ಲ ವಿಭಿನ್ನವಾಗಿಯೇ ಈ ಕೇಸ್ ಇದ್ದು ಎಲ್ಲರೂ ದಂಗಾಗುವಂತೆ ಮಾಡಿದೆ. ಅಲ್ಲದೆ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಅಂತ ಹೇಳಿದರೂ ಸಹ ಬ್ಲಾಕ್‌ಮೇಲ್ ಮಾಡಿ ವರಿಸಿದ್ದ ಅಳಿಯ ಒಂದು ಕಡೆಯಾದರೆ, ಇನ್ನೂ ನಮ್ಮ ಕೈಯ್ಯಾರೇ ಮಗಳ ಜೀವನಕ್ಕೆ ಕೊಳ್ಳಿ ಇಟ್ಟಿವಲ್ಲಾ ಅನ್ನೋ ತಂದೆ ತಾಯಿ ಇನ್ನೊಂದೆಡೆ. ಇದರ ಮಧ್ಯೆ ತಾಳಿ ಕಟ್ಟಿದ್ದ ಗಂಡನ ಕೊಲೆಗೆ ತಾಯಿಯ ಜೊತೆ ಕೈಜೋಡಿಸಿರುವ ಮಗಳು ಮಗದೊಂದು ಕಡೆ ಈ ಎಲ್ಲವನ್ನು ನೋಡಿದಾಗ ಯಾರ ಮನಸ್ಥಿತಿ ಹೇಗಿತ್ತು ಅನ್ನೋದು ನಿಜಕ್ಕೂ ನಿಗೂಢ!.. ಅದೇನೆ ಇರಲಿ.. ಮಗಳ ಸಂತೋಷದ ಜೀವನವನ್ನು ಕಣ್ತುಂಬ ನೋಡಿ ಆನಂದಿಸಬೇಕಿದ್ದ ತಾಯಿಯೇ ಅಳಿಯನ ಉಸಿರು ನಿಲ್ಲಿಸುವುದರ ಮೂಲಕ ಮಗಳ ಬದುಕಿನಲ್ಲಿ ಆಟ ಆಡಿದ್ದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ..!